ಮುಗಿಲ ನಕ್ಷತ್ರ
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೨೨, ೨೦೨೬
೬ ವೀಕ್ಷಣೆಗಳು
ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕೊಂಡಿರುವ ‘ಮನದ ಮಾತು’ಗಳು ‘ಕವನದ ಕಿಡಿ’ ರೂಪದಲ್ಲಿ ನಿಮ್ಮ ಓದಿಗಾಗಿ ಇಲ್ಲಿವೆ…
“ಕವಿತೆಗಳು ಅದೆಷ್ಟೋ ಜನರ ಬರವಣಿಗೆಯ ಮೊದಲ ಮೆಟ್ಟಿಲು. ಬರವಣಿಗೆಯನ್ನು ಪ್ರಾರಂಭಿಸುವುದೇ ಕವಿತೆಗಳ ಮೂಲಕ. ನನ್ನದೂ ಅದೇ ಮಾರ್ಗವೇ. ನಾನೂ ಕೂಡ ನನ್ನ ಬರವಣಿಗೆಯನ್ನು ಪ್ರಾರಂಭಿಸಿದ್ದು ಕವಿತೆಗಳ ಮೂಲಕವೇ.
ನನ್ನ ಮನಸ್ಸಿನಲ್ಲಿ ಮೂಡಿದ ಅದೆಷ್ಟೋ ಭಾವನೆಗಳಿಗೆ ಅಕ್ಷರಗಳ ರೂಪುಕೊಟ್ಟು ಕವಿತೆಯನ್ನಾಗಿಸಿದ್ದೇನೆ. ಬರವಣಿಗೆಯ ಪ್ರಾರಂಭದಲ್ಲಿ ಪುಟ್ಟ ಪುಟ್ಟ ಕವಿತೆಗಳನ್ನು ಗೀಚುತ್ತಿದ್ದೆ, ಅರ್ಥವೇ ಇಲ್ಲದಂತೆ. ನಂತರದಲ್ಲಿ ಒಂದಿಷ್ಟು ದೊಡ್ಡ ದೊಡ್ಡ ಕವಿತೆಗಳನ್ನೂ ಬರೆದೆ. ಕತೆಯ ರೂಪದಲ್ಲಿ. ಆ ನಂತರದಲ್ಲಿ ಗೆಳೆಯರ ಸಲಹೆ. ಓದಿನ ವಿಸ್ತಾರವು ನನ್ನ ಬರವಣಿಗೆಯ ದಿಕ್ಕನ್ನು ಬದಲಾಯಿಸುವಂತೆ ಮಾಡಿತು. ನನ್ನಲ್ಲೇ ಅರಿವಿಲ್ಲದೆಯೇ ಒಂದು ಸಂವೇದನೆ ಹುಟ್ಟಿಕೊಂಡಿತು. ಈ ಸಂವೇದನೆಯ ಬರವಣಿಗೆಯ ರೂಪವೇ ಇಲ್ಲಿರುವ ಕವನಗಳು.
ಇವು ಕೇವಲ ಕವಿತೆಗಳ ಗುಚ್ಚ ಮಾತ್ರವಲ್ಲ. ಅದು ಯಾರಿಗೂ ಹೇಳಲಾಗದ ಅದೆಷ್ಟೋ ಭಾವನೆಗಳ ವರ್ಣ(ಅಕ್ಷರ)ಮಯ ಚಿತ್ರ. ಚಿಕ್ಕಂದಿನಿಂದಲೂ ಬದುಕಿನ ಪಾಠದೊಂದಿಗೆ ಅಕ್ಷರಗಳ ಪಾಠವನ್ನು ಕಲಿಸಲು ಕೊನೆವರೆಗೂ ಹೆಣಗಿದ ನನ್ನಪ್ಪನ ಕಥೆಯೇ ಈ 'ಮುಗಿಲ ನಕ್ಷತ್ರ'.
ನನ್ನ ಹುಚ್ಚು ಬರವಣಿಗೆಯನ್ನು ಮೆಚ್ಚಿ ಧನ ಸಹಾಯ ನೀಡಿ ಪ್ರೋತ್ಸಾಹಿಸಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೂ, ಹಾಗೆಯೇ ನನ್ನಲ್ಲಿರುವ ಕನ್ನಡ ಮನಸ್ಸನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡಿ ನನ್ನ ಪುಸ್ತಕಕ್ಕೆ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟ ಡಾ. ನಾಗಣ್ಣ ಕಿಲಾರಿ ಅವರಿಗೂ ಹಾಗೂ ನನ್ನ ಪ್ರತಿಯೊಂದು ತಪ್ಪುಗಳನ್ನು ತಿದ್ದಿ ಪಿ.ಎಚ್.ಡಿ ಜೊತೆಗೆ ಬದುಕಿಗೂ ಮಾರ್ಗದರ್ಶನ ನೀಡಿ ಬೆನ್ನುಡಿ ಬರೆದುಕೊಟ್ಟ ಡಾ.ಎ.ಮೋಹನ ಕುಂಟಾರ್ ಅವರಿಗೂ ವಂದನೆಗಳು.
ಅದೇ ರೀತಿ ನನ್ನ ಪ್ರತಿಯೊಂದು ಆಸೆ, ಕನಸುಗಳಿಗೆ ನೀರೆರುದು ಪೋಷಿಸುತ್ತಿರುವ ಅಪ್ಪ ಮಹಾಂತೇಶ್ ಗೌಡ, ಅಮ್ಮ ಬಸಮ್ಮ, ಅತ್ತೆ ನೀಲಮ್ಮ ಹಾಗೂ ನನ್ನ ಪ್ರತಿಯೊಂದು ಕೆಲಸವನ್ನು ಪ್ರೋತ್ಸಾಹಿಸುವ ಸಹೋದರಿ ಲಕ್ಷ್ಮೀ ಮತ್ತು ಸಹೋದರ ಮಣಿಕಂಠ ಹಾಗೆಯೇ ನನ್ನೆಲ್ಲಾ ಕನಸಿಗೂ ಬೆನ್ನಲುಬಾಗಿ ನಿಂತಿರುವ ಪ್ರೀತಿಯ ಪತಿರಾಯರು ಮಹಾಂತೇಶ್ ಎಸ್. ಅವರಿಗೂ ವಂದನೆಗಳು.
ಅದರಂತೆ ನನ್ನೆಲ್ಲಾ ಕವಿತೆಗಳನ್ನು ಓದಿ ಮೆಚ್ಚುಗೆಯ ಜೊತೆಗೆ ಸಲಹೆಯನ್ನೂ ನೀಡುತ್ತಿರುವ ನನ್ನೆಲ್ಲಾ ಸ್ನೇಹಿತರಿಗೂ ಹೃತ್ತೂರ್ವಕ ವಂದನೆಗಳು. ನನ್ನ ಕೃತಿಯನ್ನು ಹೊರತರಲು ಸಹಕರಿಸುತ್ತಿರುವ ಸಾಹಿತ್ಯ ನಿಧಿ ಪತ್ರಿಕೆ ಮತ್ತು ಪ್ರಕಾಶನ ಗುಬ್ಬಿ ಅವರಿಗೆ ಹಾಗೂ ಪ್ರಕಾಶಕರು ಅಧ್ಯಕ್ಷರು ಆದ ಅಂಜನ್ ಕುಮಾರ್ ಪಿ.ಆರ್. ಅವರಿಗೆ ಮತ್ತು ಪುಟ ವಿನ್ಯಾಸ ಮಾಡಿರುವ ಆನಂದ್ ಕ್ರಿಯೇಷನ್ ಅವರಿಗೂ, ನನ್ನ ಕಲ್ಪನೆಯನ್ನು ವಿನ್ಯಾಸದಲ್ಲಿ ಸುಂದರವಾಗಿ ಚಿತ್ರಿಸಿದ ವಿ.ಎಲ್. ಪ್ರಕಾಶ್ ಅವರಿಗೂ ಹಾಗೂ ಈ ಮುಗಿಲ ನಕ್ಷತ್ರ ಕೃತಿಗೆ ಸಹಕರಿಸಿದ ಎಲ್ಲರಿಗೂ ಸಹ ನನ್ನ ಹೃದಯಪೂರ್ವಕ ಧನ್ಯವಾದಗಳು, ನಿಮ್ಮೆಲ್ಲರಿಗೂ ನಾನು ಚಿರಋಣಿ.”
ಈ ಕೃತಿಗೆ ೨೦೨೫-೨೬ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇದರ ಸಹಾಯ ಧನ ಲಭಿಸಿದೆ.
ಪ್ರಕಟಿಸಿದ: ಏಪ್ರಿಲ್ ೨೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬