ನಮ್ಮ ದೇಹದ ಆರೋಗ್ಯವು ಚೆನ್ನಾಗಿದ್ದರೆ ಅದೇ ಒಂದು ಬಹು ದೊಡ್ಡ ವರದಾನವಾಗಿದೆ. ಆರೋಗ್ಯವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ತಜ್ಞರು ಕೂಡ ಸಮತೋಲಿತ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ತಾಜಾ ತರಕಾರಿಗಳು, ಹಣ್ಣುಗಳು ಆಹಾರದಲ್ಲಿ ಹೇರಳವಾಗಿರಬೇಕು. ಹಣ್ಣುಗಳನ್ನು ಸೇವಿಸುವುದು ಒಂದು ಆರೋಗ್ಯಕರವಾದ ಆಯ್ಕೆಯಾಗಿದೆ. ಹಣ್ಣುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಲ್ಲದೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಹಲವು ಹಣ್ಣುಗಳು ತುಂಬಾ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡಲು ವಿವಿಧ ರೀತಿಯ ಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮಲಬದ್ಧತೆಗೆ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ಹಣ್ಣುಗಳನ್ನು ತಿನ್ನುವುದು ಅತ್ಯುತ್ತಮವಾದ ಆಯ್ಕೆಯಾಗಿದೆ. ಯಾವ ಹಣ್ಣು ನಮ್ಮ ಯಾವ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎನ್ನುವುದನ್ನು ಒಮ್ಮೆ ಅವಲೋಕಿಸೋಣ ಬನ್ನಿ… ಹೊಟ್ಟೆಯ ಸಮಸ್ಯೆಗೆ ಚಿಕ್ಕು ಹಣ್ಣು: ಬಹಳ ಜನರು ಚಿಕ್ಕು ಎಂದು ಕರೆಯಲ್ಪಡುವ ಸಪೋಟಾ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸಪೋಟಾ ಹಣ್ಣು ತುಂಬಾ ಸಿಹಿಯಾಗಿರುತ್ತದೆ. ಸಪೋಟಾದಲ್ಲಿ ವಿಟಮಿನ್ ಎ. ಸಿ. ಇ. ಕೆ, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ರಂಜಕ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಸಪೋಟಾ ಹಣ್ಣಿನಲ್ಲಿ ಟ್ಯಾನಿನ್ ಸಮೃದ್ಧವಾಗಿದೆ. ಇದು ನೈಸರ್ಗಿಕ ಉರಿಯೂತ ನಿವಾರಕವಾಗಿಯು ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಗ್ಯಾಸ್ಟಿಕ್, ಆಮ್ಮಿಯತೆ, ಉಬ್ಬರದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಪೋಟಾ ಉತ್ತಮ ಹಣ್ಣು. ರೋಗನಿರೋಧಕ ಶಕ್ತಿ ವೃದ್ಧಿಗೆ ಕಿತ್ತಳೆ: ಕಿತ್ತಳೆ ರುಚಿಯಲ್ಲಿ ಸಿಹಿ ಹಾಗೂ ಹುಳಿಯಾಗಿದೆ. ಕಿತ್ತಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಕಾಲ ಕಾಲಕ್ಕೆ ಬರುವ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಕಿತ್ತಳೆಯಲ್ಲಿ ಬಿಳಿ ರಕ್ತ ಕಣಗಳನ್ನು ಸಹ ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಹೆಚ್ಚಿನ ಫೈಬರ್ ಹೊಂದಿದೆ. ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಕಿತ್ತಳೆ ಹಣ್ಣು ಒಳ್ಳೆಯದು. ಮಲಬದ್ಧತೆಗೆ ಪರ್ಸಿಮನ್: ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಹೊಸ ಹಣ್ಣು ಪರ್ಸಿಮನ್ (Persimmon fruit). ಪರ್ಸಿಮನ್ ಅನ್ನು ಕೆಂಪು ಸೀತಾಫಲ ಎಂದು ಕರೆಯುತ್ತಾರೆ. ಸೀತಾಫಲ ಕುಟುಂಬದ ಹಣ್ಣು. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಈ ಹಣ್ಣು ಅತ್ಯುತ್ತಮ ಆಯ್ಕೆಯಾಗಿದೆ. ಪರ್ಸಿಮನ್ ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆಯಿಂದ ಪರಿಹಾರವನ್ನು ನೀಡಲು ಸಹಾಯವಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿರುವ ಮಲವನ್ನು ಮೃದುಗೊಳಿಸುತ್ತದೆ. ಪರ್ಸಿಮನ್ ನೈಸರ್ಗಿಕ ವಿರೇಚಕವಾಗಿ ಕಾರ್ಯ ನಿರ್ವಹಿಸುತ್ತದೆ. (ಚಿತ್ರ ೨) ಕರುಳಿನ ಆರೋಗ್ಯಕ್ಕೆ ಸೀತಾಫಲ: ಇತ್ತೀಚಿನ ದಿನಗಳಲ್ಲಿ ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕರುಳುಗಳು ಆರೋಗ್ಯಕರವಾಗಿದ್ದರೆ, ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ನೀವು ಕರುಳಿನ ಆರೋಗ್ಯಕ್ಕಾಗಿ ಸೀತಾಫಲ ತಿನ್ನಬೇಕು. ಈ ಹಣ್ಣಿನಲ್ಲಿ ಮೆಗ್ನೀಸಿಯಂ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಸೀತಾಫಲ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಸೀತಾಫಲ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ವೈದ್ಯರ ಸಲಹೆಯ ಪ್ರಕಾರ ಸೀತಾಫಲ ಸೇವಿಸಬೇಕು. ಕೂದಲು, ಚರ್ಮಕ್ಕೆ ನೆಲ್ಲಿಕಾಯಿ: ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೆಲ್ಲಿಕಾಯಿ (ಆಮ್ಲಾ) ಉತ್ತಮ ಆಯ್ಕೆಯಾಗಿದೆ. ಆಮ್ಲಾ ವಿಟಮಿನ್ ಸಿಯಲ್ಲಿಯೂ ಸಮೃದ್ಧವಾಗಿದೆ. ಇದು ಕೂದಲು, ಚರ್ಮಕ್ಕೆ ಒಳ್ಳೆಯದು. ನಿಯಮಿತವಾಗಿ ಆಮ್ಲಾ ಸೇವನೆಯು ರಕ್ತವನ್ನು ಶುದ್ದೀಕರಿಸುತ್ತದೆ. ಇದೇ ಸಮಯದಲ್ಲಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ಆಮ್ಲಾ - ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬಯಸಿದರೆ ಪ್ರತಿದಿನ ಒಂದು ನೆಲ್ಲಿಕಾಯಿಯನ್ನಾದರೂ ಸೇವಿಸಬೇಕು. ಶಕ್ತಿಗಾಗಿ ಬಾಳೆಹಣ್ಣು: ಹೊಟ್ಟೆ ಉಬ್ಬರ ಅಥವಾ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ಬಾಳೆಹಣ್ಣು ಉತ್ತಮ ಆಯ್ಕೆಯಾಗಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ದೇಹದಿಂದ ಹೆಚ್ಚುವರಿ ಸೋಡಿಯಂ ಹೊರಹಾಕಲು ತುಂಬಾ ಸಹಾಯ ಮಾಡುತ್ತದೆ. ನೀರಿನ ಅಂಶ ಹೊಂದಿರುವ ಬಾಳೆಹಣ್ಣು, ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಜಿಮ್ ಗೆ ಹೋಗಿ ವ್ಯಾಯಾಮ ಮಾಡುವವರಿಗೆ ಬಾಳೆಹಣ್ಣು ಉತ್ತಮ ಆಯ್ಕೆಯಾಗಿದೆ. ಕಬ್ಬಿಣಾಂಶ ಹೇರಳವಾಗಿರುವುದರಿಂದ ತ್ವರಿತ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. (ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ