ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಬರೆದ ಕಥಾ ಸಂಕಲನ ‘ಹವೇಲಿ ದೊರೆಸಾನಿ’ ಈ ಕಥಾ ಸಂಕಲನಕ್ಕೆ ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ ಪತ್ರಕರ್ತರಾದ ರಘುನಾಥ ಚ ಹ. ಇವರು ಬರೆದ ಬೆನ್ನುಡಿಯ ಸಾಲುಗಳು… “ಮನುಷ್ಯನ ಅಂತಃಕರಣ, ಆತ್ಮಸಾಕ್ಷಿ, ಆತ್ಮಘನತೆಯನ್ನು ಶೋಧಿಸುವ ಹಾಗೂ ಎತ್ತಿ ಹಿಡಿಯುವ ಪ್ರಯತ್ನ ಎಲ್ಲ ಕಾಲದ ಸಾಹಿತ್ಯದ ಪ್ರಮುಖ ಲಕ್ಷಣ. ಸಾಹಿತ್ಯದ ಈ ಮೂಲಧಾತುವಿಗೆ ಮತ್ತೆ ಮತ್ತೆ ಮುಖಾಮುಖಿಯಾಗುವ ಕಾರಣದಿಂದಲೇ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ಹವೇಲಿ ದೊರೆಸಾನಿ’ ಸಂಕಲನದ ಕಥೆಗಳು ಗಮನ ಸೆಳೆಯುತ್ತವೆ. ಹಾಗೆಯೇ ಮುಖ್ಯವೆನ್ನಿಸುತ್ತವೆ. ಊರಿಗೆ ಶಾಲೆ ಬಾರದಂತೆ ತಡೆಯುವ ಬಲಿಷ್ಠರ ನಡುವೆ, ಶಾಲೆಗಾಗಿ ತನ್ನ ಭೂಮಿಯನ್ನು ಬಿಟ್ಟುಕೊಡುವ ಕಂಟೆವ್ವ ಗ್ರಾಮೀಣ ಅಂತಃಕರಣದ ಮೂರ್ತರೂಪದಂತೆ ಇಲ್ಲಿದ್ದಾಳೆ. ಅತ್ಯಾಚಾರ, ಕೊಲೆಗಳಂಥ ಅಮಾನುಷ ಘಟನೆಗಳಿಗೆ ಮೂಕಸಾಕ್ಷಿಯಾಗಿರುವ ದೇಶಪ್ರೇಮಿ ಕ್ಯಾಪ್ಟನ್ ಪ್ರತಾಪಮೋಹನ್ ಪಾಟೀಲರ ಪ್ರತಿಮೆ ವರ್ತಮಾನದ ಜಡ್ಡುಗಟ್ಟಿದ ಆತ್ಮಸಾಕ್ಷಿಗೆ ಸವಾಲು ಎಸೆಯುವಂತಿದೆ. ಇಳಕಲ್ ರೇಶಿಮೆ ಸೀರೆಯುಟ್ಟು ಸೊಸೆಯೊಂದಿಗೆ ಚರಗ ಚೆಲ್ಲುವುದರ ಮೂಲಕ ತನ್ನ ಬದುಕಿನ ಸಾರ್ಥಕತೆಯನ್ನು ಪ್ರಕಟಪಡಿಸಲು ಬಯಸುವ ಶ್ಯಾಂವಕ್ಕ ಆತ್ಮಘನತೆಯ ಪ್ರತಿರೂಪದಂತಿದ್ದಾಳೆ. ಸಾವು ಬದುಕಿನ ನಡುವೆ ತೊಯ್ದಾಡುವ ಪತ್ನಿಯನ್ನು ಉಳಿಸಿಕೊಳ್ಳಲು ಹಂಬಲಿಸುವ ಸಂಗಾತಿಯ ಪ್ರೀತಿ ಇಡೀ ಜಗತ್ತಿನ ಸಂಕಟಗಳನ್ನೆಲ್ಲ ಶಮನಗೊಳಿಸುವಷ್ಟು ಆರ್ದ್ರವಾಗಿದೆ. ಒಡಲಿಗೆ ಗಾಯವಾಗಿದ್ದಾಗಲೂ ಗಂಡನ ಕುಟುಂಬದ ಗೌರವವನ್ನು ಕಾಪಾಡಲು ಮುಂದಾಗುವ ಜ್ಯೋತಿ ಆತ್ಮವಿಶ್ವಾಸ ಹಾಗೂ ಆತ್ಮಘನತೆಯ ಸಮೀಕರಣದಂತಿದ್ದಾಳೆ. ಸಮಾಜದ ಜೀವಕೋಶಗಳನ್ನು ಹೆಕ್ಕಿ ಹೆಕ್ಕಿ ಕಥೆಗಳಾಗಿ ದಾಖಲಿಸುತ್ತಿರುವ ‘ಹವೇಲಿ ದೊರೆಸಾನಿ’ಯ ಕಥೆಗಾರ, ಸಾಹಿತ್ಯದ ಜೀವಗುಣವನ್ನು ಎದೆಯಿಂದ ಎದೆಗೆ ದಾಟಿಸುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿರುವಂತಿದೆ. ಭಾವುಕತೆಯೊಂದಿಗೆ ಮೌಲ್ಯ ಮಾದರಿಗಳ ಬೌದ್ಧಿಕ ಹಂಬಲವೂ ಮಿಳಿತಗೊಂಡ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಬರವಣಿಗೆಗೆ ಜವಾರಿ ಭಾಷೆಯ ರುಚಿಯೂ, ಕಸುವೂ ಸೇರಿಕೊಂಡು ಕಥೆಗಳ ಹೊಳಪು, ಬಿಸುಪು ಹೆಚ್ಚಿಸಿದೆ.” ೧೪೪ ಪುಟಗಳ ಈ ಕಥಾ ಸಂಕಲನದ ಕಥೆಗಳು ಓದಲು ಚೆನ್ನಾಗಿವೆ.