ಮಣ್ಣಿನಿಂದ ಮಡಕೆ, ಹೂಜೆ, ಪಾತ್ರೆಗಳು, ಲೋಟಗಳು, ಹಣತೆಗಳು, ಕುಂಡಗಳು, ಇಟ್ಟಿಗೆಗಳು ಇತ್ಯಾದಿಗಳನ್ನು ರಚಿಸುವುದು ಪುರಾತನ ಭಾರತೀಯ ಕಲೆ. ಹಾಗೆಯೇ ಮಣ್ಣಿನಿಂದ ಮಕ್ಕಳ ಆಟಿಕೆಗಳನ್ನೂ ರಚಿಸಬಹುದು: ಗೊಂಬೆಗಳು, ಪ್ರಾಣಿಗಳು, ಪಕ್ಷಿಗಳು, ಪುಟ್ಟ ಅಡುಗೆ ಪಾತ್ರೆಗಳು, ಪರಿಕರಗಳು, ಚಕ್ರದ ಗಾಡಿಗಳು ಮತ್ತು ಮನೆಗಳ ಪುಟ್ಟ ಮಾದರಿಗಳು. ಅವಲ್ಲದೆ ಹಣ್ಣುಗಳು ಮತ್ತು ತರಕಾರಿಗಳ ಪ್ರತಿರೂಪಗಳನ್ನು ರಚಿಸಿ, ಅವಕ್ಕೆ ಸೂಕ್ತ ಬಣ್ಣ ಹಾಕಬಹುದು.
ಮೃದುವಾದ ಮಣ್ಣಿನಿಂದ ಈ ಕಲಾಕೃತಿಗಳನ್ನು ರಚಿಸಿ, ನೆರಳಿನಲ್ಲಿ ಒಣಗಿಸಿ, ಬಣ್ಣಗಳನ್ನು ಬಳಿದು ಆಟವಾಡುವುದನ್ನು ಮಕ್ಕಳಿಗೆ ತೋರಿಸಿಕೊಟ್ಟರೆ, ರಜೆಯಲ್ಲಿ ಹಲವು ದಿನಗಳು ಅವರು ಇದೇ ಚಟುವಟಿಕೆಯಲ್ಲಿ ಕಾಲ ಕಳೆಯಬಲ್ಲರು. ಇದು ಮಕ್ಕಳ ಕೈಗಳನ್ನು ಬಲಪಡಿಸಿ, ಸೃಜನಶೀಲತೆಯನ್ನು ಅರಳಿಸುತ್ತದೆ. ತಾನು ಮಣ್ಣಿನಿಂದ ಕಲಾಕೃತಿಗಳನ್ನು ರಚಿಸಿದೆ ಎಂಬ ಭಾವನೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಭಾರತದ ಹಲವು ಸ್ಥಳಗಳಲ್ಲಿ ಉತ್ಖನನ ನಡೆಸಿದಾಗ ಮಣ್ಣಿನಿಂದ ರಚಿಸಿದ ಆಟಿಕೆಗಳು ಮತ್ತು ದಿನಬಳಕೆಯ ವಸ್ತುಗಳು ಸಿಕ್ಕಿವೆ. ಉದಾಹರಣೆಗೆ, ಹರಪ್ಪಾದಲ್ಲಿ 1923-24 ಹಾಗೂ ಅನಂತರ ನಡೆಸಿದ ಉತ್ಖನನದಲ್ಲಿ ಮಣ್ಣಿನಿಂದ ರಚಿಸಿದ ನೂರಾರು ಪ್ರಾಣಿಗಳ ಪ್ರತಿರೂಪಗಳು ಪತ್ತೆಯಾದವು: ಅತ್ಯಧಿಕ ಸಂಖ್ಯೆಯಲ್ಲಿ ಸಿಕ್ಕಿದ್ದು ಮಣ್ಣಿನ ಹೋರಿಯ ಪ್ರತಿರೂಪಗಳು. ಎರಡನೇ ಮತ್ತು ಮೂರನೇ ಸ್ಥಾನ (ಸಂಖ್ಯೆಯಲ್ಲಿ) ಆಡು ಮತ್ತು ಟಗರಿನ ಮಣ್ಣಿನ ಮೂರ್ತಿಗಳದ್ದು. ಹುಲಿ, ಆನೆ, ಹಂದಿ, ನಾಯಿ, ಮಂಗ, ಬೆಕ್ಕು, ಅಳಿಲು, ಮೊಸಳೆ ಮತ್ತು ಬಾತುಕೋಳಿಗಳ ಮಣ್ಣಿನ ಪ್ರತಿರೂಪಗಳೂ ಅಲ್ಲಿ ಸಿಕ್ಕಿವೆ. ಅಂದರೆ, ಸುಮಾರು 5,000 ವರುಷಗಳ ಹಿಂದೆಯೇ ನಮ್ಮ ಪೂರ್ವಜರು ಪ್ರಕೃತಿಯಲ್ಲಿ ತಾವು ಕಂಡ ಪ್ರಾಣಿಪಕ್ಷಿಗಳ ಮತ್ತು ದಿನಬಳಕೆಯ ವಸ್ತುಗಳ ಪ್ರತಿರೂಪಗಳನ್ನು ಮಣ್ಣಿನಿಂದ ರಚಿಸುವುದರಲ್ಲಿ ಪಳಗಿದ್ದರು. ಭಾರತದ ಈ ಪುರಾತನ ಕಲೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಲು ಇಂತಹ ಚಾರಿತ್ರಿಕ ಸಂಗತಿಗಳನ್ನು ತಿಳಿಸಬಹುದು. (handicrafts.nic.in ಮತ್ತು ಹರಪ್ಪ ಸಂಸ್ಕೃತಿಗೆ ಸಂಬಂಧಿಸಿದ ವೆಬ್-ಸೈಟುಗಳಲ್ಲಿ ಮಾಹಿತಿ ಲಭ್ಯವಿದೆ.)
ಮಣ್ಣಿನ (ಟೆರಕೋಟಾ) ಆಟಿಕೆಗಳು, ಅಡುಗೆ ಪಾತ್ರೆ-ಪರಿಕರಗಳು, ಹಣ್ಣು-ತರಕಾರಿ ಮತ್ತು ಪ್ರಾಣಿಪಕ್ಷಿಗಳ ಪ್ರತಿರೂಪಗಳು ಹಾಗೂ ದೇವರ ಮೂರ್ತಿಗಳಿಗೆ ತಲಾ ರೂ.10ರಿಂದ ರೂ.10,000 ತನಕ ಬೆಲೆಯಿದೆ (ಗಾತ್ರ ಮತ್ತು ರೂಪ ಆಧರಿಸಿ).
ಫೋಟೋ 1ರಲ್ಲಿರುವ 10 ಪುಟ್ಟ ಅಡುಗೆ ಪರಿಕರಗಳ ಬೆಲೆ ರೂ.555/- (ಆನ್-ಲೈನಿನಲ್ಲಿ ಖರೀದಿಗೆ). ಹಾಗೆಯೇ,
ಫೋಟೋ 2ರಲ್ಲಿ ಕಾಣುವ (ಬಣ್ಣ ಹಾಕಿದ) ಮಣ್ಣಿನ 13 ಹಣ್ಣು-ತರಕಾರಿಗಳ ಪುಟ್ಟ ಪ್ರತಿರೂಪಗಳ ಬೆಲೆ ರೂ. 300/-
(Terracotta Toys ಎಂದು ಗೂಗಲ್-ನಲ್ಲಿ ಟೈಪಿಸಿ ಹುಡುಕಬಹುದು.)
ಮಕ್ಕಳು ಮಣ್ಣಿನಿಂದ ಇಂತಹ ಆಟಿಕೆ ಹಾಗೂ ಕಲಾಕೃತಿಗಳನ್ನು ಸುಲಭವಾಗಿ ರಚಿಸಬಲ್ಲರು. ಮಕ್ಕಳಿಗೆ ಇನ್ನೂ ಹೆಚ್ಚಿನ ಮಾದರಿಗಳನ್ನು ತೋರಿಸಲು ಸುಲಭದ ದಾರಿ: ಈ ಕೆಳಗಿನ ಆನ್-ಲೈನ್ ಮಾರಾಟದ ಪೋರ್ಟಲುಗಳನ್ನು ಪರಿಶೀಲಿಸುವುದು:
amazon; Gatha Shop; Salem Pottery Shop; MP Terracotta Craft
ಫೋಟೋ 1: ಮಣ್ಣಿನ ಪುಟಾಣಿ ಅಡುಗೆ ಪರಿಕರಗಳು
ಫೋಟೋ 2: ಮಣ್ಣಿನ ಬಣ್ಣಬಣ್ಣದ ಪುಟ್ಟ ಹಣ್ಣು-ತರಕಾರಿಗಳ ಪ್ರತಿರೂಪಗಳು
ರಜಾಕಾಲದ ಚಟುವಟಿಕೆ 6: ಮಣ್ಣಿನಿಂದ ಆಕೃತಿಗಳ ರಚನೆ
ಅಡ್ಡೂರು ಕೃಷ್ಣ ರಾವ್
ಏಪ್ರಿಲ್ ೨೦, ೨೦೨೬
೩೧ ವೀಕ್ಷಣೆಗಳು
ಪ್ರಕಟಿಸಿದ: ಏಪ್ರಿಲ್ ೨೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬