''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾಧಿಯಾಗುವ ಪಾರಾಗುವನೇ? ಲಾಯರ್ ಪೊನ್ನಪ್ಪ ಇದರಿಂದ ಪಾರಾಗುವನೇ?” ಇದೇ ಈ ಕಾದಂಬರಿಯ ಕಥಾ ಹಂದರ. ಅನಾಮಿಕ ಕರೆಯೊಂದರ ಹಿಂದೆ ಹೋದ ವಕೀಲ ಪೊನ್ನಪ್ಪ, ಕೊಲೆಯೊಂದರ ಸುಳಿಯಲ್ಲಿ ಸಿಲುಕಿ ಬೀಳುವನು. ಅದರಿಂದ ಆತ ಹೊರಗೆ ಹೇಗೆ ಬರುತ್ತಾರೆ, ಅಸಲಿ ಕೊಲೆಗಾರ ಯಾರು?  ಎನ್ನುವುದೇ ಈ ಪತ್ತೇದಾರಿ ಕಾದಂಬರಿಯ ಕುತೂಹಲ ಕೆರಳಿಸುವ ಸಂಗತಿ. ಕನ್ನಡದ ಬಹುತೇಕ ವಾರ, ಮಾಸ ಪತ್ರಿಕೆಗಳಲ್ಲಿ ಪತ್ತೇದಾರಿ ಕಥೆಗಳನ್ನು ಬರೆಯುವ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿದವರು ರವಿರಾಜ ಬೈಕಂಪಾಡಿ. ಹಲವಾರು ಕಥೆಗಳನ್ನು ಬರೆದರೂ ಅವರ ಯಾವುದೇ ಬರಹ ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೇ ಮೊದಲ ಬಾರಿಗೆ ‘ಅನಾಮಧೇಯ ಕರೆ’ ಎನ್ನುವ ರೋಚಕ ಪತ್ತೇದಾರಿ ಕಾದಂಬರಿಯು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ತಮ್ಮ ಚೊಚ್ಚಲ ಕೃತಿಯ ಬಗ್ಗೆ ರವಿರಾಜ ಬೈಕಂಪಾಡಿಯವರು ಬರೆದ ‘ಲೇಖಕರ ಮಾತು” ಹೀಗಿದೆ… “ ಒಬ್ಬ ಮಹಿಳೆಯ ಕೊಲೆ. ಕೆಲವು ಬಲವಾದ ಸಾಕ್ಷ್ಯಗಳು. ಅನುಮಾನಗಳೆಲ್ಲಾ ಒಂದೇ ದಿಕ್ಕಿನತ್ತ ತಿರುಗುತ್ತವೆ - ಒಬ್ಬ ಯುವ ವಕೀಲನತ್ತ. ಪೋಲೀಸರ ತನಿಖೆ ತನ್ನದೇ ದಾರಿಯಲ್ಲಿ ಸಾಗುತ್ತದೆ. ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಆದರೆ ಸಾಕ್ಷ್ಯಗಳ ನೆರಳು ವಕೀಲನ ಮೇಲೆ ಗಾಢವಾಗುತ್ತಲೇ ಹೋಗುತ್ತದೆ. ತನ್ನ ನಿರಪರಾಧಿತ್ವ ವನ್ನು ಸಾಬೀತು ಪಡಿಸಲು ವಕೀಲನಿಗೆ ಉಳಿದದ್ದು ಒಂದೇ ದಾರಿ.. ಸ್ವತಃ ತನಿಖೆ ಮಾಡುವುದು! ಕಾನೂನು ತಿಳಿದವನು ಕಾನೂನಿನ ಬಲೆಗೆ ಸಿಲುಕದಿರಲು ಬಳಸುವ ಆಯುಧವೇನು? ಬುದ್ಧಿವಂತಿಕೆಯೇ? ತರ್ಕವೇ? ಅಥವಾ ಸತ್ಯದ ಮೇಲಿನ ಅಚಲ ನಂಬಿಕೆಯೇ? ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎನ್ನುವ ಮಾತನ್ನು ಪೋಲೀಸರು ಪಾಲಿಸಿದರೆ? ಸಾಕ್ಷ್ಯಗಳು ಸತ್ಯವನ್ನೇ ಹೇಳುತ್ತವೆಯೇ? ಇದು ಈ ಪತ್ತೇದಾರಿ ಕಾದಂಬರಿಯ ತಿರುಳು. ಈವರೆಗೆ ನನ್ನ ಅನೇಕ ಪತ್ತೇದಾರಿ ಕತೆಗಳು ಸುಧಾ, ತರಂಗ, ಮಯೂರ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆಯಾದರೂ, ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಅದಕ್ಕೆ ನನ್ನದೇ ಆದ ಕೆಲವು ಪೂರ್ವಾಗ್ರಹಗಳು ಕಾರಣ ವಾಗಿರಬಹುದು. ಈ ಕಾದಂಬರಿ ಪ್ರಕಟಣೆಯ ಎಲ್ಲಾ ಕ್ರೆಡಿಟ್ಟು ನನ್ನ ಮಿತ್ರರಾದ ಖ್ಯಾತ ಪತ್ತೇದಾರಿ ಲೇಖಕರಾದ ಶ್ರೀ ನಾಗೇಶ್ ಕುಮಾರ್ ಸಿ.ಎಸ್ ಅವರಿಗೆ ಸಲ್ಲಬೇಕು. ನನ್ನ ಮತ್ತು ಅಂಕಿತ ಪುಸ್ತಕದ ನಡುವೆ ಸೇತು ಆದವರು ಅವರು. ಶ್ರೀ ನಾಗೇಶಕುಮಾರರಿಗೆ ನಾನು ಚಿರಋಣಿ. ಪ್ರತಿಷ್ಠಿತ ಅಂಕಿತ ಪುಸ್ತಕದವರು ನನ್ನ ಕಾದಂಬರಿ ಪ್ರಕಟಿಸುತ್ತಿರುವುದು ನನಗೆ ಸಿಕ್ಕ ಗೌರವವೆಂದೇ ಭಾವಿಸುತ್ತೇನೆ. ಪುಸ್ತಕ ಪ್ರಕಟಿಸಿದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಹಾಗೂ ಶ್ರೀಮತಿ ಪ್ರಭಾ ಕಂಬತ್ತಳ್ಳಿ ದಂಪತಿಗೆ ನಾನು ಆಭಾರಿ.”  ಈ ಕಾದಂಬರಿಯ ಮೊದಲ ಅಧ್ಯಾಯದ ಕೆಲವು ಸಾಲುಗಳನ್ನು ಓದಿದಾಗ ನಿಮಗೂ ಈ ಕಾದಂಬರಿಯನ್ನು ಓದಲೇ ಬೇಕೆಂಬ ಕುತೂಹಲ ಕಾಣೀಸಿತು. ಅಪರಾತ್ರಿಯ ಕರೆ ಎನ್ನು ಅಧ್ಯಾಯದಲ್ಲಿ “ ಏಕಾಏಕಿ ಮೊಬೈಲ್ ರಿಂಗಣ ಹೊರಡಿಸಿದಾಗ ಬೆಚ್ಚಿ ಬಿದ್ದ ಪೊನ್ನಪ್ಪ. ಸಿಹಿ ನಿದ್ದೆಗೆ ಜಾರುತ್ತಿದ್ದವನನ್ನು ವಾಸ್ತವಕ್ಕೆ ಎಳೆದು ತಂದ ಕರ್ಕಶವೆನಿಸಿದ ಕರೆ. ಗಡಬಡಿಸಿ ಎದ್ದು ಮೊಬೈಲ್ ಎತ್ತುವಾಗ ದೃಷ್ಟಿ ಅಯಾಚಿತವಾಗಿ ಗೋಡೆಯ ಮೇಲಿದ್ದ ಗಡಿಯಾರದ ಮೇಲೆ ಹರಿಯಿತು. ಹನ್ನೊಂದು ಹೊಡೆಯಲು ಐದು ನಿಮಿಷಗಳು ಬಾಕಿ ಇದ್ದವು. ಮೊಬೈಲ್‌ನಲ್ಲಿ ಕಂಡ ಹೆಸರು... ಶ್ರೀವಲ್ಲಿ! ಎಲ್ಲಿಯೋ ಕೇಳಿದಂತಹ ಹೆಸರು. ಯಾರೆಂದು ನೆನಪಾಗದು!! ತನ್ನ ಮೊಬೈಲ್‌ನಲ್ಲಿದ್ದ ಟ್ರೂ ಕಾಲರ್ ಎಂಬ ತಂತ್ರಾಂಶದಿಂದಾಗಿ ಯಾರೇ ಕರೆ ಮಾಡಿದರೂ ಅವರ ಹೆಸರು ತೆರೆಯಲ್ಲಿ ಕಾಣಿಸುತ್ತಿತ್ತು! ಶ್ರೀವಲ್ಲಿ! ಯಾರಾಕೆ? ಅಪರಾತ್ರಿಯಲ್ಲಿ ಅಪರಿಚಿತ ಕರೆ!! ಅವೇಳೆಯಲ್ಲಿ ಕರೆ ಮಾಡಿದ ಅಪರಿಚಿತ ಕಕ್ಷಿಗಾರ ಯಾರು? ಮೊಬೈಲ್‌ನ ಬೆಳಗುವ ತೆರೆಯ ಮೇಲೆ ಅಡ್ಡವಾಗಿ ಬೆರಳು ಆಡಿಸಿ, ಕಿವಿಗಾನಿಸಿ, ಹಲೋ ಅನ್ನುತ್ತಿದ್ದಂತೇ ಆ ಕೊನೆಯಿಂದ ತೂರಿ ಬಂತು ಭೀತಿ ತುಂಬಿದ ಹೆಣ್ಣಿನ ದನಿ. “ಪೆಮ್ಮಯ್ಯ, ನಾನೀಗ ಅಪಾಯದಲ್ಲಿದ್ದೀನಿ. ತಕ್ಷಣ ಬಾ... ಎದುರಿನ ಗೇಟು ಬೇಡ. ಹಿಂದುಗಡೆ ಕಾವೇರಿ ಥಿಯೇಟರ್ ಕಡೆಯಿಂದ ಪಾಗಾರ ಹಾರಿ ಬಾ. ಹಿಂಬಾಗಿಲು ತೆರೆದು ಕಾದಿರುತ್ತೇನೆ. ರಸ್ತೆಯಲ್ಲಿ ಅವರಿಬ್ಬರೂ ನಿಂತಂತೆ ಕಾಣಿಸುತ್ತಿದೆ. ನಾನು ಇಲ್ಲಿರೋದು ಅವರಿಗೆ ಗೊತ್ತಾದ ಹಾಗಿದೆ. ತಡ ಮಾಡೇಡ... ಕೂಡಲೇ... ಅಯ್ಯೋ... ಬೇಡಾ..'" ಹಠಾತ್ತಾಗಿ ಕೊನೆಯಾಯಿತು ಮಾತು. ಅಪಾಯಕ್ಕೆ ತುತ್ತಾದ ಹೆಣ್ಣಿನ ಆರ್ತ ಕರೆ! ಪೆಮ್ಮಯ್ಯ ಅನ್ನುವವನಿಗೆ ಹೋಗಬೇಕಾದ ಕರೆ ಬಂದುದು ತನಗೆ!! ಆತುರದಲ್ಲಿ ಹೆಣ್ಣು ತಪ್ಪು ಸಂಖ್ಯೆ ಒತ್ತಿರಬೇಕು! ಯಾವ ಪೆಮ್ಮಯ್ಯ? ತನ್ನ ಪರಿಚಯದ ವರ್ತುಲದೊಳಗೆ ಅಂತಹ ಹೆಸರಿನವರಾರು ಇದ್ದಂತಿಲ್ಲ. ಪೊನ್ನಪ್ಪನಿಗೆ ಗಲಿಬಿಲಿ. ತಾನೀಗ ಏನು ಮಾಡುವುದು? ಸಂಕಷ್ಟಕ್ಕೆ ಒಳಗಾದ ಹುಡುಗಿಯ ಕರೆಗೆ ಸ್ಪಂದಿಸಲೆ? ಅಥವಾ ಸಂಬಂಧವಿಲ್ಲದ ಕರೆ ಎಂದು ನಿರ್ಲಕ್ಷಿಸಿಬಿಡಲೆ? ಪೆಮ್ಮಯ್ಯ ಅನ್ನುವವನಿಗೆ ಹೋಗಬೇಕಾದ ಕರೆ ತನಗೆ ಬಂದುದಾದರೂ ಹೇಗೆ? ಆತನ ಮೊಬೈಲ್ ಸಂಖ್ಯೆಗೂ, ತನ್ನ ನಂಬರಿಗೂ ಸಾಮ್ಯತೆ ಇದೆಯೆ? ಅಥವಾ ಇಬ್ಬರ ಹೆಸರುಗಳೂ 'ಪಿ' ಅಕ್ಷರದಿಂದ ಆರಂಭವಾಗುವುದರಿಂದ ಗಡಿಬಿಡಿಯಲ್ಲಿ ಆದ ಅಚಾತುರ್ಯವೆ? ಅದುವೇ ಆಗಿದ್ದರೆ, ಆಕೆಯ ಮೊಬೈಲಿನಲ್ಲಿ ತನ್ನ ಹೆಸರು ಯಾಕೆ ಇದೆ? ತನಗೆ ಆಕೆಯ ಪರಿಚಯವೇ ಇಲ್ಲವಲ್ಲ! ಆ ಸಾಧ್ಯತೆ ಇಲ್ಲವೇ ಇಲ್ಲ. ಪ್ರಾಯಶ: ಸಂಖ್ಯೆಯಲ್ಲಿ ಸಾಮ್ಯತೆ ಇದ್ದಿರಲೇಬೇಕು ಮತ್ತು ಪೆಮ್ಮಯ್ಯನ ಸಂಖ್ಯೆ ಕೂಡಾ ಆಕೆಯ ಮೊಬೈಲ್‌ನಲ್ಲಿ ಸೇವ್ ಆಗಿರೋದು ಸಾಧ್ಯವಿಲ್ಲ! ಹಾಗಾಗಿ, ಆಕೆ ಆತನ ಸಂಖ್ಯೆಯನ್ನು ಗುಂಡಿ ಅದುಮಿ ಕರೆ ಮಾಡಿದ್ದಾಳೆ! ತನ್ನ ತಪ್ಪು ಅರಿತು ಆಕೆ ಪುನ: ಪೆಮ್ಮಯ್ಯನಿಗೆ ಮರಳಿ ಕರೆಮಾಡುವ ಸಾಧ್ಯತೆ ಕಡಿಮೆಯಿದ್ದಂತೆ ತೋರುತ್ತದೆ ಯಾಕೆಂದರೆ ಕೊನೆಯಲ್ಲಿ ಆಕೆ ಅಪಾಯಕ್ಕೆ ತುತ್ತಾದವಳಂತೆ ಆರ್ತನಾದ ಹೊರಡಿಸಿದಳಲ್ಲವೆ? ತಾನು ಕರೆ ಮಾಡಿದ್ದು ಯಾರಿಗೆ ಎಂದು ಕೇಳುವಷ್ಟೂ ವ್ಯವಧಾನ ಆಕೆಗೆ ಇದ್ದಂತಿಲ್ಲ. ಖಚಿತವಾಗಿ ಆಕೆಗೆ ತನ್ನ ಕರೆ ಬೇರೆಯವರಿಗೆ ಹೋಗಿದ್ದು ಗೊತ್ತೇ ಆಗಿಲ್ಲ! ನೇರವಾಗಿ ವಿಷಯ ತಿಳಿಸಿದ್ದಾಳೆ!! ಅಂತಹ ತುರ್ತು ಏನು? ಜೊತೆಗೆ, ತಪ್ಪು ಹೆಸರು ಒತ್ತಿದ್ದೇನೆ ಎಂಬುವುದು ಗೊತ್ತಾಗು ವುದಾದರೂ ಹೇಗೆ? ನಿಶ್ಚಿತವಾಗಿಯೂ ಆಕೆಗೀಗ ಅಪಾಯ ತಟ್ಟಿದೆ. ಪೆಮ್ಮಯ್ಯ ಅಲ್ಲಿಗೆ ಬರುವ ಅವಕಾಶ ತೀರಾ ಕಮ್ಮಿ. ತಾನೀಗ ಮಾಡುವುದಾದರೂ ಏನು? ಸುಮ್ಮಗೆ ನಿದ್ರೆ ಮುಂದುವರೆಸಲೆ? ಆದರೆ ಆ ಹೆಣ್ಣಿನ ದನಿ ಕಿವಿಯಲ್ಲಿ ಗುಂಯ್‌ಗುಟ್ಟಿ ದಂತಾಯಿತು. ಶ್ರೀವಲ್ಲಿ ಯಾವ ತೊಂದರೆಯಲ್ಲಿದ್ದಾಳೆ? ಆಕೆ ಯಾರು? ಎಷ್ಟು ನೆನಪಿಸಿಕೊಂಡರೂ, ಆಕೆಯ ಗುರುತು ಮಸ್ತಿಷ್ಕದಲ್ಲಿ ಮೂಡಲಿಲ್ಲ. ಏನೋ ಯೋಚಿಸಿದವನು ತಲೆ ಕೊಡವಿ, ಮತ್ತೆ ಮೊಬೈಲ್‌ ಗುಂಡಿ ಅದುಮಿದ. ಆ ಕಡೆಯಿಂದ ಕರೆದನಿ ಮೆಲ್ಲಗೆ ತೂರಿ ಬಂತು. ಉಸಿರು ಬಿಗಿ ಹಿಡಿದು ಕಾದವನಿಗೆ ಕೊನೆಯಲ್ಲಿ ಕೇಳಿ ಬಂದಿದ್ದು ಮುದ್ರಿತ ನೀರಸ ಸಂದೇಶ... ನೀವು ಕರೆ ಮಾಡಿದ ವ್ಯಕ್ತಿ ಸದ್ಯಕ್ಕೆ ಯಾವ ಕರೆಯನ್ನೂ ಸ್ವೀಕರಿಸುತ್ತಿಲ್ಲ! ಶ್ರೀವಲ್ಲಿ ಯಾಕೆ ಫೋನು ಎತ್ತಲಿಲ್ಲ? ಹಾಗಿದ್ದರೆ ಆಕೆಗೆ ಅಪಾಯ ತಟ್ಟಿರಲೇಬೇಕು! ಯಾವುದಕ್ಕೂ ಹೋಗಿ ನೋಡೋಣ. ಅದರಿಂದ ತನಗೇನೂ ಅಪಾಯ ತಟ್ಟದು. ತುಸು ದೂರದಿಂದಲೇ ಗಮನಿಸಿದರಾಯಿತು! ಅಗತ್ಯವಿದ್ದರೆ ಮಾತ್ರ ಸನಿಹಕ್ಕೆ ಹೋದರೆ ಸಾಕು ಅಂದುಕೊಂಡ. ಒಂದೊಮ್ಮೆ ಆಕೆ ನಿಜಕ್ಕೂ ತೊಂದರೆಯಲ್ಲಿ ಸಿಲುಕಿಕೊಂಡಿದ್ದರೆ....” ೧೯೨ ಪುಟಗಳ ಈ ಕಾದಂಬರಿಯನ್ನು ನೀವು ಓದಲು ಪ್ರಾರಂಭಿಸಿದರೆ ಮುಗಿಯುವ ತನಕ ಕೆಳಗಿಡಲಾರಿರಿ. ಅಷ್ಟೊಂದು ರೋಚಕವಾಗಿದೆ.