ಸಾಮಾಜಿಕ ಸಂಘರ್ಷ ಮತ್ತು ವೈಯಕ್ತಿಕ ದುರಂತದ ಕಥನ: ‘ಅರಿವು’ ಒಂದು ವಿಶ್ಲೇಷಣೆ
ಒಂದು ವೈಯಕ್ತಿಕ ತಪ್ಪು ಕೇವಲ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ, ಅದು ಕುಟುಂಬ, ಸಮಾಜ ಮತ್ತು ಕೆಲವೊಮ್ಮೆ ಇಡೀ ತಲೆಮಾರಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಲ್ಲದು ಎಂಬುದನ್ನು ಮನೋಜ್ಞವಾಗಿ ಚಿತ್ರಿಸುವ ಕೃತಿ ವಿಜಯಲಕ್ಷ್ಮಿ ದಾನರಡ್ಡಿ ಅವರ ‘ಅರಿವು’ ಕಾದಂಬರಿ. ಶೀರ್ಷಿಕೆಯೇ ಸೂಚಿಸುವಂತೆ, ಬದುಕಿನ ಕಠೋರ ವಾಸ್ತವಗಳ ಅರಿವು ಮೂಡುವಷ್ಟರಲ್ಲಿ ಎಲ್ಲವೂ ಕೈಮೀರಿ ಹೋಗುವ ದುರಂತವನ್ನು ಈ ಕಾದಂಬರಿ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಲೇಖಕರು ಕೇವಲ ಒಂದು ಪ್ರೇಮಕಥೆಯನ್ನು ಹೇಳದೆ, ಅದರ ಆಳದಲ್ಲಿರುವ ಸಾಮಾಜಿಕ ಕಟ್ಟಳೆಗಳು, ಮಾನವ ಸಹಜ ದೌರ್ಬಲ್ಯಗಳು ಮತ್ತು ಧರ್ಮ-ಸಂಪ್ರದಾಯಗಳ ಸಂಘರ್ಷವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ.
ಕಾದಂಬರಿಯು ಮಹಾಪುರ ಎಂಬ ಒಂದು ಸಣ್ಣ ಹಳ್ಳಿಯಲ್ಲಿ ತೆರೆದುಕೊಳ್ಳುತ್ತದೆ, ಅಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಧರ್ಮ-ಜಾತಿಯ ಭೇದವಿಲ್ಲದೆ ಅನ್ಯೋನ್ಯವಾಗಿ ಬದುಕುತ್ತಿರುತ್ತವೆ. ಈ ಹಳ್ಳಿಯ ಅತ್ಯಂತ ಗೌರವಾನ್ವಿತ, ಪಂಚಾಂಗ ನೋಡಿ ಭವಿಷ್ಯ ಹೇಳುವುದರಲ್ಲಿ ಪ್ರವೀಣರಾದ ಕುಮಾರಸ್ವಾಮಿಗಳ ಕುಟುಂಬದ ಸುತ್ತ ಕಥೆ ಹೆಣೆಯಲಾಗಿದೆ. ಆದರೆ, ತಮ್ಮ ಮನೆಯಲ್ಲಿ ನಡೆಯಲಿರುವ ಘಟನೆಯನ್ನು ಅರಿಯದ ಕುಮಾರಸ್ವಾಮಿಗಳ ಅಸಹಾಯಕತೆಯು ವಿಧಿಯ ಮುಂದೆ ಮನುಷ್ಯನ ಜ್ಞಾನ ಎಷ್ಟು ಸೀಮಿತ ಎಂಬುದನ್ನು ಸಂಕೇತಿಸುತ್ತದೆ. ಅವರ ಸೊಸೆ ಗಿರಿಜಾ, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ, ಮೂರು ಮಕ್ಕಳ ತಾಯಿಯಾಗಿ, ಪತಿಯ ಪ್ರೀತಿಯಿಂದ ವಂಚಿತಳಾಗಿರುತ್ತಾಳೆ. ಅವಳ ಬದುಕಿನಲ್ಲಿನ ಈ ಭಾವನಾತ್ಮಕ ಶೂನ್ಯವೇ ಅವಳನ್ನು ಮನೆಯ ಕೆಲಸದಾಳು ಫಾತಿಮಾಳ ಮೊಮ್ಮಗ, ಆಕರ್ಷಕ ಯುವಕ ಕರೀಂಖಾನನತ್ತ ಸೆಳೆಯುತ್ತದೆ.
‘ಅರಿವು’ ಕಾದಂಬರಿಯು ಕಾಮ ಮತ್ತು ಅಧಿಕಾರ ದಾಹಗಳು ಮನುಷ್ಯನನ್ನು ಹೇಗೆ ದುರಂತಕ್ಕೆ ತಳ್ಳುತ್ತವೆ ಎಂಬುದನ್ನು ಪರಿಶೀಲಿಸುತ್ತದೆ. ಇಲ್ಲಿ ಗಿರಿಜಾ ಮತ್ತು ಕರೀಂಖಾನರದ್ದು ವಿವಾಹಬಾಹಿರ ಸಂಬಂಧವಾದರೂ, ಲೇಖಕರು ಅದನ್ನು ಕೇವಲ ದೈಹಿಕ ಆಕರ್ಷಣೆಗೆ ಸೀಮಿತಗೊಳಿಸದೆ, ಗಿರಿಜಾಳ ದೃಷ್ಟಿಕೋನದಿಂದ ಅವಳ ಭಾವನಾತ್ಮಕ ಅಗತ್ಯಗಳನ್ನೂ ಮುಂದಿಡುತ್ತಾರೆ. ಗಂಡನಿಂದ ಪ್ರೀತಿ, ಮಾತು, ಕಾಳಜಿ ಸಿಗದಿದ್ದಾಗ ಅವಳ ಮನಸ್ಸು ಬೇರೊಬ್ಬರ ಕಡೆ ವಾಲುತ್ತದೆ. ಈ ಸಂಬಂಧವು ಒಂದು ದಿನ ಇಬ್ಬರೂ ತಮ್ಮ ಮನೆ, ಊರು, ಸಂಪ್ರದಾಯಗಳನ್ನು ತೊರೆದು, ಗಿರಿಜಾಳ ಮೂರು ಮಕ್ಕಳೊಂದಿಗೆ ಸೊಲ್ಲಾಪುರಕ್ಕೆ ಓಡಿಹೋಗುವ ನಿರ್ಧಾರಕ್ಕೆ ತಲುಪುತ್ತದೆ.
ಈ ಓಡಿಹೋಗುವಿಕೆಯು ಕಥೆಯ ದುರಂತದ ಕೇಂದ್ರಬಿಂದು. ಇಲ್ಲಿಂದ ಕಾದಂಬರಿಯು ಎರಡು ಮುಖ್ಯ ಆಯಾಮಗಳಲ್ಲಿ ಚಲಿಸುತ್ತದೆ. ಒಂದು, ವೈಯಕ್ತಿಕ ಮಟ್ಟದಲ್ಲಿ ಗಿರಿಜಾಳ ಬದುಕಿನ ಪತನ. ಇನ್ನೊಂದು, ಸಾಮಾಜಿಕ ಮಟ್ಟದಲ್ಲಿ ಮಹಾಪುರ ಗ್ರಾಮದ ಸಾಮರಸ್ಯದ ಅವನತಿ. ಸೊಲ್ಲಾಪುರದಲ್ಲಿ ಆರಂಭದ ಮೋಹ ಕರಗಿದಂತೆ, ಕರೀಂಖಾನನ ನಿಜವಾದ ಸ್ವಭಾವ ಬಯಲಾಗುತ್ತದೆ. ಮಕ್ಕಳನ್ನು ಹೊರೆಯೆಂದು ಭಾವಿಸುವ, ಅವಳ ಮೇಲೆ ತನ್ನ ಧಾರ್ಮಿಕ ಆಚರಣೆಗಳನ್ನು ಹೇರುವ ಮತ್ತು ಕುಡಿದು ಬಂದು ಹೊಡೆಯುವ ಅವನ ವರ್ತನೆ, ಗಿರಿಜಾ ಯಾವ ಶಂಕರನಿಂದ ದೂರ ಬಂದಳೋ, ಅದಕ್ಕಿಂತ ಕ್ರೂರವಾದ ಶಂಕರನನ್ನು ಕರೀಂಖಾನನಲ್ಲಿ ಕಾಣುವಂತೆ ಮಾಡುತ್ತದೆ. ಅಂತಿಮವಾಗಿ ಅವನು ಅವಳನ್ನು ತೊರೆದುಹೋದಾಗ, ಗಿರಿಜಾ ಅಕ್ಷರಶಃ ಅನಾಥಳಾಗುತ್ತಾಳೆ.
ಸಾಮಾಜಿಕವಾಗಿ, ಈ ಘಟನೆಯು ಮಹಾಪುರದ ಮೇಲೆ ಬೀರುವ ಪರಿಣಾಮ ಅಗಾಧ. ಅಲ್ಲಿಯವರೆಗೂ ಒಂದಾಗಿದ್ದ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತನೆಯಾಗುತ್ತದೆ. ಕುಮಾರಸ್ವಾಮಿಗಳ ಕುಟುಂಬದ ಮರ್ಯಾದೆ ಮಣ್ಣುಪಾಲಾಗಿ, ಅವರು ಸಮಾಜದಲ್ಲಿ ತಲೆ ಎತ್ತಿ ನಡೆಯಲಾಗದ ಸ್ಥಿತಿ ತಲುಪಿ, ಕೊನೆಗೆ ಅದೇ ಕೊರಗಿನಲ್ಲಿ ಸಾವನ್ನಪ್ಪುತ್ತಾರೆ. ಕರೀಂಖಾನನ ಕುಟುಂಬವು ಊರನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದು ವೈಯಕ್ತಿಕ ನಿರ್ಧಾರವು ಇಡೀ ಗ್ರಾಮದ ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ನಾಶಮಾಡಬಲ್ಲದು ಎಂಬುದನ್ನು ಲೇಖಕರು ಮನಕಲಕುವಂತೆ ಚಿತ್ರಿಸಿದ್ದಾರೆ.
ಕಾದಂಬರಿಯ ಉತ್ತರಾರ್ಧವು ಗಿರಿಜಾಳ ಹೋರಾಟ ಮತ್ತು ಅವಳ ಮಕ್ಕಳ ಬದುಕಿನ ದುರಂತವನ್ನು ನಿರೂಪಿಸುತ್ತದೆ. ಮಾರಿಯಪ್ಪ ಎಂಬ ಸಹೃದಯಿ ವ್ಯಕ್ತಿಯ ನೆರವಿನಿಂದ ಅವಳು ಹೊಸ ಬದುಕು ಕಟ್ಟಿಕೊಳ್ಳಲು ಯತ್ನಿಸಿದರೂ, ಗತಕಾಲದ ನೆರಳು ಅವಳನ್ನು ಬಿಡುವುದಿಲ್ಲ. ಅವಳ ಮಗ ಗುರುಲಿಂಗ, ಬಾಲ್ಯದ ಆಘಾತಗಳಿಂದ ಹೊರಬರಲಾಗದೆ, ತಾಯಿಯ ಬಗ್ಗೆ ಸಿಟ್ಟು ಮತ್ತು ಸಮಾಜದ ಕುಹಕಗಳಿಂದ ಖಿನ್ನನಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ದುರಂತವು ಒಂದು ಕ್ಷಣದ ತಪ್ಪಿಗೆ ಹೇಗೆ ಒಂದು ತಲೆಮಾರು ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.
'ಅರಿವು' ಕಾದಂಬರಿಯು ಕೇವಲ ಮನರಂಜನೆಯ ಕಥೆಯಲ್ಲ. ಅದು ಸಾಮಾಜಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಯಾಗಿದೆ. ಹೆಣ್ಣಿನ ಮಾನಸಿಕ ಅಗತ್ಯತೆಗಳು, ಸಾಮಾಜಿಕ ಕಟ್ಟುಪಾಡುಗಳ ಒತ್ತಡ, ಧಾರ್ಮಿಕ ಸಂಘರ್ಷದ ಹುಟ್ಟು ಮತ್ತು ಮಾಡಿದ ತಪ್ಪಿಗೆ ಸಿಗುವ ಶಿಕ್ಷೆಯು ಕೇವಲ ತಪ್ಪಿತಸ್ಥರಿಗಷ್ಟೇ ಅಲ್ಲ, ಅವರ ಸುತ್ತಲಿನ ಅಮಾಯಕರಿಗೂ ತಟ್ಟುತ್ತದೆ ಎಂಬ ಕಠೋರ ಸತ್ಯವನ್ನು ಈ ಕೃತಿ ಸಾರಿ ಹೇಳುತ್ತದೆ. ಪಾತ್ರಗಳ ಸಂಘರ್ಷ, ಹಳ್ಳಿಯ ಜೀವನದ ವಾಸ್ತವಿಕ ಚಿತ್ರಣ ಮತ್ತು ದುರಂತದ ನಿರಂತರತೆಯು ಓದುಗರ ಮನಸ್ಸಿನಲ್ಲಿ ಆಳವಾಗಿ ಉಳಿಯುತ್ತದೆ. ವಿಜಯಲಕ್ಷ್ಮಿ ದಾನರಡ್ಡಿ ಅವರ ಬರವಣಿಗೆಯು ಸರಳವಾಗಿದ್ದರೂ, ಭಾವನೆಗಳನ್ನು ಹಿಡಿದಿಡುವಲ್ಲಿ ಮತ್ತು ಸಾಮಾಜಿಕ ವಾಸ್ತವವನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ.
ಶಿವರಾಜ ಸೂ. ಸಣಮನಿ ಮದಗುಣಕಿ