ಕನ್ನಡ ಪ್ರೀತಿಯ ಅಪ್ಪಟ ಕನ್ನಡದ ಕವನ ಸಂಕಲನ ‘ಕನ್ನಡವೆಂದರೆ…’ ಬರೆದದ್ದು ವೀರೇಶ ಬ.ಕುರಿ ಸೋಂಪುರ. ಈ ಕವನ ಸಂಕಲನಕ್ಕೆ ಸೋಂಪುರ ಅವರು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ. ರಾಮಣ್ಣ ಅಲ್ಮರ್ಸಿಕೆರಿ ಅವರು ಮುನ್ನುಡಿಯನ್ನು ಬರೆದು ಹರಸಿದ್ದಾರೆ. ಅವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ… “ತುಂಬಾ ಶ್ರದ್ಧೆ, ಆಸಕ್ತಿಯಿಂದ ಕವಿತೆಗಳನ್ನು ಬರೆಯುವ ಮೂಲಕ ಓದುಗರಲ್ಲಿ ಬೆರಗು ಮೂಡಿಸುವ ಕವಿ ವೀರೇಶ ಬ.ಕುರಿ. ಕಾವ್ಯಸಾಗರದಲ್ಲಿ ಅವರ ಅಕ್ಷರದ ಮುತ್ತುಗಳು ಹೊಳಪನ್ನು ಮೂಡಿಸಿವೆ. ಕವಿ ಕಾಯಕ ಜೀವಿ, ಕಾವ್ಯ ಜೀವಿ, ಭಾವ ಜೀವಿ‌. ಸಾಮಾಜಿಕ ವ್ಯವಸ್ಥೆಯಲ್ಲಿ ನೋಡಿರುವ, ಅನುಭವಿಸಿರುವ ಸಾಮಾಜಿಕ ವಿಷಣ್ಣತೆಗಳನ್ನು, ಕನ್ನಡದ ಸಂಭ್ರಮವನ್ನು, ಕನ್ನಡ ತಾಯಿಯ ಹಿರಿಮೆ, ಗರಿಮೆಗಳನ್ನು ಕಾವ್ಯದ ಮೂಲಕ ನುಡಿ ನಿರೂಪಣೆಗೊಳಿಸಿಕೊಂಡು ಅಂತ:ಕರಣದ ಹಸಿವು ಹಾಗೂ ಕನವರಿಕೆಗಳನ್ನು ನೀಗಿಸಿಕೊಳ್ಳುತ್ತಾರೆ. ಕಾವ್ಯಕ್ಕೆ ದಕ್ಕಬಹುದಾದ ಅಂತಿಮ ಫಲ‌ವೆಂದರೆ ಇದೇ ಅಲ್ಲವೇ. ಕವಿಮಿತ್ರ ವೀರೇಶ ಬ.ಕುರಿ ಅವರ ಕಾವ್ಯ ಹಾಗೂ ಬರಹದ ಹರವು ದೊಡ್ಡದು. ವಿಶಾಲ ದೃಷ್ಟಿಕೋನದ ಮೂಲಕ ವೈಚಾರಿಕತೆ, ಅರಿವು, ಆಧ್ಯಾತ್ಮಕ್ಕೂ ಇಂಬು ನೀಡುತ್ತದೆ. ಕಾವ್ಯ ಯಾವತ್ತೂ ಬದುಕಿನ ಅಂತರ್ಗತ ಭಾಗ ಎಂಬುದು ನಮಗೆ ಗೊತ್ತಿರುವ ಸಂಗತಿಯೇ. ಅಂತಹ ಬಯಲು ಬದುಕಿಗೆ ಮುನ್ನುಡಿ ಮತ್ತು ಕನ್ನಡಿಯಂತಿರುವುದೇ ಈ ಸಂಕಲನದ ಹೆಚ್ಚುಗಾರಿಕೆಯೂ ಹೌದು. ಕಾವ್ಯಾನಂದರು ಈ ನಾಡಿನ ಸತ್ವಯುತ ಕವಿ. ಆಧುನಿಕ ವಚನಗಳ ಪಿತಾಮಹ ಶ್ರೀ ಸಿದ್ದಯ್ಯ ಪುರಾಣಿಕರ ಮಣ್ಣಿನ ವಾಸನೆಯನ್ನು ಮೈಗಂಟಿಸಿಕೊಂಡು ಕಾವ್ಯ ಬೇಸಾಯ ಮಾಡುವ ಮೂಲಕ ಆ ಸತ್ವಯುತ ಮಣ್ಣಿಗೆ ಮನ್ನಣೆ ತಂದುಕೊಡುವ ಬರಹ ಮಾರ್ಗವನ್ನು ಕವಿ ಕಂಡುಕೊಂಡಿದ್ದಾನೆ. ಸದಾ ಕ್ರಿಯಾಶೀಲರಾದ ಕವಿಯ ಕಾವ್ಯ, ಓದುಗರ ಹೃದಯ ತಾಗಿ ಒಲಿದಂತೆ ಹಾಡುತ್ತದೆ. ಮಾನವೀಯ ಸಂಬಂಧಗಳನ್ನು ಬೆಸೆಯುತ್ತಲೇ ನಾಡು ನುಡಿಯ ಪ್ರೀತಿ, ಅಭಿಮಾನ, ಅಕ್ಕರೆಗಳನ್ನು ಬಿತ್ತುವುದೇ ಇವರ ಕಾವ್ಯದ ವೈಶಿಷ್ಟ್ಯ‌. ಕನ್ನಡ ಕಸ್ತೂರಿಯ ಪರಿಮಳವನ್ನು ಹೊತ್ತು ತರುವ ಈ 'ಹೊತ್ತಿಗೆ' ಕನ್ನಡಿಗರ, ಕನ್ನಡಪರ ಮನಸ್ಸುಗಳ ಆಂತರ್ಯದ ಧ್ವನಿಯಾಗಿದೆ. ರೂಪಕ, ಉಪಮೆಗಳ ಮೂಲಕ ಭಾಷೆಯನ್ನು ದಕ್ಕಿಸಿಕೊಂಡು ಹೊಸ ದಾರಿಗಳ ಹುಡುಕಾಟದ ಮೂಲಕ ಕಾವ್ಯದ ಹೆದ್ದಾರಿಗೆ ಕವಿ ಪಯಣಿಸಬಲ್ಲರೆಂಬ ನಂಬಿಕೆ ನನ್ನದು. ಪದಗಳನ್ನು ಹೂಮಾಲೆಯಂತೆ ದಂಡೆಕಟ್ಟಿ ತೋರಣ ಮಾಡುವ ಕಲೆ ಸಿದ್ಧಿಸಿದೆ. ಇದಕ್ಕಿಂತಲೂ ಭಿನ್ನವಾಗಿ ಪದಪುಂಜಗಳ ಹೆಣಿಗೆಯನ್ನು ಅರಿಯಬೇಕಷ್ಟೇ. ನನ್ನ ಕನ್ನಡ ನುಡಿಯೇ ನೀನೆಷ್ಟು ಚಂದ| ಏನು ಗೀಚಿದರೂ ಆಗುವುದು ಶ್ರೀಗಂಧ|| ದಿನಕರ ದೇಸಾಯಿಯವರ ಆಶಯದಂತೆ 'ಕ‌ನ್ನಡವೆಂದರೆ..!' ಈ ಸಂಕಲನ ಶ್ರೀಗಂಧದ ಪರಿಮಳವನ್ನೇ ಹೊತ್ತು ತಂದಿದೆ. ಕನ್ನಡದ ಇನ್ನೊಬ್ಬ ಕವಿ ಎ.ಆರ್. ಕೃಷ್ಣಶಾಸ್ತ್ರಿಯವರ ಮಾತನ್ನು ಈ ಸಂದರ್ಭದಲ್ಲಿ ಉಲ್ಲೇಖ ಮಾಡಬೇಕೆನಿಸಿತು. ತಾಯಿಭಾಷೆಯ ಬಗ್ಗೆ ಅವರಾಡಿದ ಮಾತು ತುಂಬಾ ಅನನ್ಯವಾದುದು. "ಮಾತೃಭಾಷೆಯ ಮೂಲಕ ಕಲಿತದ್ದೇ ಮೈಗೆ ಹತ್ತುವುದು. ಮಾತೃಭಾಷೆಯಲ್ಲಿ ಬರೆದದ್ದೇ ನಿಲ್ಲುವುದು". ಕವಿ ಬರೆದಿರುವುದು ಬೆರಳೆಣಿಕೆಯಷ್ಟು ಕೃತಿಗಳಾದರೂ ಆ ಕೃತಿಗಳು ನಮ್ಮ ನಡುವೆ ಅಂದರೆ ಕನ್ನಡ, ಕನ್ನಡದ ಮನಸ್ಸುಗಳ ನಡುವೆ ನಿಲ್ಲಬಲ್ಲವು. ಕವಿತೆಗಳು ಸಿಡಿಲಾಗದಿದ್ದರೂ, ನಕ್ಷತ್ರವಾಗದಿದ್ದರೂ, ಅಮೃತಬಿಂದುವಾಗದಿದ್ದರೂ, ಈ ಸಂಕಲನದ ಕವಿತೆಗಳು ಕನ್ನಡದ ನುಡಿ ಕಿಡಿಯಾಗುವದಂತೂ ಸತ್ಯ. ಇಂತ ಸಣ್ಣ ಕಿಡಿಯಿಂದಲ್ಲವೇ ಅರಿವಿನ ಮಹಾಬೆಳಗು ಮೂಡುವುದು. ಬೆಳಗಿನ ಅಲೆಗಳು ನಮ್ಮನ್ನು ಕೊಂಚ ಮುನ್ನಡೆಸಿದರಷ್ಟೇ ಸಾಕು, ಬರಹದ ಬದುಕಿಗೆ ಸಿಕ್ಕ ಸಾರ್ಥಕತೆಯಲ್ಲದೇ ಮತ್ತೇನು? ಕವಿಯ ಈ ಕೃತಿಯೊಳಗಿನ ಸಾತ್ವಿಕ, ತಾತ್ವಿಕ, ಭಾವನಾತ್ಮಕ ಆಲೋಚನೆಗಳೇ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಪ್ರಜ್ಞೆಯ ವಿಕಾಸಕ್ಕೆ ಸಾಕ್ಷಿಯಾಗಿವೆ. ಇಂತ ಪ್ರಜ್ಞೆಗೆ, ಪರಂಪರೆಗೆ ಈ ಸಂಕಲನ ನಮ್ಮನ್ನು ಮುಖಾಮುಖಿಯಾಗಿಸಬಲ್ಲದು. ಈ ನೆಲದ ಪರಂಪರೆ, ಆಚಾರ, ಅರಿವುಗಳನ್ನು ಸಾರುವ ಬಹಳಷ್ಟು ಕವಿತೆಗಳು ಈ ಸಂಕಲನದಲ್ಲಿವೆ. ಅವುಗಳೆಲ್ಲವೂ ನಮ್ಮ ಅರಿವು, ತಿಳಿವಳಿಕೆಯನ್ನು ವಿಸ್ತರಿಸಬಲ್ಲವು. ತಿಳಿದುಕೊಂಡರಷ್ಟೇ ಇತಿಹಾಸ, ಚರಿತ್ರೆ. ಚರಿತ್ರೆಯ ಭಾಗವಾಗಬೇಕೆಂದವರು ತಿಳಿದುಕೊಳ್ಳಲೇಬೇಕು. ಇಂಥ ತಿಳಿವಿಗೆ ನಮ್ಮನ್ನು ಈ ಕೃತಿ ಪ್ರೇರೇಪಿಸಬಲ್ಲದು. "ಪರಿವರ್ತನೆ ಜಗದ ನಿಯಮ" ಎಂಬಂತೆ ಮನ ಮನದ ಪರಿವರ್ತನೆಗೆ ಕವಿತೆಗಳು ಮಿಡಿಯುತ್ತವೆ‌. ಒಳಿತನ್ನು ಹಿಂಬಾಲಿಸುವ ನಡಿಗೆಯನ್ನು ರೂಢಿಸುತ್ತವೆ. ಜೀವನದ ಹಾಡನ್ನು ಮೌನವಾಗಿ ಆಲಿಸುತ್ತಾ ನಮ್ಮೊಳೊಗಿನ ಒಳಿತನ್ನು ಜಗತ್ತಿಗೆ ತಿಳಿಸುವ ಹಂಬಲವನ್ನು ಹುಟ್ಟು ಹಾಕುತ್ತವೆ. 'ಸ್ವಾತಂತ್ರ್ಯ ಚರಿತೆ' ಎಂಬ ಕವಿತೆ ನಮ್ಮೊಳಗೆ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ, ಹೋರಾಟದ ಕಿಚ್ಚನ್ನು ಹತ್ತಿಸುತ್ತದೆ‌. ಸ್ವಾತಂತ್ರ್ಯ ಹಿರಿಯರಿಂದ ಬಳುವಳಿಯಾಗಿ ಬಂದದ್ದಲ್ಲ. ಅವರ ಅವಿರತ ಪರಿಶ್ರಮ, ಹೋರಾಟ, ತ್ಯಾಗ, ಬಲಿದಾನಗಳಿಂದ ಬಂದದ್ದು‌. ನಮ್ಮನ್ನು ಪಾರತಂತ್ರ್ಯದಲ್ಲಿ ಬಂಧಿಸಿಟ್ಟಿದ್ದ ಬ್ರಿಟೀಷರ ವಿರುದ್ಧ ಹೋರಾಡಿದ ರೋಚಕ ಕಥೆಯನ್ನೇ ಕವಿತೆ ಅನಾವರಣಗೊಳಿಸಿದೆ. ಹುಸಿ ರಾಷ್ಟ್ರಭಕ್ತಿಯ ಬಗ್ಗೆ ಎಚ್ಚರದಿಂದಿರಬೇಕೆಂಬ ಆಶಯವೂ ಕೂಡ ಇದರಲ್ಲಿದೆ. ದಿಕ್ಕು ದೆಶೆಯಿಲ್ಲದೆ ವರ್ತಿಸುವ ಯುವ ಸಮುದಾಯ ಇದನ್ನು ಅರ್ಥೈಸಿಕೊಳ್ಳಬೇಕಿದೆ. ಹೊಡೆದರೂ, ಬಡಿದರೂ, ಕೇಡು ಬಗೆದರೂ, ಯಾರೇನೆ ಬಯಸಿದರೂ ಹೊಸ ಮನುಷ್ಯನಾಗುವೆ. ಮನುಷ್ಯರಂತೆ ಬದುಕುವೆ. ಮನುಷ್ಯತ್ವವನ್ನೇ ಬಿತ್ತುವೆ. ಬಿತ್ತುತ್ತಾ ಬಯಲಲ್ಲಿ ಬಯಲಾಗುವೆ ಎಂಬ ಕವಿಯ ಆಶಯ ಈ ಕೆಳಕಂಡ ಕವಿತೆಗಳಲ್ಲಿ ಎದ್ದುಗಾಣುತ್ತಿದೆ‌. 'ಸಾಮರಸ್ಯದ ಹಾಡು', 'ಬರುವುದೆಲ್ಲವೂ ಬರಲಿ', 'ಕೆರಳಿಸಬೇಡಿ', 'ಬರೀ ಹೆಸರಲ್ಲ', 'ಏನು ಬಂತು?', 'ಜಾತಿಯ ಜಂಗು', 'ಆಲಿಸಿರಿ ದಯವಿಟ್ಟು'. ಬಿಕ್ಕಟ್ಟು ಬಂದಾಗಲೆಲ್ಲಾ ಕವಿ ಸ್ವಾತಂತ್ರ್ಯ, ಸಮಾನತೆ, ವಿಶ್ವಬಂಧುತ್ವದ ಬಗ್ಗೆ ಧ್ವನಿ ಎತ್ತಬೇಕು. ಈ ಮೌಲ್ಯಗಳ ಮರು ಸ್ಥಾಪನೆಗೆ ಶ್ರಮಿಸಬೇಕು. ಈ ಆಶಯಗಳ ಕಾವ್ಯ ಕೃಷಿಯಲ್ಲಿ ಕವಿ ತೊಡಗಿಸಿಕೊಂಡಿದ್ದಾರೆನ್ನುವುದೇ ಅಭಿಮಾನದ ಸಂಗತಿ. "ಆದರ್ಶ ನಮ್ಮ ಅನುಕೂಲಕ್ಕೆ ಅಲ್ಲ, ಇಡೀ ಮನುಕುಲಕ್ಕೆ" ಎಂಬಂತೆ ಮನುಕುಲಕ್ಕೆ ಒಳಿತಾಗುವ, ಬದುಕಿನ ಬೆಲೆ ಹೆಚ್ಚಿಸುವ ಬಹಳಷ್ಟು ಕವಿತೆಗಳನ್ನು ಈ ಸಂಕಲನದಲ್ಲಿ ಕಾಣಬಹುದು. ಕನ್ನಡವೆಂದರೆ..! ಈ ಸಂಕಲನದ ಹೆಸರೇ ತುಂಬಾ ವಿಶಿಷ್ಟವಾದುದು. ನಾವು ಓದಬೇಕಷ್ಟೆ. ಬದುಕಿನ ಗೆಲುವನ್ನು ಕಾವ್ಯದ ಮೂಲಕ ಕಂಡುಕೊಂಡ ಕವಿಯ ದಾರಿ ಅಪರೂಪದ್ದು. ಈ ದಾರಿಯಲ್ಲಿ ಮುನ್ನಡೆಯುವ ಕವಿಮಿತ್ರ ವೀರೇಶ ಬ.ಕುರಿ ಇವರಿಗೆ ಗೆಲುವು ದಕ್ಕಲಿ. ಮತ್ತಷ್ಟು ಸಶಕ್ತ ಭಾಷೆ, ರೂಪಕಗಳಿಂದ ಅವರ ಕಾವ್ಯ ಸಂಭ್ರಮಿಸಲಿ. ಮಧುರ ಭಾವಕ್ಕೆ ಹಿಡಿದ ಕನ್ನಡಿಯಂತಹ ಮತ್ತಷ್ಟು ಕೃತಿಗಳು ಹೊರಬರಲೆಂದು ತುಂಬು ಅಭಿಮಾನದಿಂದ ಅಭಿನಂದಿಸುವೆ.” ೧೧೨ ಪುಟಗಳ ಈ ಪುಟ್ಟ ಕವನ ಸಂಕಲನ ಕನ್ನಡಾಭಿಮಾನಿಗಳು ಮೆಚ್ಚುವಂತಿದೆ.