ಮೂಡಿಗೆರೆ ಎಂದರೆ ಕಾಫಿ ಹೂವಿನ ಪರಿಮಳ, ಜೀರುಂಡೆಗಳ ಝೇಂಕಾರ, ಭತ್ತದ ಗದ್ದೆಯ ಕೆಸರು. ಮೆಣಸು, ಅಡಿಕೆ ಶುಂಠಿ, ಬಾಳೆಗಿಡಗಳ ಹಸಿರು ಇವೆಲ್ಲದರ ನಡುವೆ ಅಲ್ಲಲ್ಲಿ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು, ವೀರಕಲ್ಲುಗಳು, ಮಾಸ್ತಿ ಕಲ್ಲುಗಳು, ದೇವಾಲಯ, ಕೋಟೆ ಕೊತ್ತಲಗಳು, ಐತಿಹ್ಯಗಳು, ಇಂಥ ಮೂಡಿಗೆರೆಯಿಂದ ಹದಿಮೂರು ಕಿ.ಮೀ. ದೂರದಲ್ಲಿದೆ 'ಫಲ್ಗುಣಿ'. ಊರು ಸಣ್ಣದಾದರೂ 'ಫಲ್ಗುಣಿ' ಯ ಕೀರ್ತಿ ದೊಡ್ಡದು. ನೂರಾರು ದೃಷ್ಟಾಂತಗಳಿಗೆ ಆಸರೆ ಈ ಊರು. ಇಲ್ಲಿನ ಕಲಾನಾಥೇಶ್ವರ ದೇವಾಲಯ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಿರುವ ನಕ್ಷತ್ರಾಕಾರದ ಜಗತಿಯ ಮೇಲಿದೆ. ಇದು ಹೊಯ್ಸಳ ಶೈಲಿಯ ಅಪೂರ್ವ ಕಲಾಚಿತ್ರ. ಪುರಾಣ ಹಾಗೂ ಜಾನಪದೀಯ ಕಥೆಗಳಿಂದಲೂ ಈ ದೇಗುಲ ಗಮನ ಸೆಳೆಯುತ್ತದೆ. ಪಾಂಡವರು ವನವಾಸದ ಸಂದರ್ಭದಲ್ಲಿದ್ದಾಗ ಶ್ರೀಕೃಷ್ಣನ ನಿರ್ದೇಶನದಂತೆ ಅರ್ಜುನ ಒಂದು ರಾತ್ರಿ ಒಂದು ಹಗಲು ತನ್ನ ಬಿಲ್ಲು ಮತ್ತು ಬಾಣಗಳಿಂದ ಈ ದೇವಾಲಯ ಕಟ್ಟಿದ ಎಂಬುದು ಐತಿಹ್ಯ. ಅದಕ್ಕಾಗಿಯೇ ಇಲ್ಲಿನ ಪ್ರದೇಶವನ್ನು ಫಲ್ಗುಣಿ ಎಂದು ಕರೆಯಲಾಗಿದೆ. ಪಾರ್ಥ, ಫಲ್ಗುಣ ಎಂಬ ಅರ್ಜುನನ ಹೆಸರೇ ಫಲ್ಗುಣಿಯಾಗಿರಬಹುದು ಎನ್ನುತ್ತದೆ ನಾಮಪುರಾಣ. 'ಫಲ್ಗುಣಿ' ಗೆ ಸಮೀಪದಲ್ಲೇ ಹೇಮಾವತಿ ಹರಿಯುತ್ತದೆ. ಪ್ರಕೃತಿ ಮಾತೆಯ ಸಂಕೇತವಾಗಿ ಆರಾಧನೆಗೊಳಗಾಗುವ ಪದ್ಮಾವತಿ ಎಂಬ ಸುಗ್ಗಿದೇವತೆಯ ಕಲ್ಲಿನ ಮೂರ್ತಿ ಇಲ್ಲಿದ್ದು, ಹುತ್ತ ಕಟ್ಟಿದ ಮಣ್ಣಿನ ನಡುವೆ ಇದು ಅವಿತಿರುವಂತೆ ತೋರುತ್ತದೆ. ಶೈವ ಹಾಗೂ ಜೈನ ಸಂಪ್ರದಾಯದಂತೆ ಪದ್ಮಾವತಿ ದೇವಿಗೆ ಪೂಜೆ ನಡೆಯುತ್ತದೆ. ಈ ದೇಗುಲ ಕಲಾನಾಥೇಶ್ವರ ದೇವಾಲಯದ ಪಕ್ಕದಲ್ಲೇ ಇರುವುದು ವಿಶೇಷ. ಕಲ್ಲಿನ ರಾಟವಾಣ, ಸ್ವಾಮಿಗಳ ಬನ, ಜೈನ ಮುನಿಗಳ ನೆನಪಿನ ಸ್ಥಳ – ಇವೆಲ್ಲ 'ಫಲ್ಗುಣಿ' ಯ ಇತರ ಆಕರ್ಷಣೆಗಳು. ಈ ಊರಲ್ಲಿ ವರ್ಷಕ್ಕೊಮ್ಮೆ ಸುಗ್ಗಿ ಉತ್ಸವ ನಡೆಯುತ್ತದೆ. ಆ ಸಂದರ್ಭದಲ್ಲಿ ರಾಟವಾಣದಲ್ಲಿ ಕುಳಿತು ಸಂಭ್ರಮಿಸುತ್ತಾರೆ. 'ಫಲ್ಗುಣಿ' ಯ ಭೇಟಿ ಮನಸ್ಸಿಗೆ ಆಹ್ಲಾದ ತುಂಬುವುದು ಮಾತ್ರವಲ್ಲ ಪ್ರಕೃತಿ ಹಾಗೂ ಮನುಷ್ಯರ ನಡುವಣ ಸಂಬಂಧವನ್ನು ನವೀಕರಿಸುತ್ತದೆ. ಬನ್ನಿ ಒಮ್ಮೆ ಪ್ರವಾಸಕ್ಕೆ...  (ಚಿತ್ರಗಳು : ಅಂತರ್ಜಾಲ ಕೃಪೆ) -ರಮೇಶ ನಾಯ್ಕ, ಉಪ್ಪುಂದ, ಬೈಂದೂರು