ಕೆ ಎಸ್ ರಮಾಸುಂದರಿ ಅವರ ಮೊದಲ ಕಾದಂಬರಿ ‘ಸತ್ಯದ ಅನಾವರಣ’ ಈ ಬಗ್ಗೆ ಅವರ ಮಾತುಗಳಲ್ಲೇ ಹೇಳುವುದಾದರೆ… “ಆಧುನಿಕ ವಿಜ್ಞಾನದ ಆವಿಷ್ಕಾರಗಳು ಮಾನವ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂಬುದನ್ನು ಬಿಂಬಿಸುವುದೇ ಈ ಕೃತಿಯ ಉದ್ದೇಶ. ಕಥಾವಸ್ತು ತೀರಾ ಹೊಸದೆನಿಸದೆ ಇದ್ದರೂ ಮನುಕುಲದ ಮೇಲೆ ಅದರ ಪರಿಣಾಮ ಸದಾ ನವನವೀನ ಎಂಬುದನ್ನು ಈ ಕೃತಿಯು ಬಿಂಬಿಸುತ್ತದೆ. ಈ ಕಥಾವಸ್ತುವನ್ನು ಸುಮಾರು ಎರಡೂವರೆ ದಶಕಗಳ ಹಿಂದೆಯೇ ಮನದಲ್ಲೇ ಮಥಿಸಿ ಮಥಿಸಿ, ಒಂದು ದಶಕದ ಹಿಂದೆ ಅಕ್ಷರ ರೂಪಕ್ಕೆ ಹಾಳೆಯ ಮೇಲೆ ಇಳಿಸಿ, ಈಗ ಅಚ್ಚಿನ ಮೂಲಕ ಪುಸ್ತಕ ರೂಪಕ್ಕೆ ತರುವ ಪ್ರಯತ್ನ ಮಾಡಿರುವೆ. ಮಗಳಾದ ಶರ್ವಾಣಿಯ ಸತತ ಪ್ರೋತ್ಸಾಹ ಮತ್ತು ಬೆಂಬಲವೇ ಈ ಕೃತಿಯ ಪ್ರಕಟಣೆಗೆ ಮೂಲ ಕಾರಣ. ಜೊತೆಗೆ, ಪತಿ ಶ್ರೀ ನಂಜುಂಡ ಶಾಸ್ತ್ರಿ ಮತ್ತು ಎವಿವಿ ಕಂಪ್ಯೂ ಗ್ರಾಫಿಕ್ಸ್‌ನ ಶ್ರೀಯುತ ವರದರಾಜನ್ ಅವರ ಅಪರಿಮಿತ ಸಹಾಯದಿಂದ ಈ ಕಾರ್ಯ ಯಶಸ್ವಿಯಾಗಿದೆ. ಇದನ್ನು ಯಥಾವತ್ತಾಗಿ ಸ್ವೀಕರಿಸುವ ಸಹೃದಯ ಓದುಗರೆಲ್ಲರಿಗೂ ಈ ಕೃತಿಯು ಮನೋ ರಂಜನೀಯವಾಗಿರುವುದಾಗಿ ಭಾವಿಸುತ್ತೇನೆ.” ಈ ಕೃತಿಯ ಬಗ್ಗೆ ಹೇಳುವುದಾದರೆ “ಇಡೀ ಬ್ರಹ್ಮಾಂಡದ ಅಸ್ತಿತ್ವವಿರುವುದೇ ಸಕಲ ಜೀವರಾಶಿಗಳ ಸೃಷ್ಟಿಯ ಮೇಲೆ. ಸೃಷ್ಟಿಕಾರ್ಯ ನಿಂತುಬಿಟ್ಟರೆ ಈ ಬ್ರಹ್ಮಾಂಡವೇ ಇರುವುದಿಲ್ಲ. ಬ್ರಹ್ಮಾಂಡದ ನಿಯಮಾನುಸಾರ ಜೀವ ಸೃಷ್ಟಿ ನಡೆಯುವುದು ಪ್ರಕೃತಿ ಪುರುಷನ ಸಮಾಗಮದಿಂದ, ಆ ನಿಮಯದಂತೆ ಜನಿಸಿದ ಮಾನವ ಇಂದು ಆ ನಿಯಮಕ್ಕೆ ವಿರುದ್ಧವಾಗಿ ಪ್ರಕೃತಿ ಪುರುಷರ ಸಮಾಗಮ ಇಲ್ಲದೇನೇ ಜೀವಿಯನ್ನು ಹುಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾನೆ. ಶತಕದ ಹಿಂದೆ ಕಲ್ಪನೆಯಲ್ಲೂ ಸಾಧ್ಯವಿಲ್ಲದ್ದಿದ್ದ ಈ ಕಾರ್ಯವು ಇಂದು ಪ್ರಪಂಚದಾದ್ಯಂತ ಲೀಲಾಜಾಲವಾಗಿ ನಡೆಯುತ್ತಿದೆ. ೧೯೭೮ರಲ್ಲಿ ಜನಿಸಿದ ಪ್ರಪಂಚದ ಮೊದಲ ಪ್ರಣಾಳ ಶಿಶುವಿನಿಂದ ಹಿಡಿದು ೧೯೯೬ರಲ್ಲಿ ಕ್ಲೋನಿಂಗ್ ಮೂಲಕ ಜನಿಸಿದ ಕುರಿಯ ತನಕ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಬಾಡಿಗೆ ತಾಯಿಯ ಪ್ರಯೋಗವೂ ಒಂದು. ಒಂದು ಹೆಣ್ಣು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು. ಈ ಕೃತಿಯಲ್ಲಿ ವೈಜ್ಞಾನಿಕ ಅಂಶಗಳಿಗಿಂತ ಹೆಚ್ಚಾಗಿ ಮಾನವನ ಮನಸ್ಥಿತಿಯ ಮೇಲೆ, ಮನುಷ್ಯ-ಮನುಷ್ಯ ಸಂಬಂಧಗಳ ಮೇಲೆ ಹಾಗೂ ಸಮಾಜದ ಮೇಲೆ ಆ ಅಂಶಗಳು ಬೀರುವ ಪರಿಣಾಮಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಪಂಚ ವೈಜ್ಞಾನಿಕವಾಗಿ ಮುಂದುವರೆಯುವುದು ಎಷ್ಟು ಮುಖ್ಯವೋ ಅದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಕೃತಿಯ ಅಂತ್ಯದಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಥಾವಸ್ತು ಸುಮಾರು ಮೂರು ದಶಕಗಳ ಹಿಂದೆ ತೀರಾ ಹೊಸದೆನಿಸುವ ಹಾಗೆ ಇತ್ತು. ಹೀಗಾಗಿ ಅಂದು ಲಭ್ಯವಿಲ್ಲದ ಆಧುನಿಕ ಸಲಕರಣೆಗಳಾದ ಮೊಬೈಲ್, ಇಂಟರ್‌ನೆಟ್ ಮೊದಲಾದುವುಗಳ ಉಪಯೋಗ ಹಾಗೂ ಪ್ರಸ್ತಾಪ ಕೃತಿಯಲ್ಲಿ ಇಲ್ಲ. ಅಂದಿನ ಬದುಕಿನ ಶೈಲಿಗನುಗುಣವಾಗಿ ಆ ಕಥೆಯನ್ನು ಹೆಣೆಯಲಾಗಿದೆ.” ೮೬ ಪುಟಗಳ ಈ ಪುಟ್ಟ ಕಾದಂಬರಿಯನ್ನು ಓದಲು ಪ್ರಾರಂಭಿಸಿದರೆ ಮುಗಿಸಿಯೇ ಕೆಳಗಿಡುವಷ್ಟು ಸ್ವಾರಸ್ಯಕರವಾಗಿದೆ.