ರುಕುಮಣಿ ರುಕುಮಣಿ
ಕೆ.ಪಿ.ಅಶ್ವಿನ್ ರಾವ್
ಸೆಪ್ಟೆಂಬರ್ ೧೨, ೨೦೨೫
೧೬ ವೀಕ್ಷಣೆಗಳು
ವಿಭಿನ್ನ ಕತೆಗಳ ಜನಕ ವಿಕಾಸ್ ನೇಗಿಲೋಣಿ ‘ರುಕುಮಣಿ ರುಕುಮಣಿ’ - ಶಾದಿ ಕೆ ಬಾದ್ ಕ್ಯಾಕ್ಯಾ ಹುವಾ? ಎನ್ನುವ ನೂತನ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಲೇಖಕ, ಅಂಕಣಕಾರ ಜೋಗಿ ಬೆನ್ನುಡಿ ಬರೆದು ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ. ಜೋಗಿಯವರ ಬೆನ್ನುಡಿಯ ಕೆಲವು ಸಾಲುಗಳು… “ನಿಮ್ಮ ಕತೆಗಳನ್ನು ನಾನು ಕತೆಗೋಸ್ಕರ ಮಾತ್ರವೇ ಓದುವುದಿಲ್ಲ. ಅವು ನನಗೆ ಕಾಣಿಸುವ ಮತ್ತೊಂದು ಲೋಕ ಮತ್ತು ಅವು ಮೆತ್ತಗೆ ನನ್ನನ್ನು ಚಿವುಟುವ ಪರಿ ನನಗೆ ಇಷ್ಟ. ನೀವು ಕತೆಗಳನ್ನು ಬರೆಯುವಾಗ ಒಂದೇ ಉಸಿರಿನಲ್ಲಿ ಬರೆಯುತ್ತೀರಿ ಹಾಗೂ ಅಷ್ಟು ಹೊತ್ತು ಪಾತ್ರಗಳನ್ನು ನಿಮ್ಮೊಳಗೆ ತಂದುಕೊಳ್ಳುತೀರಿ ಎಂಬುದು ನನಗೆ ಗೊತ್ತು.
ಈ ಕಥಾ ಸಂಕಲನದ ಎಲ್ಲ ಕತೆಗಳು ಹೊಸದಾಗಿವೆ. ಈ ಕಾಲದಲ್ಲಿ ಬರುತ್ತಿರುವ ಕತೆಗಳಿಗಿಂತ ಭಿನ್ನವಾಗಿವೆ. ಈಗ ಬರೆಯುತ್ತಿರುವ ವಯೋಮಾನದ ಕತೆಗಾರರೆಲ್ಲ ಒಂದಲ್ಲ ಒಂದು ವಸ್ತುವಿನ ಹಿಂದೆ ಬಿದ್ದಿದ್ದಾರೆ. ಅನೇಕರು ಪ್ರಶಸ್ತಿ ಕಥಾ ಸ್ಪರ್ಧೆಗಳಿಗೆ ಬಲಿಯಾಗಿದ್ದಾರೆ. ಉಳಿದ ಕೆಲವರು ಸಿದ್ಧಾಂತಗಳಿಗೆ ಜೋತು ಬಿದ್ದಿದ್ದಾರೆ. ಇಂಥದ್ದರ ನಡುವೆ ಜೀವಕ್ಕೆ ತಾಕುವಂಥ ಕತೆಗಳಿಗೋಸ್ಕರ ಹಂಬಲಿಸುವ ಎಲ್ಲರ ಪಾಲಿಗೂ ನೀವು ಕಥಾಸರಿತ್ಸಾಗರ.”
ಕತೆಗಾರ ವಿಕಾಸ್ ತಮ್ಮ ಮಾತಿನಲ್ಲಿ “ಆವಾಹನೆ, ಮೈಮೇಲೆ ದೇವರು ಬರುವುದು ಇತ್ಯಾದಿ ಹೆಸರುಗಳಿರುವ ಒಂದು ಅಭೌತಿಕ ಕ್ರಿಯೆಯಲ್ಲಿ ಒಂದು ಮಜಾ ಇದೆ. ಆ ಸಂದರ್ಭದಲ್ಲಿ ಮೈ ಮೇಲೆ ದೇವರನ್ನು ಆವಾಹಿಸಿಕೊಂಡವಳಿ/ನಿಗೆ ಯಾವ ಸಂಬಂಧಗಳೂ ಸಂಬಂಧವಲ್ಲ, ತನ್ನದಲ್ಲದ ಒಂದು ಹೊರೆಯನ್ನು ಹೊತ್ತು, ಇಹವನ್ನು ಮೀರುವ ಹೊತ್ತದು. ಕೆಲವೊಮ್ಮೆ ಜ್ವರ ಬಂದು ತಿಳಿದೆದ್ದಮೇಲೆ ನಾವು ಅಗತ್ಯಕ್ಕಿಂತ ಹೆಚ್ಚು ಚಟುವಟಿಕೆಯಲ್ಲಿ ತೊಡಗುತ್ತೇವೆ, ಅಗತ್ಯಕ್ಕಿಂತ ಹೆಚ್ಚು ಸೃಜನಶೀಲರಾಗುತ್ತೇವೆ. ಮಧ್ಯಾಹ್ನದ ನಿದ್ದೆ ತೆಗೆದೆದ್ದ ಮೇಲೆ ಪೂರ್ವಜನ್ಮಗಳೆಲ್ಲಾ ಜ್ಞಾಪಕಕ್ಕೆ ಬರುವುದೂ ಇದೆ, ಆ ನಿದ್ದೆಯ ನಂತರ ನಾವು ಭಿನ್ನವಾಗಿ ಕೆರಳುವ, ಖಿನ್ನರಾಗಿ ನರಳುವ ಚೋದ್ಯವೂ ಇದೆ.
ಈ ಎಲ್ಲಾ ಸಂದರ್ಭದಲ್ಲೆಲ್ಲಾ ನಾವು ನಮ್ಮ ದೇಹದಿಂದ ಬೇರ್ಪಟ್ಟು, ಏನನ್ನೋ ಕಂಡುಕೊಂಡು ವಾಪಾಸ್ ಬಂದಿರುತ್ತೇವೆ. ಈ ಆವಾಹನೆ, ಮಧ್ಯಾಹ್ನದ ನಿದ್ದೆ ಅಥವಾ ಜ್ವರ-ದ ಮೊದಲು ಮತ್ತು ನಂತರ ಇರುವ ನಾವು ಬೇರೆ. ಆ ‘ನಡುವಿನ’ ಸಂದರ್ಭದಲ್ಲಿ ಏನು ನಡೆಯಿತು ಅನ್ನುವುದರಲ್ಲಿ ಒಂದು ಕತೆ ಇದೆ. ಕತೆ ಬರೆಯಲು ಕೂತಾಗ ಮತ್ತು ಬರೆದು ಎದ್ದಾಗ ‘ಆ ನಡುವೆ’ ಸಂಭವಿಸುವುದನ್ನು ಕತೆ ಅಂತ ಹೇಳಲು ಇಚ್ಛಿಸುತ್ತೇನೆ. ಅಂಥ ಮ್ಯಾಜಿಕಲ್ ಮೂಮೆಂಟ್ ಗಳನ್ನು ನನ್ನ ಪ್ರತಿ ಕತೆಗಳೂ ದಯಪಾಲಿಸಿವೆ, ಕವಿಗೆ ಕವಿಯ ತೋರಿಸುವ ಕ್ಷಣ ಅದು, ಒಂದು ರೀತಿಯಲ್ಲಿ ಅನಿರ್ವಚನೀಯ.
ಲೆಕ್ಕದಲ್ಲಿ ನಾಲ್ಕನೇ ಕಥಾಸಂಕಲನ ಇದು. ಪ್ರತಿ ಸಂಕಲನವೂ ಹಿಂದಿನದಕ್ಕಿಂತ ಬೇರೆಯೇ ಆಗಿರುತ್ತದೆ, ಆಗದೇ ಇದ್ದರೆ ಅದು ಬೆಳವಣಿಗೆ ಆಗುವುದಿಲ್ಲ. ಆದರೆ ಹಿಂದಿನ ಸಂಕಲನದಿಂದ ಈ ಸಂಕಲನಕ್ಕೆ ಹೊರಳುವಾಗ ಒಂದು ವಿಶೇಷ, ವಿಚಿತ್ರ ಬದಲಾವಣೆ ಆಗಿದೆ. ಈ ಕತೆಗಳ ಕಥನ ಅಥವಾ ಸ್ಟ್ರಕ್ಚರ್ ನಲ್ಲಿ ಒಂದು ರೋಚಕತೆ ನುಸುಳಿದೆ, ಅದಕ್ಕೆ ಕಾರಣ ವಿಶ್ಯುವಲ್ ಮೀಡಿಯಂನ ಪ್ರಭಾವ. ಕತೆಗಳು ಕೊನೆಯತನಕ ಕೌತುಕದಿಂದ ಓದಿಸಿಕೊಳ್ಳದೇ ಹೋದರೆ ಅದು ಎಷ್ಟೇ ಒಳ್ಳೆಯ ಕತೆಯಾಗಿದ್ದರೂ ಪ್ರಯೋಜನವಿಲ್ಲ ಅಂತ ಒಂದು ಜ್ಞಾನೋದಯ ಆಗಿದೆ. ಹಾಗಂತ ಕತೆಗಳು ರೋಚಕತೆಗೇ, ಕುತೂಹಲಕ್ಕೇ ಪಕ್ಕಾಗಬೇಕೆಂಬ ಧೋರಣೆ ಅಲ್ಲ. ಬೀದಿ ಜಗಳಕ್ಕೆ ಟ್ರಾಕ್ಷನ್ ಸಿಗುತ್ತದೆ ಅಂತ ಅದೇ ಒಳ್ಳೆಯ ಕತೆ ಆಗಲಾರದು. ಆದರೆ ಯಾವ ವಸ್ತುವನ್ನೇ ಹೇಳಿದರೂ, ಎಂಥ ಗಾಂಭೀರ್ಯವೇ ಇದ್ದರೂ ಕತೆಯನ್ನು ಸ್ವಾರಸ್ಯಗೊಳಿಸುವುದು ಮುಖ್ಯ ಅನ್ನುವುದು ನನ್ನ ವಿನಮ್ರ ಅನಿಸಿಕೆ.
ಹಾಗಂತ ಈ ಸಂಕಲನದ ಕತೆಗಳನ್ನು ರೋಚಕತೆಯ ಕೈಗಿತ್ತು, ಆತ್ಮವನ್ನು ಮರೆತಿಲ್ಲ, ಪ್ರಾಮಾಣಿಕತೆಯಲ್ಲಿ ರಾಜಿ ಆಗಿಲ್ಲ. ಹಾಗೆ ನೋಡಿದರೆ ಈ ನಾಲ್ಕೈದು ವರ್ಷಗಳಲ್ಲಿ ನೋಡಿದಷ್ಟು ಸಿನಿಮಾ, ವೆಬ್ ಸೀರೀಸು ನನ್ನ ಜನ್ಮದಲ್ಲೇ ನೋಡಿರಲಿಕ್ಕಿಲ್ಲ. ಎಷ್ಟೋ ರಾತ್ರಿಗಳು ಇದಕ್ಕೆ ವ್ಯಯವಾಗಿದ್ದಿದೆ, ಕಥೆ ಹೇಳುವ ಹೊಸ ಹೊಸ ಮಾದರಿಗಳು ನನ್ನನ್ನು ಕಂಗೆಡಿಸಿಯೂ ಇವೆ. ಆದರೂ ಈ ನಾಲ್ಕೈದು ವರ್ಷಗಳಲ್ಲೇ ನನಗೆ ಹೆಚ್ಚುಹೆಚ್ಚು ಕತೆ ಬರೆಯಬೇಕೆಂದು ಅನ್ನಿಸಿದೆ. ಯಾಕೆಂದರೆ ಎಷ್ಟೇ ಕತೆಗಳನ್ನು ನಾವು ನೋಡಿದರೂ, ಕೇಳಿದರೂ ಯಾರೋ ಎದುರು ಸಿಕ್ಕು, ನಿನಗೆ ವಿಷ್ಯ ಗೊತ್ತಾಯ್ತಾ ಅಂತ ಕೇಳಿದ ತಕ್ಷಣ ಕಿವಿ, ಕಣ್ಣುಗಳು ಅರಳುವುದು ಕತೆಗೆ ಇರುವ ಶುದ್ಧ ಶಕ್ತಿಗೋಸ್ಕರ ಮಾತ್ರಾ. ಬರೆಯಬೇಕೆಂದು ಕೂತಾಗ, ಎಲ್ಲ ಪ್ರಭಾವಗಳಿಂದ ಬಿಡಿಸಿಕೊಂಡೆದ್ದ ಕತೆಯೊಂದು ಜನ್ಮ ತಾಳುವ ಸಡಗರಕ್ಕೆ ನಮಸ್ಕರಿಸುತ್ತಾ ಮತ್ತೊಂದು ಸಂಕಲನವನ್ನು ಕೈಗಿಡುತ್ತಿದ್ದೇನೆ.
ನನಗೆ ಮೊದಮೊದಲು ಕತೆ ಹೇಳಿದವಳು ಅಮ್ಮ, ಪುರಾಣವಷ್ಟೇ ಅಲ್ಲ, ಮ್ಯಾಗಜಿನ್ನು, ಪುಸ್ತಕ ಕೊಟ್ಟು ಓದಲು ಹಚ್ಚಿದವಳೇ ಅಮ್ಮ. ಅಷ್ಟೇ ಚೆನ್ನಾಗಿ ಕತೆ ಹೇಳಿ, ನನ್ನ ಬಾಲ್ಯವನ್ನು ವರ್ಣಮಯವಾಗಿಸಿದವರು ರತ್ನ, ಪದ್ದಿ ಮೊದಲಾದವರು. ಅವರು ಓದಿದವರಲ್ಲ, ಆದರೆ ನಾವೆಷ್ಟೇ ಓದಿಕೊಂಡರೂ ಅವರಷ್ಟು ಅದ್ಭುತವಾಗಿ, ಸರಳವಾಗಿ, ಮನ ಮುಟ್ಟುವಂತೆ, ಸ್ವಲ್ಪವೂ ಅಟೆಂಶನ್ ಸ್ಪ್ಯಾಮ್ ಹೋಗದಂತೆ ಹಾಗೆ ಕತೆ ಹೇಳಿದ್ದನ್ನು ಈವರೆಗೂ ಯಾರಲ್ಲೂ ನೋಡಿಲ್ಲ. ಅವರೆಲ್ಲರೂ ನನ್ನೊಳಗೆ ತುಂಬಿದ ಕತೆಗಳಿಗೆ ನಮಸ್ಕಾರ.” ಎಂದಿದ್ದಾರೆ.
ಪ್ರಕಟಿಸಿದ: ಸೆಪ್ಟೆಂಬರ್ ೧೨, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬