ಶ್ರದ್ಧಾ ಹಂಡಿಗಿ ಬರೆದ ೪೦ ಪುಟಗಳ ಪುಟ್ಟ ಕವನ ಸಂಕಲನದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಇಂದುಮತಿ ಮ. ಅಂಗಡಿ. ಇವರು ಮುನ್ನುಡಿಯನ್ನು ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ನೋಟ… “ಕಾವ್ಯ ನನಗೆ ಯಾವತ್ತೂ ಇಷ್ಟ ಅಷ್ಟೇ ಅಲ್ಲ, ಸಾಹಿತ್ಯ ಪ್ರಕಾರಗಳಲ್ಲಿ ಅದು ಮೊದಲ ಆಯ್ಕೆ ಕೂಡಾ. ಆದರೆ ಕಾವ್ಯ ಹಾಗಿರಬೇಕು, ಹೀಗಿರಬೇಕು, ಹೀಗಿರಬಾರದು ಎಂದು ನಾವು ಗಡಿಗಳನ್ನು ಹಾಕುತ್ತ ಹೋದ ಹಾಗೆ ಅದು 'ಕಾವ್ಯ'ವಾಗದೆ, ಕಾವ್ಯದ 'ಪಠ್ಯ'ವಾದೀತು. ಹಾಗಾಗಿ ಇಲ್ಲಿನ ಕವಿತೆಗಳ ಬಗ್ಗೆ ಮಾತನಾಡಬೇಕಾದದ್ದು ಹೂವನ್ನು ಗಿಡದಲ್ಲಿರುವಾಗ ನೋಡಿ ಆನಂದಿಸಿ ಕಣ್ತುಂಬಿಕೊಳ್ಳುವ ಹಾಗೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ "ಕಾವ್ಯವೆಂದರೆ ಬೆಳಕಿನ ಬೀಜ" ಕವಿಯ ಮನದಲ್ಲಿ ಮೂಡಿದ ಬೀಜವೊಂದು ಅಕ್ಷರ ಭಾವಗಳ ಮೂಲಕ ಹೊರಬಂದು ಅಗಾಧವಾದ ಬೆಳಕನ್ನು ಸುತ್ತೆಲ್ಲ ಚೆಲ್ಲವರಿದ ಹಾಗೆ, 'ಬೆಳಕು' ಅಂದರೇನು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಅದನ್ನು ವ್ಯಾಖ್ಯಾನಿಸುವುದು ಬಲು ಕಷ್ಟ. ಹಾಗೆ ಕವಿತೆಯೂ ಕೂಡಾ. ಕಾವ್ಯವು ಗಾಳಿ ಮತ್ತು ಬೆಳಕಿನಷ್ಟೇ ಸಹಜ ಭಾವಾವೇಶಕ್ಕೆ ಸಂಬಂಧಿಸಿದ ಸಂಗತಿ ಎಂಬ ಅರಿವಾಗುವುದು ಸತ್ಯ. ಇಂಗ್ಲೀಷಿನ ಖ್ಯಾತ ವಿಮರ್ಶಕ ಮ್ಯಾಥ ಅರ್ನಾಲ್ಡ್ ಹೇಳುವಂತೆ “Poetry is the criticism of life" ಅಂದರೆ ಕಾವ್ಯ ತನ್ನದೇ ಆದ ಸತ್ಯ ಮತ್ತು ಸೌಂದರ್ಯದ ನಿಯಮಗಳಿಂದ ಬದುಕನ್ನು ನಿರಂತರವಾಗಿ ವಿಮರ್ಶಿಸುತ್ತದೆ. ಈ ಮಾತುಗಳನ್ನು ಸಾರ್ವತ್ರಿಕವಾಗಿ ಕವಿ ನಂಬಲೇಬೇಕೆಂಬ ಗೊಡವೆ ಬೇಕಿಲ್ಲ. ಏಕೆಂದರೆ ಕಾವ್ಯದ ವ್ಯಾಖ್ಯಾನಗಳು ಕಾಲದ ಪ್ರಕ್ರಿಯೆಗೆ ನಿರಂತರ ಬದಲಾವಣೆಗೊಳ್ಳುತ್ತಿರುತ್ತವೆ. ಆದ್ದರಿಂದ ಕವಿಗೆ ತನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳದೆ, ಬರೆಯುವ ಕಿಂಚಿತ್ತು ಎಚ್ಚರಿಕೆ ಇದ್ದರೆ ಸಾಕು. ಇಷ್ಟು ಮೊದಲ ಮಾತಿನೊಂದಿಗೆ ನಾನು ಯುವ ಕವಯಿತ್ರಿ ಶ್ರದ್ಧಾ ಹಂಡಿಗಿ ಅವರ 'ವಿಹಾರ' (ಬದುಕಿನ ಅಲೆಗಳಲ್ಲಿ) ಕವನ ಸಂಕಲನವನ್ನು ಪ್ರವೇಶಿಸುತ್ತಿದ್ದೇನೆ. ಯುವ ಕವಯಿತ್ರಿ ಶ್ರದ್ಧಾ ಹಂಡಿಗಿ ಅವರು ಬದುಕಿನ ಅಲೆಗಳಲ್ಲಿ ವಿಹರಿಸುವಾಗ ತಾವು ಕಂಡುಂಡ ವಾಸ್ತವ ಬದುಕಿನ ಸತ್ಯಾಸತ್ಯತೆಗಳನ್ನು ಬಲು ಎಚ್ಚರಿಕೆಯಿಂದ ೨೩ ಕವನಗಳಲ್ಲಿ ಸಂಕಲಿಸಿದ್ದಾರೆ. ಈ ಕವನ ಸಂಕಲನ ನನಗೆ ಇಷ್ಟವಾಗಲು ಕಾರಣ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಶ್ರದ್ಧಾ ಹಂಡಿಗಿ ಈಗಾಗಲೇ 'Life-A World' ಎಂಬ ಶೀರ್ಷಿಕೆಯ ಇಂಗ್ಲೀಷ್ ಕವನ ಸಂಕಲನವನ್ನು ಪ್ರಕಟಿಸುವುದರೊಂದಿಗೆ ಯುವ ಕವಯಿತ್ರಿಯಾಗಿ ಸಾಹಿತ್ಯಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. 'ಕಾವ್ಯ ವಾಗ್ದೇವಿಯ ರೂಪ' ಎನ್ನುತ್ತಾರೆ. ಅದನ್ನು ಒಲಿಸಿಕೊಳ್ಳಲು ಕಾವ್ಯಾತ್ಮದ ಪ್ರಜ್ಞೆ ಏಕಮುಖವಾಗಿ ಎದುರು ನಿಲ್ಲಬೇಕು. ಅದೇ ಪ್ರಜ್ಞೆಯಿಂದ ಶ್ರದ್ಧಾ ಕಾವ್ಯವನ್ನು ಒಲಿಸಿಕೊಂಡ ಪರಿ ಅನನ್ಯ ಇವರ ಕವನಗಳು ಇಷ್ಟವಾಗಲು ಮತ್ತೊಂದು ಕಾರಣವೆಂದರೆ, ಮುಗ್ಧ ಮನಸೊಂದು ಕಪಟವಿರದ, ಆಡಂಬರವಿಲ್ಲದ, ಹಮ್ಮು-ಬಿಮ್ಮುಗಳಾಚೆ ಬಂದು, ವಾಸ್ತವದ ನೆಲೆಗಳಲ್ಲಿ ಸದಾ ಉಸಿರಾಡುವ ಹಕ್ಕಿಯ ಸಹಜ ಚಿಲಿಪಿಲಿ ನಾದದ ಇಂಪಿನಂತೆ ಇವರ ಕವನಗಳು ಆನಂದ ನೀಡುತ್ತವೆ. 'ವಿಹಾರ' ಕವನ ಸಂಕಲನದ ಮೊದಲ ಕವನ 'ಜಾಣತನ' ಅರಿವು ಅಸ್ತಿತ್ವಗಳೆರಡೂ ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುವ ಅಳತೆಗೋಲುಗಳು 'ಮಾತಿಗಿಂತ ಕೃತಿ ಲೇಸು' ಎಂಬುದನ್ನು ಬಿಂಬಿಸುತ್ತದೆ. 'ಹಿಂದಿನ ಶಕ್ತಿ' ಕವನದಲ್ಲಿ ಮೌನದ ಗರ್ಭದಲ್ಲಿ ಭಾವನೆಗಳ ಬೀಜ ಆಂಕುರಿಸುತ್ತದೆ. ನಂಬಿಕೆ, ಧೈರ್ಯ, ಪರಿಶ್ರಮ, ನಿರೀಕ್ಷೆಗಳೇ ಮನಸ್ಸಿನ ಶಕ್ತಿಗಳು ಎಂಬ ಸತ್ಯವಿದೆ. 'ಸಾರ್ಥಕ ಜೀವನ' ಕವನವು ಸಾಧಕನ ಸಾಧನೆಗೆ ಅಡ್ಡಗಾಲಾಗಿ ನಿಲ್ಲುವ ಕುಹಕಿಗಳೂ ಕೂಡ ತನ್ನ ಸಾಧನೆಯ ಹೆಜ್ಜೆಗುರುತು ನೋಡಿ ನಡುಗುವಂತೆ ಬದುಕಿ ತೋರಿಸಬೇಕೆಂದು ಹೇಳುವ ಕವಯಿತ್ರಿ ಸತ್ಯ, ಧರ್ಮ, ನ್ಯಾಯಕ್ಕೆ ತಲೆಬಾಗಲು ಕರೆನೀಡಿದ್ದಾರೆ. ಯಾರಿಗೂ ಕೇಡಬಯಸದೆ, ಭೇದವೆಣಿಸದೆ, ಸ್ವಾಭಿಮಾನಿಯಾಗಿ ಬದುಕುವುದೇ ಸಾರ್ಥಕ ಜೀವನ ಎಂದು ವ್ಯಾಖ್ಯಾನಿಸಿದ್ದಾರೆ. "ಸತ್ಯಮೇವ ಜಯತೇ" ಎಂಬ ಮಾತಿಗೆ ಈ ಕವಿತೆ ಇಂಬು ನೀಡಿದೆ. "ಸ್ವಾಭಿಮಾನವೇ ಮುಖ್ಯ
ಒಳ್ಳೆಯತನಕ್ಕಷ್ಟೇ ಜಯ
ಎಂದು ಅರಿತುಕೊಂಡು ಬಾಳು ಮನುಜ
ಅದುವೇ ನಿನ್ನ ಸಾರ್ಥಕ ಜೀವನ" ಎನ್ನುವ ಕವಯಿತ್ರಿ ಇಂದಿನ ಒತ್ತಡ, ಭಾವನಾರಹಿತ, ಯಾಂತ್ರಿಕ ಬದುಕಿನಲ್ಲೂ ಒಳ್ಳೆಯದನ್ನು ಹುಡುಕುವ, ಒಳ್ಳೆಯದನ್ನು ಧರಿಸುವತ್ತ ಸಾಗಿದ್ದುದು ಅಭಿನಂದನೀಯ. 'ಅನುಭವ' ಕವಿತೆಯಲ್ಲಿ ಜೀವನವೊಂದು ಅನುಭವದ ಪಾಠಶಾಲೆ. ಜೀವನದಲ್ಲಿ ಬರುವ ಸುಖ-ದುಃಖ, ಹರುಷ, ಸಹನೆ, ಪ್ರತಿಯೊಂದನ್ನೂ ಪ್ರತಿಕ್ಷಣವೂ ಅನುಭವಿಸಬೇಕೆಂಬ ನಿರೂಪಣೆಯಿದೆ. 'ಸಂಗೀತ' ಕವಿತೆಯಲ್ಲಿ ಶ್ರದ್ಧಾ ಅವರು ಸಂಗೀತದ ಬಗೆಗಿರುವ ಅಭಿಮಾನ. ಪ್ರೀತಿ, ಗೌರವ, ಅನಿವಾರ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಜಗತ್ತು ನಾದಮಯ, ನಾದದ ನಾಡಿ ಮಿಡಿದಾಗಲೇ ಜೀವಸಂಕುಲಕ್ಕೆ ಚೇತನ. ಸ್ವರಗಳ ಮಾಧುರ್ಯ ರಾಗದ ಸೌಂದರ್ಯ, ಮಾನವಕುಲದ ಮನಸ್ಸನ್ನಷ್ಟೇ ಅಲ್ಲದೆ, ಖಗಮೃಗಗಳನ್ನೂ ತಣಿಸುತ್ತದೆ. ಸಂಗೀತದಿಂದ ಭುವಿಯೇ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ-ಇಂತಹ ಸಂಗೀತಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಅದನ್ನೇ ಕವಯಿತ್ರಿ, “ಸಂಗೀತವನ್ನು ಪೂಜಿಸೋ
ಅಸಂಖ್ಯ ಮನಗಳಿಗೆ ಇದುವೇ ದೇವರು
ಸಂಗೀತಕ್ಕೆ ಸಂಗೀತವೇ ಸಾಟ" ಎಂದಿರುವುದು. ಶ್ರದ್ದಾ ಹಂಡಿಗಿಯವರು ಬರವಣಿಗೆಯ ಜೊತೆಗೆ ಹಾಡು, ಸಂಗೀತ ಸಂಯೋಜನೆ, ಛಾಯಾಗ್ರಹಣ ಮುಂತಾದ ಸೃಜನಶೀಲ ಹವ್ಯಾಸಗಳನ್ನು ಮೈಗೂಡಿಸಿಕೊಂಡವರು. ಇವರ ಕವನಗಳು ಯಾವುದೇ ಛಂದಸ್ಸಿನ ಚೌಕಟ್ಟಿಗೆ ಸೀಮಿತವಾಗದೆ, ಮುಕ್ತವಾದ, ಸರಳಸುಂದರ ಅಭಿವ್ಯಕ್ತಿಗಳ ಭರವಸೆಯ ಯುವಕವಯಿತ್ರಿಯರಲ್ಲಿ ಒಬ್ಬರಾದ ಶ್ರದ್ಧಾ ಅವರ ಲೇಖನಿಯಿಂದ ಮತ್ತಷ್ಟು ಗಂಭೀರ, ವೈಚಾರಿಕ ಭಾವಗಳು, ನವಿರಾದ ಕವಿತೆಗಳ ಮೂಲಕ ಧ್ವನಿಸುತ್ತಲೇ ಇರಲಿ. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಶ್ರದ್ಧಾ ಅವರ ಕನ್ನಡ ನುಡಿಸೇವೆ ಅಭಿನಂದನಾರ್ಹ. ಇವರ ಮುಂದಿನ ಬರವಣಿಗೆ ಕುತೂಹಲದಾಯಕವಾಗಿದ್ದು, ಸಂವೇದನಾಶೀಲ ಕೃತಿಗಳು ಹೊರಬರಲಿ. ಇವರಿಗೆ ಒಳಿತನ್ನು ಆಶಿಸುವುದರೊಂದಿಗೆ ತುಂಬು ಯಶಸ್ಸು ದೊರೆಯಲಿ. ಕನ್ನಡ ಓದುಗ ಜಗತ್ತು ಇವರ ಕವನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಇವರ ಸೃಜನಶೀಲ ಶಕ್ತಿಗೆ ಜೊತೆಯಾಗಿರಲೆಂದು ಹಾರೈಸುತ್ತೇನೆ.”