ಕಡೇಮನೆ ಗೋಪಾಲ
ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೧೩, ೨೦೨೬
೮ ವೀಕ್ಷಣೆಗಳು
ದಿನೇಶ ಹುಲಿಮನೆಯವರ ‘ಕಡೇಮನೆ ಗೋಪಾಲ’ ಕಾದಂಬರಿಯು ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ಎಂಬ ಪೆಡಂಭೂತದ ಬಗ್ಗೆ ವಿಸ್ತೃತವಾಗಿ ಚಿತ್ರಿಸುತ್ತಾ ಹೋಗುತ್ತದೆ. ಈ ಕಾದಂಬರಿಗೆ ಲೇಖಕರು ಬರೆದ ನಾಲ್ಕು ಸಾಲುಗಳು ಹೀಗಿವೆ… “ಪ್ರತಿ ಮಾನವನ ದೇಹದ ವಿನ್ಯಾಸ, ಹುಟ್ಟು-ಸಾವು, ಹಸಿವು-ನಿದ್ರೆ ಎಲ್ಲವೂ ಎಲ್ಲಾ ಜಾತಿಗಳಿಗೂ ಒಂದೇ ರೀತಿಯಾಗಿರುವಾಗ ಆ ಜಾತಿ ಮೇಲು!! ಈ ಜಾತಿ ಕೀಳು! ಎನ್ನುವ ಹುರುಳಿಲ್ಲದ ವಿಚಾರಕ್ಕೆ ಅರ್ಥವೇ ಇಲ್ಲ ಎನ್ನುವ ಸಂಗತಿ ನಮಗೆ ಇನ್ನೂ ಅರ್ಥವಾಗಿಲ್ಲ ಎನ್ನುವುದೇ ವಿಷಾದದ ಸಂಗತಿ. ಈ ಜಾತಿ ಪದ್ಧತಿ ಹೇಗೆ ಹುಟ್ಟಿಕೊಂಡಿತು. ಯಾರಿಂದ ಹುಟ್ಟಿಕೊಂಡಿತು ಎನ್ನುವುದು ಕಾದಂಬರಿಯ ವಿಷಯವಲ್ಲ. ಅದು ಇಲ್ಲಿ ಅಪ್ರಸ್ತುತ. ಆದರೆ ಹೀಗೆ ಹುಟ್ಟಿಕೊಂಡ ಜಾತಿ ಪದ್ಧತಿ ಸೃಷ್ಟಿಸಿದ ಅವಾಂತರಗಳಿವೆಯಲ್ಲ! ಯಾವ ತಪ್ಪನ್ನೂ ಮಾಡದ ಒಂದಿಷ್ಟು ಜನರ ಬದುಕಿನ ಸುಂದರ ಕ್ಷಣಗಳನ್ನು ಕಿತ್ತುಕೊಂಡ ಪರಿ ಹಾಗೂ ಅದೆಷ್ಟೋ ಜನರ ಬದುಕನ್ನೇ ಮುಗಿಸಿದ ದುರಂತ ಕಥೆಗಳನ್ನು ಮರೆಯಲಾದೀತೇ!! ಅಂತಹ ಒಂದು ಉದಾಹರಣೆಯನ್ನ ತೆರೆದಿಡುವ ಪ್ರಯತ್ನವಷ್ಟೇ, ಅಲಿಖಿತವಾಗಿ ಜಾರಿಗೆ ಬಂದ ಈ ಪದ್ಧತಿಯ ಆಳ ಮತ್ತು ಅಗಲ ನಿಜವಾಗಿಯೂ ನಿಬ್ಬೆರಗಾಗಿಸುವಂತದ್ದು. ಸಾಮಾನ್ಯ ಜನ ಈ ಪದ್ಧತಿಯನ್ನು ತಮ್ಮ ಚೌಕಟ್ಟು ಅಥವಾ ಪರಿಧಿ ಎಂದು ಕೊಂಡರೆ ಒಂದಿಷ್ಟು ಜನ ಅದನ್ನೇ ಬೇಲಿಯಾಗಿಸಿಕೊಂಡರು. ಮುಗ್ಧ ಅಥವಾ ಅಷ್ಟೇನೂ ತಿಳುವಳಿಕೆ ಇಲ್ಲದ ಜನರನ್ನು ಅದರಿಂದ ಬಂಧಿಸುವ ಪ್ರಯತ್ನ ನಡೆಯಿತು. ಪ್ರೀತಿ, ಪ್ರೇಮ, ಆದರ, ಹಾದರ ಎಲ್ಲವನ್ನೂ ಜಾತಿಯ ಆಧಾರದ ಮೇಲೆ ತಮಗೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನಿಸಿದ್ದೂ ಆಯಿತು. ಕಾಲಕ್ರಮೇಣ ಪರಿಸ್ಥಿತಿ ಬದಲಾಗಿ ಒಂದಿಷ್ಟು ಜನ ಬೇಲಿಯನ್ನು ದಾಟಿ ಬರುವ ಪ್ರಯತ್ನ ಮಾಡಿದರೆ, ಇನ್ನು ಕೆಲವರು ಮಾತ್ರ ಆ ನಿಯಮಗಳನ್ನೇ ಜೈಲು ಎಂದುಕೊಂಡುಬಿಟ್ಟರು. ಅದರಿಂದ ಆಚೆ ಬರುವುದಾಗಲೀ ಅಥವಾ ಅದರ ಹೊರಗಿನ ಪ್ರಪಂಚವನ್ನು ನೋಡುವ ಪ್ರಯತ್ನವನ್ನಾಗಲೀ ಮಾಡಲೇ ಇಲ್ಲ. ಅಷ್ಟೇ ಅಲ್ಲದೆ ಆ ಗೆರೆಯ ಆಚೆ ನೋಡುವುದೇ ಅಪರಾಧ ಎನ್ನುವಷ್ಟರ ಮಟ್ಟಿಗೆ ಸಂಕುಚಿತರಾಗಿ ತಮ್ಮನ್ನು ತಾವೇ ಬಂಧಿಸಿಕೊಂಡರು. ತಮ್ಮ ಮುಂದಿನ ಪೀಳಿಗೆ ರೆಕ್ಕೆ ಬಿಚ್ಚಿ ಹಾರಲು ಪ್ರಯತ್ನಿಸಿದಾಗ ಅದು ಅವರಿಗೆ ಸಹಜವಾಗಿ ಅಪರಾಧ ಎಂಬಂತೆ ಕಂಡಿತು. ಪಾತರಗಿತ್ತಿಯಂತೆ ಸ್ವತಂತ್ರವಾಗಿ ಹಾರಲು ಬಯಸಿದ ಜೀವಗಳು ಹಾದರದಂತೆಯೂ, ಗರಿಬಿಚ್ಚಿದ ನವಿಲುಗಳು ವ್ಯಭಿಚಾರಿಗಳಂತೆಯೂ ಭಾಸವಾದವು. ಜೈಲಿನಲ್ಲಿದ್ದ ತಮ್ಮನ್ನು ಬಿಡಿಸಲು ಬಂದವರು ಕೂಡ ಅವರಿಗೆ ಕೆಟ್ಟವರಾಗಿ ಕಂಡರು. ಹೀಗೆ ತಮ್ಮನ್ನು ತಾವೇ ಬಂಧಿಸಿಕೊಂಡವರ ಸಾಲಿನಲ್ಲಿ ಬರುವ ಪಾತ್ರವೇ 'ಕಡೇಮನೆ ಗೋಪಾಲ'
ರೆಕ್ಕೆ ಬಿಚ್ಚಿ ಹಾರಲು ಬಯಸಿದ್ದು ಗೋಪಾಲನ ಮಗಳು! ಸಹಜವಾಗಿ ಅದಕ್ಕೆ ಒಪ್ಪದ ಗೋಪಾಲನ ಮನಸ್ಸು! ಇದೆಲ್ಲದರ ನಡುವೆ ಒಂದಿಷ್ಟು ಮಾನವೀಯ ಮನಸ್ಸುಗಳು ಮಾತ್ರ ಗೋಪಾಲನಂತಹ ಅಳುಕು ಮನಸ್ಸುಗಳ ಬದಲಾವಣೆಗೆ ಸಣ್ಣ ಪುಟ್ಟ ಪ್ರಯತ್ನ ಮಾಡುತ್ತಲೇ ಇದ್ದವು. ಎಲೆ ಮರೆಯ ಕಾಯಿಯಂತೆ ಅಲ್ಲಲ್ಲಿ ಬದಲಾವಣೆಯ ಗಾಳಿ ಬೀಸಿದ ನಿಸ್ವಾರ್ಥ ಮನಸ್ಸುಗಳು, ತಂದೆ-ಮಗಳ ನಡುವಿನ ಮಮತೆ-ಪ್ರೀತಿ-ವಾತ್ಸಲ್ಯ, ಅಗಲಿಕೆ-ನೋವು, ಬದುಕಿನ ಓಟದಲ್ಲಿ ಬರುವ ತಿರುವುಗಳು! ಇವೇ ಈ ಕಾದಂಬರಿಯ ಕಥಾವಸ್ತು. ಕಥಾವಸ್ತುವಿಗೆ ಪೂರಕವಾದ ಮಲೆನಾಡಿನ ಪರಿಸರ, ಭಾಷೆ ಹಾಗೂ ಬದುಕಿನ ಕೆಲವು ಝಲಕ್ ಗಳು ಬಂದು ಹೋಗುತ್ತವೆ. ಗೋಪಾಲ ಬದಲಾದನಾ? ಅಥವಾ ಗೋಪಾಲನ ಮಗಳು ಮನಸ್ಸನ್ನು ಬದಲಾಯಿಸಿಕೊಂಡಳಾ? ಎನ್ನುವುದನ್ನು ತಿಳಿಯುವ ಕುತೂಹಲದೊಂದಿಗೆ ತಾವು ಈ ಕಾದಂಬರಿಯನ್ನು ಓದುತ್ತೀರಿ ಎನ್ನುವ ನಂಬಿಕೆ ಮತ್ತು ಭರವಸೆ ನನ್ನದು.”
ಪ್ರಕಟಿಸಿದ: ಏಪ್ರಿಲ್ ೧೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬