ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪ್ರವೀಣ್ ಕುಮಾರ್ ಕೆ. ಸಂಪಾದಕರಾಗಿ, ಸುದರ್ಶನ್ ಬಿ.ಪ್ರವೀಣ್ ಮಾಲಕರಾಗಿ, ಚಿತ್ರಕಲಾ ಎ ಆರ್ ಇವರು ಪ್ರಕಾಶಕರು ಹಾಗೂ ಮುದ್ರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಎ ಜೆ ಇಕೋ ಪ್ರೊಜೆಕ್ಟ್, ಧಾರವಾಡ ಇಲ್ಲಿ ಮುದ್ರಿತವಾಗುತ್ತಿದೆ. ಬೆಳಲು, ಬೆಳ್ತಂಗಡಿಯಲ್ಲಿ ಕಚೇರಿಯನ್ನು ಹೊಂದಿದೆ. ಪತ್ರಿಕೆಯಲ್ಲಿ ರಾಜ್ಯಾದ್ಯಂತ ವಾರವಿಡೀ ಜರುಗಿದ ಮುಖ್ಯ ಘಟನೆಗಳ ವಿವರ, ಸಭೆ ಸಮಾರಂಭಗಳ ವಿವರಗಳಿವೆ. ಮಿಡ್ಲ್ ಪೇಜ್ ಮೆಲೊಡಿಯಲ್ಲಿ ಮಹಾಭಾರತದ ಪ್ರಸಂಗ, ಟೆಕ್ಕಿ ಮಾಡಿದ ಬಾಳೆ ಕೃಷಿ, ಅಂಕದ ಕೋಳಿಗಳ ರೋಚಕ ಜಗತ್ತು, ಸ್ತ್ರೀಯರೇ ಇಲ್ಲದ ಬರಗೆಟ್ಟ ಊರು, ಸಾಯೋವರೆಗೆ ಸೆಕ್ಸ್ ಮಾಡುತ್ತೆ ಈ ಪ್ರಾಣಿ, ಇಂಟ್ರೆಸ್ಟಿಂಗ್ ಹಿಸ್ಟರಿ ಮೊದಲಾದ ಲೇಖನಗಳಿವೆ. ಇದಲ್ಲದೇ ವಾರದ ವಿಶೇಷ ಪುಟದಲ್ಲಿ ಕರಾವಳಿಯ ಅನ್ನದ ಬಟ್ಟಲು : ವಿದೇಶಕ್ಕೆ ಹಾರಿದ ಅಡಿಕೆ ಹಾಳೆ ತಟ್ಟೆ ಎನ್ನುವ ಸವಿಸ್ತಾರವಾದ ಲೇಖನವಿದೆ. ಸಂಪಾದಕರು ‘ಫೋಕಸ್’ ಎನ್ನುವ ಹೆಸರಿನಲ್ಲಿ ಸಂಪಾದಕೀಯ ಬರೆಯುತ್ತಾರೆ. ಸುದರ್ಶನ್ ಬೆಳಾಲು, ಬಿ ಎ ಲೋಕಯ್ಯ ಶಿಶಿಲ, ಪ್ರಬಂಧ ಅಂಬುತೀರ್ಥ ಮೊದಲಾದ ಲೇಖಕರು ತನ್ನ ಬರಹಗಳಿಂದ ಹೊಸ ಕನ್ನಡದ ಪುಟಗಳನ್ನು ತುಂಬಿಸಿದ್ದಾರೆ. ಸಿನೆಮಾ ಸುದ್ದಿಯನ್ನು ಕೊನೆ ಪುಟದಲ್ಲಿ ಕೊಟ್ಟಿದ್ದಾರೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೭.೦೦, ವಾರ್ಷಿಕ ಚಂದಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಯಲ್ಲಿ ಜಾಹೀರಾತು ಇದೆ.