“ತಾನೊಬ್ಬ  ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ. ಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ. ಊಹುಂ..!! ಖಂಡಿತ ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ, ಒಂದೇನೋ ಅವ್ಯಕ್ತ ಅಸಹಜತೆಯಿದೆ. ಅದು ನಿಗೂಢ..!! ಅದು ವಿಕ್ಷಿಪ್ತ...!! ಅದು ಮನುಷ್ಯ ಸಹಜವಾದ ಸಾವಲ್ಲ, ಅದು ಅತಿಮಾನುಷ....!!” ಈ ಸಾಲುಗಳು ಕಂಡದ್ದು ಲೇಖಕ ಗುರುರಾಜ ಕೋಡ್ಕಣಿ, ಯಲ್ಲಾಪುರ ಅವರ ‘ಅತಿಮಾನುಷ’ ಪುಸ್ತಕದ ಬೆನ್ನುಡಿಯಲ್ಲಿ. ಈ ಕೃತಿಗೆ ಮುನ್ನುಡಿ ಬರೆದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಚಿದಾನಂದ ಮಠಪತಿ. ಅವರ ಅನಿಸಿಕೆಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ… "ಕತ್ತಲು ಆವರಿಸಿಕೊಂಡಾಗ ದೀಪ ಬೆಳಗ್ತೀವಿ. ಆ ದೀಪ ತನ್ನದೇ ಆದ ವ್ಯಾಪ್ತಿಯಲ್ಲಿ ಕತ್ತಲನ್ನು ದೂರ ಮಾಡಿ ಬೆಳಕು ಹರಿಸುತ್ತದೆ. ಮೂರ್ಖರು ನಾವು, ಬೆಳಕು ಕಾಣುವ ಜಾಗವನ್ನಷ್ಟೇ ಸತ್ಯ ಎಂದುಕೊಂಡು ಬಿಡ್ತೀವಿ. ನಮ್ಮ ಆಲೋಚನೆಯ ಪರಿಧೀ ಅಷ್ಟೇ. ಆದರೆ ಆ ಬೆಳಕಿನಾಚೆಗಿನ ಕತ್ತಲಲ್ಲೂ ಜಗತ್ತಿದೆ. ಆ ಜಗತ್ತಿನ ಕತ್ತಲಲ್ಲಿ ಸಾವಿರಾರು ರಹಸ್ಯಗಳು ಅಡಗಿವೆ. ಎಲ್ಲರೂ ಆ ರಹಸ್ಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವುದು ಬೇಕಿಲ್ಲ. ಆದರೆ ನಮ್ಮ ಆಲೋಚನಾ ಪರಿಧಿಯನ್ನೂ ಮೀರಿದ ವಿಷಯಗಳು ಈ ಜಗತ್ತಿನಲ್ಲಿವೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಅಪನಂಬಿಕೆಯ ಪ್ರಶ್ನೆಯೇ ಹುಟ್ಟದು." ಕಾದಂಬರಿಯಲ್ಲಿ ಬರುವ ಈ ಸಾಲುಗಳು, ಜಗತ್ತು ಮತ್ತು ಅದರೊಳಗಿನ ಕುತೂಹಲ ನಮಗೆ ದಕ್ಕಿ ತೆರೆದುಕೊಂಡಿರುವುದಷ್ಟೇ ಅಲ್ಲಾ, ಅದರಾಚೆಗೂ ತರ್ಕಕ್ಕೆ ನಿಲುಕದ, ವಿವರಣೆಗೆ ಸಿಗದ ಹಾಗೂ ಸುಳ್ಳೆಂದು ತಳ್ಳಿ ಹಾಕಲಾಗದ ಅನೇಕ ವಿಷಯಗಳು ಇವೆ ಎನ್ನುವುದನ್ನು ಸಲೀಸಾಗಿ ಅರ್ಥ ಮಾಡಿಸುತ್ತವೆ. ಹೌದು, ನಂಬಿಕೆ ಅಪನಂಬಿಕೆಗಳ ಪ್ರಶ್ನೆಯೇ ಅಂತಹದ್ದು. ಇಲ್ಲಿ ಅನುಭವಕ್ಕೆ ಒಳಗಾದವರು ನಂಬಿದರೆ, ಇನ್ನುಳಿದವರು ಅನುಭವಕ್ಕೆ ಕಾಯುತ್ತಿರುತ್ತಾರಷ್ಟೇ. ವ್ಯಥಾ ಸುಮ್ಮನೇ ನಂಬಿಕೆ ಯಾವುದರೋ ಮೇಲು , ಯಾರ ಮೇಲೊ ಹುಟ್ಟುವುದಿಲ್ಲ. ಅದಕ್ಕೆ ಬಲವಾದ ಶಕ್ತಿ ಇರುತ್ತದೆ. ಅಂತಹ ಶಕ್ತಿಗೆ ಪರ್ವತವನ್ನೇ ಅಲುಗಾಡಿಸುಷ್ಟು ತಾಕತ್ತಿರುತ್ತದೆ.  ಹಾಗೇ ನಂಬಿಕೆ ಅಪನಂಬಿಕೆಗಳ ವಾದಕ್ಕೆ ಸುಲಭವಾಗಿ ತುತ್ತಾಗುವುದು ಕಾಲಾ ಜಾದು ಮತ್ತದರ ರೀತಿ ರಿವಾಜುಗಳೇ. ಅಂತಹದೇ ಕಥಾ ಹಂದರ ಹೊಂದಿರುವ ಕಥೆ ’ಅತಿಮಾನುಷ’. ಇಲ್ಲಿಯು ವಾಮಾಚಾರದ ಕರಾಳ ಹಸ್ತದ ಕರಾಮತ್ತಿದೆ. ಅದಕ್ಕೆ ಬಲಿಯಾಗುವ ಕುಟುಂಬದ ಘೋಳಿದೆ. ದೇಷವಿದೆ. ದ್ವೇಷಕ್ಕೆ ಬಲಿಯಾಗುವ ಜೀವಗಳಿವೆ. ಕೊನೆಗೆ ಕರಾಳ ಹಸ್ತದ ಕರಾಮತ್ತಿಗೂ ಕೊನೆಯಿದೆ. ಕಥೆಯ ನಾಯಕನ ಮಗುವಿನ ಸಾವಿನ ನೋವು ಮರೆಯಾಗುವ ಮುನ್ನವೇ, ಕುಟುಂಬದಲ್ಲಿ ಚಿಕ್ಕಪ್ಪನ ಮಗನ ಸಾವಾಗುತ್ತದೆ. ಆ ಸಾವುಗಳಿಗೆ ಮನೆಯಲ್ಲಿನ ಹೊದಿಕೆ ಕಾರಣ ಎನ್ನುವ ಅನುಮಾನದಲ್ಲಿ ತಲೆ ಕೆಡಿಸಿಕೊಂಡ ನಾಯಕನ ಚಿಂತೆ ಮುಗಿಯುವುದರೊಳಗೆ, ಅವನ ಹೆಂಡತಿಯು ಮತ್ತದೇ ಹೊದಿಕೆಯ ಕಾರಣದಿಂದ ಕೊನೆಯುಸಿರೆಳುತ್ತಾಳೆ.  ಹೀಗೆ ಒಂದರ ಹಿಂದೊಂದರೆ ಮೂರು ಸಾವುಗಳು. ಸಾವುಗಳಿಗೆ ಹೊದಿಕೆಯೇ ಕಾರಣವ? ಅಚಾನಾಕ್ ಆಗಿ ಅಗುತ್ತಿರುವ ಸಾವುಗಳ ಹಿಂದಿನ ಕೈವಾಡ ಯಾರದು? ಹೊದಿಕೆಯ ಮುಖಾಂತಾರ ವಾಮಾಚಾರ ಪ್ರಯೋಗವಾಗಿದೆಯಾ? ಹಾಗಾದರೆ ಆಗಿರುವ ಪ್ರಯೋಗ ಎಂತದ್ದು? ಅದನ್ನು ಸರಿಪಡಿಸುವುದು ಹೇಗೆ? ಕೊನೆಗೆ ನಾಯಕ ಎಲ್ಲವನ್ನೂ ಸರಿಪಡಿಸುತ್ತಾನ? ಎಲ್ಲ ಪ್ರಶ್ನೆಗಳಿಗೂ ಉತ್ತರ ಪುಸ್ತಕವನ್ನು ಓದಿಯೇ ತಿಳಿದುಕೊಳ್ಳಬೇಕು. ಗುರುರಾಜ್ ಅವರು ಸರಳವಾಗಿ ಬರೆದರು ಓದಿಸಿಕೊಂಡು ಹೋಗುವ ತಾಕತ್ತು, ಅವರ ಅಕ್ಷರಗಳಿಗಿವೆ. ಅವರ ಈ ಮೊದಲಿನ ಪುಸ್ತಕಗಳನ್ನು ನಾನು ಓದಿಲ್ಲವಾದರು, ಅವರ ಪೇಸ್ಬುಕ್ಕಿನ ಬರಹಗಳನ್ನು ಓದುತ್ತಿರುತ್ತೇನೆ. ಅವರ ಬರಹಕ್ಕೆ ಸೂಜಿಗಲ್ಲಿನ ಸೆಳೆತವಂತು ಇದೆ. ಅತಿಮಾನುಷ ಪುಸ್ತಕವು ಸಲಿಸಾಗಿ ಓದಿಸಿಕೊಂಡು ಹೋಗುತ್ತದೆ. ಜಾತಕ, ಗ್ರಹಗಳ ಸ್ಥಾನಗಳ ಬಗ್ಗೆ ಅಭ್ಯಸಿಸಿ ಬರೆದ ಚುಟುಕು ವಿವರಣೆಯಷ್ಟೇ, ಇನ್ನು ಚೂರು ಜಾಸ್ತಿ ವಾಮಾಚಾರದ ಜಗತ್ತಿನ ಆಗು ಹೋಗುಗಳಿಗೆ ಗುರುರಾಜ್ ಅವರು ಸಾಕ್ಷಿಯಾಗಿದ್ದರೆ, ಅಥವಾ ಅದರ ಬಗೇಗಿನ ಮಾಹಿತಿಗೆ ತಡಕಾಡಿದ್ದರೆ, ಕಥೆಗೆ ಮತ್ತಷ್ಟು ರೋಚಕ ತಿರುವು ಹಾಗೂ ಇನ್ನಷ್ಟು ಭಯದ ಸಂದರ್ಭಗಳಿಗೆ ತೆರೆದುಕೊಳ್ಳುವಂತೆ ಮಾಡಬಹುದಿತ್ತು ಎನ್ನುವುದು, ಸಾತ್ವಿಕ ಸಾಧಕರ ಜೊತೆ ಒಡನಾಡಿದ, ನನ್ನ ವೈಯಕ್ತಿಕ ಅಭಿಪ್ರಾಯ.”