ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದೆಯೇ? ಅದಕ್ಕೆಂದೇ ನೀವು ಸ್ಕೂಬಾ ಡೈವಿಂಗ್ ಮಾಡಲೇ ಬೇಕು. ಮೊದಲಿಗೆ ಈ ಸ್ಕೂಬಾ ಡೈವಿಂಗ್ ಎಂದರೆ ಏನು ಎಂದು ಅರಿಯುವ. ಸ್ಕೂಬಾ ಡೈವಿಂಗ್ ಒಂದು ರೀತಿಯಲ್ಲಿ ಮನರಂಜನೆಯೇ ಆದರೂ ಇದು ಕ್ರೀಡೆಯ ಭಾಗ. SCUBA ಅಂದರೆ Self Contained Underwater Breathing Apparatus. ಇದು ನೀರಿನ ಅಡಿಯಲ್ಲಿ ಆಟವಾಡುವ ಬಗೆ. ಇದಕ್ಕಾಗಿ ನಿಮಗೆ ಸೂಕ್ತವಾದ ಮಾಸ್ಕ್, ಜಾಲಪಾದಗಳು, ನೀರು ಹೊಕ್ಕದ ಈಜು ಉಡುಗೆಗಳು, ಆಮ್ಲ ಜನಕದ ಕಿಟ್ ಮತ್ತು ಇವನ್ನೆಲ್ಲಾ ನಿಯಂತ್ರಿಸುವ ನಿಯಂತ್ರಕಗಳು ಬೇಕಾಗುತ್ತವೆ. ಈಗ ನಿಮ್ಮ ಸ್ಕೂಬಾ ಡೈವಿಂಗ್ ಅನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ನೀವು ಇರುವ ಸ್ಥಳ, ನೀರಿನ ಮೇಲ್ಮೈಯಿಂದ ಇರುವ ಆಳ, ನಿಮ್ಮ ಸುತ್ತಲೂ ಇರುವ ಜಲಚರಗಳು ಇತ್ಯಾದಿಗಳನ್ನು ಕ್ಯಾಮರಾ ಮೂಲಕ ಕಂಪ್ಯೂಟರ್ ನಲ್ಲಿ ನೋಡಬಹುದು. ಇದರಿಂದಾಗಿ ಸ್ಕೂಬಾ ಡೈವಿಂಗ್ ಈಗ ಮೊದಲಿನಷ್ಟು ಅಪಾಯಕಾರಿಯಲ್ಲ.  ಸ್ಕೂಬಾ ಡೈವಿಂಗ್ ಆಸ್ಟ್ರೇಲಿಯಾ ದೇಶದಲ್ಲಿ ಬಹಳ ಪ್ರಸಿದ್ಧಿ. ಮಾಲ್ಡೀವ್ಸ್ ದ್ವೀಪಗಳಲ್ಲೂ ಸ್ಕೂಬಾ ಡೈವಿಂಗ್ ಮಾಡಲು ಹಲವಾರು ಮಂದಿ ಪ್ರವಾಸಿಕರು ಪ್ರತೀ ವರ್ಷ ತೆರಳುತ್ತಾರೆ. ಇಲ್ಲಿ ನೀವು ಎಚ್ಚರದಿಂದ ಗಮನಿಸಬೇಕಾದ ಅಂಶವೆಂದರೆ ನೀವು ಇದಕ್ಕಾಗಿ ಸರಿಯಾದ ತರಭೇತಿಯನ್ನು ಪಡೆದಿರುವಿರಾ? ಸೂಕ್ತ, ಮಾನ್ಯತೆ ಪಡೆದ ತರಬೇತಿ ಸಂಸ್ಥೆಯ ಮುಖಾಂತರ ನೀವು ಈ ಡೈವ್ ಮಾಡಲು ಹೋಗುತ್ತಿರುವಿರಾ? ಇವನ್ನೆಲ್ಲಾ ಪರಿಶೀಲಿಸಿದ ಬಳಿಕ ನೀವು ಸ್ಕೂಬಾ ಡೈವಿಂಗ್ ಮಾಡಿ ನಿಮ್ಮ ಮನದಾಳದಲ್ಲಿ ನೀರಿನಾಳದ ಸುಂದರ ದೃಶ್ಯಗಳನ್ನು ತುಂಬಿಕೊಳ್ಳಬಹುದು. ವಿದೇಶಕ್ಕೆ ಹೋಗುವುದು ದುಬಾರಿ ಎಂಬ ಭಾವನೆ ಇದ್ದಲ್ಲಿ ನಮ್ಮ ಕರ್ನಾಟಕದಲ್ಲೇ ಸ್ಕೂಬಾ ಡೈವಿಂಗ್ ಅನುಭವವನ್ನು ಪಡೆದುಕೊಳ್ಳಬಹುದು. ಉತ್ತರ ಕನ್ನಡದ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರದ ಬಳಿ ಇರುವ ನೇತ್ರಾಣಿ ಎಂಬ ದ್ವೀಪದಲ್ಲಿ (ಚಿತ್ರ ೨) ಸ್ಕೂಬಾ ಡೈವಿಂಗ್ ಲಭ್ಯವಿದೆ. ಈ ದ್ವೀಪ ಮುರ್ಡೇಶ್ವರದಿಂದ ಸುಮಾರು ೧೯ ಕಿ ಮೀ ದೂರವಿದೆ. ಅಲ್ಲಿಗೆ ತಲಪಲು ನೌಕೆಗಳ ಲಭ್ಯತೆ ಇದೆ. ನೌಕೆ ಅಥವಾ ಹಡಗಿನ ಮೂಲಕ ೩೦ ರಿಂದ ೪೦ ನಿಮಿಷ ತಗಲಬಹುದು. ಇಲ್ಲಿಯ ನೀರು ತುಂಬಾ ಪಾರದರ್ಶಕವಾಗಿರುವುದರಿಂದ ಬರಿಯ ಕಣ್ಣಿನಲ್ಲೇ ೨೦ ಅಡಿಗಳವರೆಗಿನ ದೃಶ್ಯಗಳನ್ನು ವೀಕ್ಷಿಸಬಹುದು. ಬಣ್ಣ ಬಣ್ಣದ ಮೀನುಗಳು, ಸುಂದರ ಹೊಳೆಯುವ ಹವಳದ ದಿಬ್ಬಗಳು, ಆಮೆಗಳು, ಡಾಲ್ಫಿನ್ ಗಳು, ಸಣ್ಣ ಶಾರ್ಕ್ ಗಳು ಕಾಣ ಸಿಗುವ ಸಾಧ್ಯತೆ ಇರುತ್ತದೆ. ಇದು ತುಂಬಾ ಶಾಂತವಾದ ಹಾಗೂ ಜನಸಂದಣಿ ಕಡಿಮೆ ಇರುವ ದ್ವೀಪ. ಪ್ರತೀ ವರ್ಷ ಅಕ್ಟೋಬರ್ ತಿಂಗಳಿಂದ ಮೇ ತಿಂಗಳ ತನಕ ಈ ದ್ವೀಪಕ್ಕೆ ಹೋಗಲು ಅನುಮತಿ ಇರುತ್ತದೆ. ಮಳೆಗಾಲದಲ್ಲಿ ಅಲೆಗಳ ರಭಸ ಜೋರಾಗಿರುವುದರಿಂದ ಅಲ್ಲಿಗೆ ಹೋಗುವುದು ಅಪಾಯ.  ಸಮುದ್ರದ ತಳವನ್ನು ನೋಡುವ ಆಸೆ ಇದ್ದವರು, ಸ್ಕೂಬಾ ಡೈವಿಂಗ್ ಮಾಡುವ ಹುಮ್ಮಸ್ಸು ಇರುವವರು ನೇತ್ರಾಣಿ ಆಕ್ವಾ ರೈಡ್ ಪ್ರವಾಸವನ್ನು ಬಳಸಿಕೊಳ್ಳಬಹುದು. ಇದು ಸಾಮಾನ್ಯ ಪ್ರವಾಸಕ್ಕಿಂತ ಉತ್ತಮ ಹಾಗೂ ವಿಭಿನ್ನ ಅನುಭವ ನೀಡುತ್ತದೆ. ಸಮುದ್ರ ತೀರದಲ್ಲಿ ನಾವು ನೋಡುವ ಸಮುದ್ರಕ್ಕಿಂತಲೂ ವಿಭಿನ್ನವಾದ ಸಮುದ್ರವನ್ನು ಅದರ ಒಳಹೊಕ್ಕು ನೋಡಬಹುದು. ಸಮುದ್ರದಾಳದ ಜೀವ ವೈವಿಧ್ಯವನ್ನು ನೋಡುವ, ಸಮುದ್ರದ ಆಳಕ್ಕೆ ಹೋಗಿ ಸಾಹಸ ಕ್ರೀಡೆಗಳನ್ನಾಡುವ ಮನಸ್ಸು ಇದ್ದವರು ಈ ಆಕ್ವಾ ರೈಡ್ ಬಳಸಿಕೊಳ್ಳಬಹುದು. ಸ್ಕೂಬಾ ಡೈವಿಂಗ್ ಅನುಭವ ಇಲ್ಲದವರೂ ಇಲ್ಲಿ ಸೂಕ್ತ ತರಬೇತುದಾರರ ಜೊತೆ ಡೈವ್ ಮಾಡಬಹುದು. ಹಾಗಾದರೆ ಇನ್ನೇಕೆ ತಡ ‘ಸ್ಕೂಬಾ ಡೈವ್’ ಮಾಡುವಿರಲ್ಲಾ… ಚಿತ್ರ ಕೃಪೆ: ಅಂತರ್ಜಾಲ ತಾಣ