ಕಥನ ಕುತೂಹಲ
ಕೆ.ಪಿ.ಅಶ್ವಿನ್ ರಾವ್
ಡಿಸೆಂಬರ್ ೨೯, ೨೦೨೫
೨೬ ವೀಕ್ಷಣೆಗಳು
“ರಾಜೇಂದ್ರ ಬಿ. ಶೆಟ್ಟಿಯವರ ಎರಡನೇ ಕಥಾಸಂಕಲನ ಇದು. ಇದರಲ್ಲಿ ಕುತೂಹಲದಿಂದ ಓದಿಸಿಕೊಳ್ಳುವ ಇಪ್ಪತ್ತಾರು ಕಥೆಗಳಿವೆ. ಶ್ರೀಯುತ ಶೆಟ್ಟಿಯವರ ಕಥೆಗಳು ವಿಶಿಷ್ಟ ಮಾದರಿಯವು. ಗಾತ್ರದಲ್ಲಿ ತುಂಬಾ ಚಿಕ್ಕವು ಅಂತಲೇ ಹೇಳಬಹುದು. ಅತ್ಯಂತ ಕಡಿಮೆ ವಾಕ್ಯಗಳಲ್ಲಿ, ನೇರವಾದ ಭಾಷೆಯಲ್ಲಿ ಕುತೂಹಲ ಮೂಡಿಸುವಂತೆ ಹೇಳುವುದು ಲೇಖಕರ ವೈಶಿಷ್ಟ್ಯ. ಒಂದೆರಡು ವಾಕ್ಯಗಳಲ್ಲೇ ಓದುಗರನ್ನು ಕಥೆಯ ಆಳಕ್ಕೆ ಕೊಂಡೊಯ್ಯ ಬಲ್ಲ ಸಾಮರ್ಥ್ಯ, ಭಾಷೆಯ ಮೇಲಿನ ಹಿಡಿತ ಲೇಖಕರದು. ಹಾಗಾಗಿ ಕಥೆಗಳು ಅನಗತ್ಯ ವಿವರ, ಅತಿಯಾದ ಮಾತುಗಾರಿಕೆ ಇಲ್ಲದೆ ಇಂದಿನ ಓದುಗರಿಗೆ ಅತ್ಯಂತ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
ಕಥೆಗಳಲ್ಲಿನ ವಸ್ತು ವೈವಿಧ್ಯಮಯವಾಗಿದ್ದು ಏಕತಾನತೆ ಇಲ್ಲ. ಪ್ರೀತಿ-ಪ್ರೇಮ, ಸಮಾಜದ ಓರೆ ಕೋರೆಗಳು, ಜನರ ವ್ಯಕ್ತಿತ್ವದಲ್ಲಿನ ಅಚ್ಚರಿಗಳು, ಹೀಗೆ ಹಲವು ಹತ್ತು ಅಂಶಗಳು ಕಥೆಗಳಲ್ಲಿ ಸ್ಥಾನ ಪಡೆದಿವೆ. ಬಹುತೇಕ ಕಥೆಗಳು ಲೇಖಕರು ಹುಟ್ಟಿ ಬೆಳೆದ ಕರಾವಳಿ ಪರಿಸರದ ಹಿನ್ನೆಲೆಯವು. ಅವುಗಳು ಕೈಗೆತ್ತಿಕೊಳ್ಳುವ ಸಮಸ್ಯೆ, ಆಶಯ, ಇವು ಸರ್ವಗ್ರಾಹಿಯಾದವು.
ಎಂತಹ ಸಂಕೀರ್ಣ ವಸ್ತುವನ್ನು ಕಥೆಯಲ್ಲಿ ಹೇಳುವಾಗಲೂ ಅದರ ವಸ್ತುನಿಷ್ಠತೆಗೆ ಭಂಗ ಬರದಂತೆ, 'ತನ್ನ ಅಭಿಪ್ರಾಯವನ್ನು ಎಲ್ಲಿಯೂ ಬಲವಂತವಾಗಿ ಹೇರದಂತೆ ಲೇಖಕರು ತೋರಿಸುವ ಸಂಯಮ, ಸಮಚಿತ್ತತೆ ಮತ್ತೊಂದು ಗಮನಾರ್ಹ ಅಂಶ. ಕಥಾವಸ್ತು ಸರಳವಿರಲಿ, ಸಮಸ್ಯಾತ್ಮಕವಿರಲಿ ನೇರವಾದ ಭಾಷೆಯಲ್ಲಿ ನಿರೂಪಿಸುತ್ತ ಕುತೂಹಲ, ಆಕರ್ಷಣೆಯನ್ನು ಉಳಿಸಿಕೊಳ್ಳುವುದು ಇಲ್ಲಿನ ಕಥೆಗಳ ವಿಶೇಷ ಅವರು ನೀಡುವ ವಾಸ್ತವದ ಚಿತ್ರಗಳು, ಸೃಜಿಸುವ ಸನ್ನಿವೇಶಗಳು ಮನಸ್ಸನ್ನು ತಟ್ಟುವಂತಿದ್ದು ಚಿಂತನೆಗೆ ಹಚ್ಚುವಂತಿವೆ.
"ಸೋಲಿನಲ್ಲೂ ಸುಖ", "ವಾಮನ", "ಕಹಿ ಸತ್ಯ", "ಸಂದಿಗ್ಧ", "ಉಡುಗರೆ" ಕಥೆಗಳು ಪುಟ್ಟವಾಗಿದ್ದರೂ ವಿಶಿಷ್ಟವಾಗಿದ್ದು ಬಹುಕಾಲ ನೆನಪಿನಲ್ಲಿ ಉಳಿಯುವಂಥವು. ಉತ್ತಮ ಛಾಯಾಗ್ರಾಹಕರೂ ಆಗಿರುವ ಶ್ರೀಯುತರು ಸೂಕ್ಷ್ಮಮನಸು ಬದುಕಿನ ಸಮಸ್ಯೆಗಳ ಪರಿಣಾಮಕಾರಿಯಾದ ಕ್ಷಣಗಳನ್ನು ಸೆರೆ ಹಿಡಿದಂತೆ ಕಥೆಗಳು ಭಾಸವಾಗುತ್ತವೆ.” ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ ರಂಗನಾಥ ಕಟ್ಟಾಯ ಇವರು.
‘ಕಥನಕ್ಕೂ ಮೊದಲ ನುಡಿತ’ ಎನ್ನುವ ಮುನ್ನುಡಿಯಲ್ಲಿ ಡಾ. ನಾ.ದಾಮೋದರ ಶೆಟ್ಟಿಯವರು “'ನನ್ನದೂ ಒಂದಿಷ್ಟು' ಅಂದ ರಾಜೇಂದ್ರ ಬಿ. ಶೆಟ್ಟಿಯವರು ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಪ್ಪತ್ತೇಳು ಕತೆಗಳ ಗುಚ್ಛವನ್ನೇ ನೀಡಿ ಅಚ್ಚರಿ ಮೂಡಿಸಿದ್ದರು. ಅವರು ಹೇಳಿದ 'ನನ್ನದೂ ಒಂದಿಷ್ಟು' ಅನ್ನುವುದರ ಅರ್ಥವ್ಯಾಪ್ತಿ ಅಪಾರ ಎಂಬುದನ್ನು ಅವರ ಮೊದಲ ಕಥಾ ಸಮಾಹಾರದ ಸಂದರ್ಭದಲ್ಲಿಯೇ ಊಹಿಸಿದ್ದೆ. ಒಂದೆಂದರೆ ಇವರ ಹೆಚ್ಚಿನ ಕತೆಗಳು ಸಂಖ್ಯೆಯಲ್ಲಿ ಅತಿಯೆನಿಸಿದರೂ ಪುಟಗಳ ವ್ಯಾಪ್ತಿಯಲ್ಲಿ ಮಿತಿ. ಮಲಯಾಳದ ಪ್ರಸಿದ್ದ ಕತೆಗಾರ ವೈಕಂ ಮುಹಮ್ಮದ್ ಬಷೀರ್, 'ಕತೆ ಕಾದಂಬರಿಗಳು ದೀರ್ಘವೆನಿಸಿದರೆ ಅದು ಕ್ರಿಮಿನಲ್ ಒಫೆನ್ಸ್ ಎಂಬುದಾಗಿಯೂ ಓದುಗನ ಮೇಲೆ ಅಪರಿಮಿತ ರೀತಿಯಲ್ಲಿ ಸವಾರಿ ಮಾಡುವ ಹಕ್ಕು ಕತೆ ಕಾದಂಬರಿಗಾರರಿಗೆ ಇಲ್ಲವೆಂದೂ ಹೇಳುತ್ತಾರೆ. ಆ ದೃಷ್ಟಿಯಲ್ಲಿ ಗಮನಿಸಿದಾಗ ಮೊದಲ ನೋಟದಲ್ಲೇ ರಾಜೇಂದ್ರ ಶೆಟ್ಟಿಯವರು ಗೆದ್ದು ಬಿಡುತ್ತಾರೆ. ಅವರದು- ಒಂದೆರಡು ಕತೆಗಳನ್ನು ಹೊರತುಪಡಿಸಿದರೆ ಪುಟ್ಟಪುಟ್ಟ ಕತೆಗಳು. ಒಂದು ಕತೆ ಓದಿ ಪುಟ್ಟದೊಂದು ಮೆಲುಕು. ಬಳಿಕ ಇನ್ನೊಂದು! ಇದು ಶೆಟ್ಟಿಯವರ ಐಡಿಯಾ!
'ಕಥನ ಕುತೂಹಲ'ದ ಒಂದೊಂದು ಕಥನದಲ್ಲೂ ಕುತೂಹಲಕ್ಕೆ ಆದ್ಯತೆ. ವಾಸ್ತವದ ಬದುಕನ್ನು ಕಾಲ್ಪನಿಕ ಪಾತಳಿಯಲ್ಲಿ ನಿರ್ಮಿಸಿ ಸತ್ಯದೊಡಲಿನ ಸತ್ವವನ್ನು ಬಹಿರಂಗಪಡಿಸುವುದು ಇಲ್ಲಿನ ಹೆಚ್ಚಿನ ಕತೆಗಳ ಗುರಿ. ಕತೆಗಾರರು ತನ್ನ ಕತೆಗಳೆಲ್ಲ ಕಾಲ್ಪನಿಕ ಎನ್ನುತ್ತಾರೆ. ಭೂತ ಪ್ರೇತಗಳನ್ನು ನಿರಾಕರಿಸುತ್ತಲೇ ಅವುಗಳ ಅಸ್ತಿತ್ವದ ಕುರಿತು ಎರಡು ಕತೆ ಹೇಳಿಬಿಡುತ್ತಾರೆ. 'ಸ್ನೇಹಮಯಿ' ಎಂಬ ಕತೆಯಲ್ಲಿ ಗಂಡು ಹೆಣ್ಣು ಪ್ರೇತಗಳು ಮೋಕ್ಷ ಬಯಸುವುದಿಲ್ಲ. ಹಾಗೆಯೇ ಇದ್ದುಕೊಂಡು ಬದುಕಿನ ವಾಸ್ತವ ಅವಾಸ್ತವಗಳ ಜೊತೆ ವ್ಯವಹರಿಸುವುದು, ಸಜ್ಜನಿಕೆಯನ್ನು ಅನಾವರಣಗೊಳಿಸುವುದು ಇತ್ಯಾದಿಗಳಿಂದಾಗಿ ಕುತೂಹಲದ ಕಡೆಗೆ ಬೆಳಕು ಚೆಲ್ಲುತ್ತದೆ. ಇನ್ನೊಂದು, ಒಂದು ಬಗೆಯ ಪತ್ತೇದಾರಿ ಕತೆ. 'ನಿಗೂಢ ರಾತ್ರಿ.' ಭೂತವಲ್ಲದ ಭೂತವನ್ನು ಕಂಡುಹಿಡಿಯುವ ರೋಚಕ ಕತೆ. 'ಕಥನ ಕುತೂಹಲ'ದ ಅತ್ಯಂತ ಕುತೂಹಲ ಭರಿತ ಹಾಗೂ ತುಸು ದೀರ್ಘ ಎನಿಸುವ ಕತೆಯಿದು.” ಎನ್ನುತ್ತಾ ಕಥೆಗಳನ್ನು ವಿಮರ್ಶೆ ಮಾಡಿದ್ದಾರೆ.
ಕೆ ಪಿ ಸತ್ಯನಾರಾಯಣ ಇವರು "ಕಥನ ಕುತೂಹಲ"ದ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ತಮ್ಮ ಎರಡನೇ ಕಥಾ ಸಂಕಲನದ ಕುರಿತಾಗಿ ಲೇಖಕರಾದ ರಾಜೇಂದ್ರ ಶೆಟ್ಟಿಯವರು “ಇಲ್ಲಿ ಇರುವ 26 ಕಥೆಗಳು ಸಂಪೂರ್ಣ ಕಾಲ್ಪನಿಕವಾದರೂ, ಅಲ್ಲಿ ಕಂಡು ಬರುವ ಕೆಲವು ಘಟನೆಗಳು ನಾನು ಕಂಡದ್ದು, ಅನುಭವಿಸಿದ್ದು ಮತ್ತು ಕೇಳಿದ್ದು.
ನನ್ನ ಮೊದಲ ಕಥಾ ಸಂಕಲನ, "ನನ್ನದೂ ಒಂದಿಷ್ಟು..." ಪ್ರಕಟನೆಯ ನಂತರ, ನನಗೆ, ಪುಸ್ತಕ ಪ್ರಕಟಿಸಲು ಪ್ರೋತ್ಸಾಹ ಸಿಕ್ಕಿದ್ದು ಮಿತ್ರ, ಅಣಕು ರಾಮನಾಥರೆಂದೇ ಖ್ಯಾತಿ ಪಡೆದ ಹಾಸ್ಯ ಸಾಹಿತಿ ಎನ್. ರಾಮನಾಥರಿಂದ. ಇದಕ್ಕೆ ಬೆನ್ನೆಲುಬಾಗಿ ನಿಂತವರು ಮಿತ್ರ ಅನಂತ ರಮೇಶ್ ಮತ್ತು ತಮ್ಮ ಹಿರಿಯಣ್ಣ ಶೆಟ್ಟಿ. ಇವರಿಬ್ಬರೂ ನನ್ನ ಕರಡು ಪ್ರತಿಯನ್ನು ತಿದ್ದಿ, ಹಲವಾರು ಸಲಹೆ ಕೊಟ್ಟವರು. ಅಣ್ಣ ರಾಮದಾಸ ಶೆಟ್ಟಿಯಂತೂ ಅಪ್ರತ್ಯಕ್ಷವಾಗಿ ಪ್ರೋತ್ಸಾಹಿಸುತ್ತಲೇ ಬಂದಿದ್ದಾನೆ. ಕೆಲವು ಕಥೆಗಳಿಗೆ ತನ್ನ ಹಳ್ಳಿಯ ಅನುಭವದ ಮೆರುಗು ಕೊಟ್ಟು, ಕಥೆಗಳು ನೈಜವಾಗಿರಿಸಲು ಸಹಕರಿಸಿದ್ದಾನೆ.” ಎಂದು ತಮ್ಮ ಈ ಕೃತಿಯನ್ನು ಹೊರತರಲು ಸಹಕಾರ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.
ಸುಮಾರು ೧೫೦ ಪುಟಗಳ ಈ ಕಥಾ ಸಂಕಲನವನ್ನು ರಾಜೇಂದ್ರ ಶೆಟ್ಟಿಯವರು ತಮ್ಮ ಹೆತ್ತವರಿಗೆ ಅರ್ಪಣೆ ಮಾಡಿದ್ದಾರೆ. ಕಥೆಗಳು ತುಂಬಾ ದೀರ್ಘವಿಲ್ಲದೇ ಇರುವುದರಿಂದ ಸ್ವಲ್ಪ ಸಮಯ ದೊರೆತಾಗಲೂ ಈ ಕಥೆಗಳನ್ನು ಓದಿ ಮುಗಿಸಬಹುದಾಗಿದೆ.
ಪ್ರಕಟಿಸಿದ: ಡಿಸೆಂಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬