‘ಬೊಗಸೆಯಲ್ಲಿ ಕಥೆಗಳು’ ಇದು ಭರವಸೆಯ ಕಥೆಗಾರ್ತಿ ಆಶಾ ರಘು ಅವರ ಅತೀ ಸಣ್ಣ ಕಥೆಗಳ ಸಂಗ್ರಹ. ಒಂಥರಾ ಮಿನಿ ಮಿನಿ ಕಥೆಗಳು. ಇಲ್ಲಿರುವ ಕಥೆಗಳು ಆರಂಭವಾದೊಡನೆಯೇ ಮುಗಿದು ಹೋಗಿ ಗಾಢ ಅರ್ಥವನ್ನು ನಮ್ಮ ಮನದಾಳದಲ್ಲಿ ಬಿತ್ತಿ ಹೋಗುತ್ತದೆ. ಆ ಬಿತ್ತಿ ಹೋದ ಅರ್ಥಗಳು ಬೆಳೆದು ಹೆಮ್ಮರವಾಗಿ ಮತ್ತೆ ಮತ್ತೆ ಕಾಡುತ್ತವೆ ಎಂದು ಅನಿಸುತ್ತದೆ. ಕಥೆಯೊಂದರ ಸ್ಯಾಂಪಲ್ ಇಲ್ಲಿದೆ ನೋಡಿ.. ಹದಿಮೂರು ಮೆಟ್ಟಲುಗಳು: ಮೇಲಿನ ಕೋಣೆಗೆ ಇರುವುದು ಹನ್ನೆರಡು ಮೆಟ್ಟಲುಗಳಲ್ಲ ಹದಿಮೂರು ಅಂತ ಅದೆಷ್ಟು ಬಾರಿ ತಿದ್ದಿ ಹೇಳಿಕೊಟ್ಟರೂ ಅವನು ಹನ್ನೆರಡು ಅಂತಲೇ ಹೇಳುತ್ತಿದ್ದ. ಅವನ ಆಪ್ತಮಿತ್ರರಲ್ಲಿ ಒಬ್ಬನಾದ ಹಿಂದಿನ ಬೀದಿಯ ಡಿಸೌಜ ತೀರಿಕೊಂಡಾಗ, ಎಚ್ಚರವಾಗಿಯೇ ತನ್ನ ವೀಲ್ ಛೇರಿನಲ್ಲಿ ಕುಳಿತು ಆಡುತ್ತಿದ್ದ. ಅಂದಿನಿಂದ ಮೇಲಿನ ಕೋಣಿಗೆ ಇರುವುದು ಹನ್ನೊಂದು ಮೆಟ್ಟಲುಗಳು ಅನ್ನತೊಡಗಿದ! ಇದೊಂದು ಉದಾಹರಣೆಯಷ್ಟೆ. ಕಥೆ ಸರಳ, ಸಣ್ಣದು ಆದರೆ ಅರ್ಥ? ಬಹಳ ನಿಗೂಢ ಮತ್ತು ಅಪಾರ. ಈ ಕಥಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಲೇಖಕರಾದ ವಾಸುದೇವ ನಾಡಿಗ್. ಅವರ ಬೆನ್ನುಡಿಯ ಬರಹಗಳು ಬಹಳ ಅರ್ಥಪೂರ್ಣವಾಗಿವೆ. ಓದಿ ನೋಡಿ… “ಕಥೆಗಳ ಹೀಗೆ ಕಲಾವಿದ ಒಂದು ಪಾರ್ಶ್ವದ ಮುಖವನ್ನು ಮಾತ್ರ ಚಿತ್ರಿಸಿದ ಹಾಗೆ. ಇನ್ನು ಉಳಿದ ಹತ್ತಾರು ಪಾರ್ಶ್ವಗಳು ಕಲ್ಪನೆ, ಚಿಂತನೆ, ಅನುಭವಗಳ ಮೂಲಕ ಪೂರ್ಣಗೊಳಿಸಿಕೊಳ್ಳಲು ಸಹೃದಯ ಪ್ರಯತ್ನ ಮಾಡಬೇಕು. ಇದೊಂದು ಸವಾಲು ಮತ್ತು ರೋಮಾಂಚಕ ಕೂಡಾ. ಕಥೆಗಳ ಗೆಲುವೂ ಕೂಡಾ ಇದೇ ಆಗಿದೆ. ಆಶಾ ರಘು ಅವರ ಇಲ್ಲಿನ ರಚನೆಗಳು ತಾತ್ವಿಕವಾದ ಸಣ್ಣ ಸಣ್ಣ ಟಿಪ್ಪಣಿಗಳ ಹಾಗೆ ಇದೆ. ಕಾದಂಬರಿಗಾರ್ತಿಯಾದ ಆಶಾರವರು ತಮ್ಮ ನಾಳಿನ ದೀರ್ಘ ಕಥನಗಳಿಗೆ ಡೈರಿಯಲ್ಲಿ ಬರೆದಿಟ್ಟುಕೊಂಡ ಅಕ್ಷರ ರೇಖೆಗಳ ಹಾಗಿವೆ. ಹೊಗೆಯ ಮೂಲ, ಗುಜರಿಗೆ ಬಿದ್ದ ಗಡಿಯಾರ. ಮುದುಕನ ನಶ್ಯದ ಡಬ್ಬಿ, ತತ್ವಜ್ಞಾನಿಯ ತಣ್ಣನೆಯ ಸಾವು, ಟೀಚರ್ ಒಬ್ಬಳ ತುಂಡು ಯೂನಿಫಾರ್ಮ, ರಗ್ಗು ಮತ್ತೆ ಮರಳಲಿಲ್ಲ ಇತ್ಯಾದಿ ಎಲ್ಲವೂ ತಾತ್ವಿಕತೆಯಲ್ಲಿ ಭಾರವಾಗಿದೆ. ಬಹುತೇಕ ಕಥೆಗಳಲ್ಲಿ ತಣ್ಣನೆಯ ವಿಷಾದ ಮತ್ತು ಗೆರೆಯೆಳೆಯಲಾಗದ ನೋವಿನ ತಂತು ಮಿಡಿಯುತ್ತದೆ. ಈ ಇಂಥ ಸ್ಥಾಯಿಭಾವವೇ ಎಲ್ಲ ಬಹುತೇಕರ ಸೃಜನಶೀಲಬರಹಗಳ ಮೂಲವಾಗಿದೆ. ಬೊಗಸೆಯಲ್ಲಿನ ಈ ಕಥೆಗಳು ಬೊಗಸೆ ಗಾತ್ರದಲ್ಲೇ ಮುದುಡಿ ಕೂತಿದ್ದರೂ ಕೂಡಾ ಬಿಡಿಸಿ ರೆಕ್ಕೆ ಹಚ್ಚಲಿಕ್ಕೆ ಹೋದರೆ ಆಗಸವನ್ನು ಆವರಿಸಬಲ್ಲುದು. ಇದೇ ಇದರ ಶಕ್ತಿ ಕೂಡಾ. 'ಆವರ್ತ ದಂತಹ ಅವಿಸ್ಮರಣೀಯ ಮಹತ್ಕೃತಿ ಕೊಟ್ಟ ಆಶಾ ರಘು ಅವರ ಸೃಜನಶೀಲ ಬರಹದ ಮುನ್ನೋಟದ ಹಾಗೆ ಹತ್ತು ಹಲವು ಬಿಂಬಗಳು ಇಲ್ಲಿ ಇವೆ.”