ಆ ಒಂದು ಅಂಕ ಗುಂಡ ಮನೆಗೆ ಬರುವಾಗ ಹೆಂಡತಿ ಮಗನಿಗೆ ಚಚ್ಚುತ್ತ ಇದ್ದಳು. ಯಾಕೆ ಎಂದು ವಿಚಾರಿಸಿದ ಗುಂಡ. ನೆರೆಮನೆ ಹುಡುಗಿಗೆ ನೂರಕ್ಕೆ ತೊಂಬತ್ತ ಒಂಬತ್ತು ಅಂಕ ಬಂದಿದೆ ಎಂದಳು ಹೆಂಡತಿ. 'ಅರರೇ, ಅವಳಿಗೆ ಇನ್ನೂ ಒಂದು ಅಂಕ ಬರಬೇಕಿತ್ತಲ್ಲವೆ? ಅದನ್ನು ಕೇಳೋದು ಬಿಟ್ಟು ಇವನಿಗ್ಯಾಕೆ ಹೊಡೆಯುತ್ತೀಯಾ?'' ತುಂಟತನದಿಂದ ಪ್ರಶ್ನಿಸಿದ. ಅದರಿಂದ ಸಿಟ್ಟು ಮತ್ತೂ ನೆತ್ತಿಗೇರಿ, ಗುಂಡನಿಗೆ ಅವಳು ಹೇಳಿದಳು. 'ಅವಳಿಗೇ ಬರಬೇಕಾಗಿದ್ದ ಆ ಒಂದು ಅಂಕ ಇವನಿಗೆ ಬಂದಿದೆ. ಅದಕ್ಕೆ!' -ಪ. ರಾಮಕೃಷ್ಣ ಶಾಸ್ತ್ರಿ, *** ಬೆಕ್ಕಿನ ಡ್ಯಾನ್ಸ್... ಹುಲಿಯೊಂದು ಕಾಡಿನಲ್ಲಿ ತನ್ನ ಜೊತೆ ವಾಸಿಸುವ ಇತರೆ ಪ್ರಾಣಿಗಳಿಗೆ ತಾನು ಮದುವೆಯಾದ ಸಲುವಾಗಿ ಪಾರ್ಟಿ ಕೊಡ್ತಾ ಇತ್ತು. ಆ ಪಾರ್ಟಿಯಲ್ಲಿ ಒಂದು ಬೆಕ್ಕು ಯಾವ ಭಯವಿಲ್ಲದೆ ಡ್ಯಾನ್ಸ್ ಮಾಡ್ತಾ ಇತ್ತು. ಅದನ್ನು ನೋಡಿ ಹುಲಿಗೆ ಸಿಟ್ಟು ಮತ್ತು ನಗು ಬಂದು ಬೆಕ್ಕಿಗೆ, 'ನಿನಗೆಷ್ಟು ಧೈರ್ಯ. ಇಲ್ಲಿ ಬಂದು ನಿರ್ಭಯವಾಗಿ ಡ್ಯಾನ್ಸ್ ಮಾಡೋಕೆ?' ಅಂತ ಕೇಳಿತು. ಬೆಕ್ಕು ಡ್ಯಾನ್ಸ್ ಮಾಡುತ್ತಲೇ ಹುಲಿಗೆ ಹೇಳಿತು, ಮದುವೆಗೆ ಮುಂಚೆ - ನಾನೂ ಕೂಡ ಹುಲಿನೇ ಆಗಿದ್ದೆ ಮಾರಾಯ...! -ವಿ. ಹೇಮಂತ ಕುಮಾರ್ *** ಮೇಡ್ ಫಾರ್ ಈಚ್ ಅದರ್ ನನ್ನ ಸ್ನೇಹಿತ ಎಷ್ಟೋ ದಿನಗಳ ನಂತರ ತಡವಾಗಿ ಮದುವೆ ಆದ. ತಡವಾದರೂ ಅಡ್ಡಿಯಿಲ್ಲ. ನೋಡಲು ಇಬ್ಬರೂ ಅನುರೂಪವಾಗಿ ಕಾಣುತ್ತಿದ್ದರು. ನಾವೆಲ್ಲರೂ ಊಟಕ್ಕೆ ಮುಂಚೆ ಹೋಗಿ ವಿಷ್ ಮಾಡಿ. ಸ್ಟೈಲಾಗಿ ಫೋಟೊಗೆ ಪೋಸ್ ಕೊಟ್ಟೆವು. ನಮ್ಮ ಕಿಲಾಡಿ ಗೆಳೆಯನೊಬ್ಬ, ಇಬ್ಬರ ಮುಂದೆ ನಿಂತು ಕೈಕುಲುಕಿ, 'ಮೇಡ್ ಫಾರ್ ಈಚ್ ಅದರ್' ಎಂದು ಹೊಗಳಿದ ತಕ್ಷಣ ಇನ್ನೊಬ್ಬ ಗೆಳೆಯ ಸುಮ್ಮನಿರದೆ, 'ಈ ಜಗತ್ತಿನಲ್ಲಿ ಮೇಡ್ ಫಾರ್ ಈಚ್ ಅದರ್ ಅಂತ ತಯಾರಾಗೋದು ಶೂ ಮತ್ತು ಚಪ್ಪಲ್ ಗಳು ಮಾತ್ರ... ಒಂದನ್ನು ಬಿಟ್ಟು ಇನ್ನೊಂದರ ಅಸ್ತಿತ್ವವೇ ಶೂನ್ಯ ಅಂತ ಇರೋದು ಅವುಗಳೇ' ಎನ್ನಬೇಕೆ? ಸುತ್ತ ಇದ್ದವರು ಅರೆಕ್ಷಣ ದಂಗಾದರು! ಪಾಪ ವಧು-ವರರು ಜೋಕ್‌ಗೆ ಜೋಲಿ ಹೊಡೆದರು. -ರಾಮಕೃಷ್ಣ ಗೋಖಲೆ *** ಸೇರಬೇಕಾದ ಸ್ಥಳ ಗುಂಡ ಇದ್ದ ಬಸ್ ಕಡಿದಾದ ಬೆಟ್ಟ ಪ್ರದೇಶದಲ್ಲಿ ವೇಗವಾಗಿ ಓಡುತ್ತಿತ್ತು. ಪಕ್ಕದಲ್ಲಿ ದೊಡ್ಡ ಪ್ರಪಾತ ಕಾಣುತ್ತಿತ್ತು. ಗುಂಡನಿಗೆ ಭಯವಾಗಿ ಚಾಲಕನಿಗೆ 'ಸ್ವಲ್ಪ ನಿಧಾನವಾಗಿ ಓಡಿಸಿ' ಎಂದ. ಚಾಲಕ ನಗುತ್ತಾ 'ಹೆದರಬೇಡಿ ಹುಚ್ಚಾಸ್ಪತ್ರೆಯಿಂದ ನನ್ನನ್ನು ಕರೆದುಕೊಂಡು ಹೋಗಲು ಡಾಕ್ಟರ್ ಬರುತ್ತಿದ್ದಾರೆ ಅಂತ ಸುದ್ದಿ ಸಿಕ್ಕಿತು. ಅವರು ಬರುವ ಹೊತ್ತಿಗೆ ನಿಮ್ಮನ್ನೆಲ್ಲ ಸೇರ ಬೇಕಾದ ಸ್ಥಳಕ್ಕೆ ತಲುಪಿಸುತ್ತೇನೆ' ಎಂದಾಗ ಗುಂಡನಾದಿಯಾಗಿ ಎಲ್ಲರೂ ಅವಾಕ್ಕಾದರು. -ಶಂಕರೇಗೌಡ ತುಂಬಕೆರೆ *** ಕಲೆ: ಗಣೇಶ ಆಚಾರ್ಯ (ಮಯೂರ ಅಕ್ಟೋಬರ್ ೨೦೨೪ರ ಸಂಚಿಕೆಯಿಂದ ಸಂಗ್ರಹಿತ)