ಕಾಳನಾಮ ಚರಿತ್ರೆ ಇದೊಂದು ಹೊಸ ಬಗೆಯ ಪುಸ್ತಕ. ಬದುಕಿನ ಸಮಸ್ಯೆಯಲ್ಲಿ ಸಿಲುಕಿ ಸೊರಗಿದಾಗ ಒಂದು ಹಾಡು, ಹಕ್ಕಿಯ ಕೂಗು, ಮಗುವಿನ ಅಳು, ಒಂದು ಸಾಂತ್ವನದ ನುಡಿ ಮತ್ತೆ ಜೀವಜಲ ಉಕ್ಕಿಸುವಂತೆ ಈ ಬರಹಗಳೂ ಹೊಸ ಭರವಸೆ ಮೂಡಿಸುವ ಹಾಗಿವೆ. ನಿತ್ಯ ಬದುಕಿನ ಜಂಜಡಗಳಲ್ಲಿ ನಿರ್ಲಕ್ಷಿಸಿ ಬಿಡಬಲ್ಲ ಸಣ್ಣ ಸಂಗತಿಗಳ ಹಿಂದೆ ಅಡಗಿರುವ ಸೊಬಗು, ಜೀವನ ಸೌಂದರ್ಯವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಮುಕ್ತವಾಗಿ ಸ್ವೀಕರಿಸಿ, ಮನಸ್ಸನ್ನು ಕಹಿಯಾಗಿಸಿಕೊಳ್ಳದೆ ನಿರರ್ಥಕವೆನ್ನುವುದರಲ್ಲಿ ಹಿರಿದಾದ ಅರ್ಥವನ್ನು, ಸಿಪ್ಪೆಯಲ್ಲಿ ಸತ್ವವನ್ನು ಹುಡುಕುವ ಪರಿಯಿಂದ ಈ ಹಗುರ ಹರಟೆಗಳು ಆಕರ್ಷಕವಾಗಿವೆ. ಗಾಳಿಯ ಲಘುತ್ವ, ಮುಗ್ದತೆ ಮತ್ತು ಉಳಿವರಿಗೆ ಸಂಕೀರ್ಣವಾಗಿ ಕಂಡದ್ದರಲ್ಲಿ ನಿಷ್ಕಪಟತೆಯನ್ನು ಅರಸುವ ಉತ್ಸಾಹ ಈ ಬರಹಗಳ ಹಿಂದಿದೆ. ವಿನೋದ ಪ್ರಜ್ಞೆ, ವಸ್ತು ಭಾರವಾಗದಂತೆ ವಹಿಸುವ ಎಚ್ಚರ, ಎಲ್ಲಕ್ಕಿಂತ ಮಿಗಿಲಾಗಿ ಒಣಬೌದ್ಧಿಕ ಕಸರತ್ತುಗಳಿಲ್ಲದ ನೇರವಂತಿಕೆ ಈ ಸಲ್ಲಾಪಗಳ ಗುಣಾತ್ಮಕತೆಯನ್ನು ಹೆಚ್ಚಿಸಿವೆ. ಕಾಳ ಮತ್ತು ಮನುಷ್ಯನ ನಡುವಿನ ನಂಟು- ಆ೦ಟುಗಳನ್ನು ಹಗುರ ಹರಟೆಯ ಹಂದರದ ರೂಪದಲ್ಲಿ ’ಕಾಳನಾಮ ಚರಿತೆ’ ಎಂ.ಆರ್.ಕಮಲ ಹೆಣೆದಿದ್ದಾರೆ. ಕಾಳನ ಜತೆಗಿನ ವಾಕಿಂಗ್, ಅವನಿಂದಾಗುವ ಎಡವಟ್ಟುಗಳನ್ನು ಸೊಗಸಾಗಿ ಚಿತ್ರಿಸಲಾಗಿದೆ. ಕಾಳನ ನೆಪದಲ್ಲಿ ಬದುಕಿನ ನಾನಾ ಬಣ್ಣಗಳು, ನೆರಳುಗಳು ಇಲ್ಲಿ ವಿವರಿಸಲಾಗಿದೆ. 'ಕಾಳನಾಮ ಚರಿತೆ' ಪುಸ್ತಕದಲ್ಲಿರುವ ೭೨ ಕಿರು ಬರಹಗಳಿದ್ದು ಓದುಗರನ್ನು ಆಕರ್ಷಿಸುತ್ತದೆ. ಈ ಕೃತಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ ರಜನಿ ಭಟ್ ಪೆರ್ವೋಡಿ. ಅವರು ಹೇಳುವಂತೆ “ಪುಸ್ತಕ ಕೈಗೆ ಎತ್ತಿಕೊಂಡಾಗ ಕಳೆದೇ ಹೋಗುವಷ್ಟು ಚಂದದ ಶೀರ್ಷಿಕೆ, ಅದನ್ನೂ ಮೀರಿಸುವ ಮುಖಪುಟ. ಪುಟ ತೆರೆದರೆ ಚೆಂದ ಚೆಂದದ ರೇಖಾಚಿತ್ರಗಳ ಅನಾವರಣ. ಆಹಾ! ಲೇಖಕಿ ತಮ್ಮ ಸಾಕುನಾಯಿಯದೆ ಶೀರ್ಷಿಕೆ ಕೊಟ್ಟು ಅದರ ಕುರಿತಾಗಿ ಬರೆಯಬೇಕಾದರೆ ಅವರ ಬದುಕಿನಲ್ಲಿ ಅದರ ಸ್ಥಾನ ಎಷ್ಟಿದ್ದಿರಬಹುದು ಎಂಬುದಾಗಿ ಊಹಿಸಬಹುದು. ೭೨ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಬರುವ ಕಾಳ ನಮ್ಮನ್ನು ಆವರಿಸಿಕೊಂಡು ಬಿಡುತ್ತಾನೆ. ಇದರಲ್ಲಿ ಕಾಳನ ನೋವು- ನಲಿವಿನ ಘಳಿಗೆಗಳ ಜೊತೆ ಲೇಖಕಿಯವರ ಹೇಳುವ ಉಪಮೆ, ಪ್ರಸಿದ್ಧ ಕವಿಗಳ ಕವಿತೆಗಳು,ನಾಣ್ನುಡಿಗಳನ್ನು ಓದುತ್ತಾ ಹೋದಂತೆ ಮನಸ್ಸು ಮುದಗೊಂಡು ಮುಖದಲ್ಲಿ ಒಂದು ಮುಗುಳು ನಗು ಮೂಡುತ್ತದೆ. ಲೇಖಕಿಯವರಿಗೆ ಅವರ ಮಗಳು ಕಾಳನನ್ನು ಗಂಟು ಹಾಕಿ ಗಂಡನ ಮನೆಗೆ ಹೋದಾಗ ಕಾಳನ ಬೆಪ್ಪುತನಗಳಿಂದ ತಲೆಚಿಟ್ಟು ಹಿಡಿದ ಲೇಖಕಿಗೆ, "ನೀನು ನಿಜವಾದ ಶಿಕ್ಷಕಿಯೇ ಆಗಿದ್ದರೆ ಇವನಿಗೆ ಪಾಠ ಹೇಳಿಕೊಡು" ಎಂದಂತೆ ಭಾಸವಾಯಿತು. ಕಾಳನಿಗೆ ತರಬೇತಿ ಕೊಡುವ ನೆಪದಲ್ಲಿ ತರಬೇತುದಾರ ಕಾಳನಿಗೆ ಹೊಡೆದಾಗ ಲೇಖಕಿಯವರಿಗೆ ಬೇಸರವಾಗಿ ನೋಡಲಾರದೆ ಸ್ನಾನಕ್ಕೆ ಹೋಗುತ್ತಿದ್ದರಂತೆ. ೫ ಪದಗಳನ್ನು ಕಲಿಯಲು ಕಾಳ ತೆಗೆದುಕೊಂಡ ಅವಧಿ ಮೂರು ತಿಂಗಳು.!ಅಂತೂ ಇಂತೂ ಇಂಗ್ಲಿಷ್ ಭಾಷೆಯ ಸಿಟ್, ಸ್ಟಾಂಡ್, ಸ್ಲೀಪ್, ರೋಲ್, ಶೇಕ್ ಹ್ಯಾಂಡ್ ಎಂಬ ಟ್ರೈನಿಂಗ್ , ಮುಗಿದಾಗ ಲೇಖಕಿಯವರ ಕನ್ನಡ ಭಾಷೆಯ ಪ್ರೇಮದಿಂದ ಕಾಳನಿಗೆ ಕಲಿಸಿದ ತರಬೇತಿ ಅ ಕ್ಷಣದಲ್ಲಿ ವ್ಯರ್ಥ ಆದದ್ದು ಹೇಗೆ ಎನ್ನುವುದು ಬಹಳ ಸ್ವಾರಸ್ಯವಾಗಿದೆ. ಕಾಳನ ರಂಪ ರಾದ್ಧಾಂತ! ದಲ್ಲಿ ಕಾಳನನ್ನು ವಾಕಿಂಗ್ ಕರೆದುಕೊಂಡು ಹೋಗುವ ರೌರವ ನರಕಕ್ಕಿಂತ ಬೇರೆ ನರಕವಿರಲು ಸಾಧ್ಯವೇ ಎಂದು ಹಲವಾರು ಬಾರಿ ಯೋಚಿಸಿದ್ದಾರೆ. ಅಷ್ಟಕ್ಕೂ ಆತ ವಾಕಿಂಗ್ ಹೋಗುವಾಗ ಏನು ಮಾಡುತ್ತಿದ್ದ? ಅದುವರೆಗೂ ಅಪರಿಚರಾಗಿದ್ದವರಿಗೆ ಲೇಖಕಿ ಗುರುತಿಸಲ್ಪ ಡುವುದು ಹೇಗೆ ಗೊತ್ತೇ? "ಕರಿ ನಾಯಿಯ ಅಮ್ಮ", "ಕರಿ ನಾಯಿ ಮನೆ ಆಂಟಿ" ಎಂದು. ಅಕ್ಕವಕ್ಕದ ಬೀದಿಗೆಲ್ಲ ನನ್ನನ್ನು ಅಗ್ಗವಾಗಿ ಪರಿಚಯಿಸಿ ಬಿಸಾಕಿದ್ದಾನೆ ಈ ಕರಿಯ ಎಂದು ಹೇಳುವ ಲೇಖಕಿ ಯವರ ಮಾತು ನಗು ತರಿಸುತ್ತದೆ. ಕಾಳನೊಂದಿಗೆ ವಾಕಿಂಗ್ ಹೋಗುವಾಗ ಜೊತೆಯಾಗುವ ಕೆಂಚಿ ಎಂಬ ಬೀದಿ ನಾಯಿಗೆ ವಿಪರೀತ ಕೋಪ ಬರುವುದು ಯಾವಾಗ ಗೊತ್ತೇ.? ವಾಕಿಂಗ್ ಹೋಗುವಾಗ ಕಾಳನನ್ನು ಯಾರಾದರೂ ಮಾತಾಡಿಸಿದರೆ, ನೋಡಿದರೆ!!! ಅಷ್ಟು ಪೊಸೆಸಿವ್ ಕಾಳನ ಬಗ್ಗೆ. ಕಾಳನ ಜೊತೆ ವಾಕಿಂಗ್ ಬರುವಾಗ ಜೊತೆಯಾಗುವ ಇನ್ನೂ ಯಾವ್ಯಾವುದೋ ನಾಯಿಗಳನ್ನು ನೋಡಿ ಸುತ್ತಮುತ್ತಲಿನವರು ಹೌಹಾರಿ ಓಡಿ ಗೇಟ್ ನ್ನು ಭದ್ರವಾಗಿ, ಹಾಕಿ ಮನೆಯ ಬಾಗಿಲ ಸಂದಿಯಿಂದ ರೌಡಿಗಳ ಗುಂಪು ಹೋಗುವುದನ್ನು ನೋಡಿದ ಹಾಗೆ ನೋಡಿದರೆ, ಚಿಕ್ಕ ಹುಡುಗರು ಮನೆಯ ಮುಂದೆ ಮೆರವಣಿಗೆ ಹೋದ ಸಂಭ್ರಮವನ್ನು ಅನುಭವಿಸುತ್ತಾರೆ ಎಂದು ಓದುವಾಗ ನಗು ಉಕ್ಕಿ ಉಕ್ಕಿ ಬರದಿರದು. ವಿಪರೀತ ತಿನ್ನುವ ಕಾಳನಿಗೆ ವೈದ್ಯರ ಸಲಹೆಯಂತೆ ಸಣ್ಣಗಾಗಲು ಅವನನ್ನು ವಾಕಿಂಗ್ ಕರೆದುಕೊಂಡು ಹೋದರೂ ಸಣ್ಣಗಾಗಿದ್ದು ಮಾತ್ರ ಲೇಖಕಿಯವರು! ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಮಾತಾಡಿ ಮಾತಾಡಿ ಅರ್ಧ ಹುಚ್ಚು ಹಿಡಿಸಿಕೊಳ್ಳುವ ನನ್ನನ್ನು ಸಂಪೂರ್ಣವಾಗಿ ಹುಚ್ಚಿಯಾಗಿಸಲೆಂದೇ ದೇವರು ಈ ಕಾಳನನ್ನು ಕಳಿಸಿದ್ದಾನೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರಂತೆ. ಲೇಖಕಿಯವರ ಬಲಕಾಲಿನ ಮಂಡಿಯ ಮೇಲೆ ಕಾಳನಿಗೆ ಮಲಗಬೇಕು.. ಮನೆಯವರೆಲ್ಲರೂ ಅವನನ್ನು ಎಳೆದು ಹಾಕಿದರೂ ಮತ್ತೆ ಬಂದು ಬಲಗಾಲನ್ನು ದಿಂಬಾಗಿಸಿಕೊಂಡು ಮಲಗಿ ಬಿಡುತ್ತಾನೆ. ಈ ವಿಷಯವಾಗಿ ಸ್ವಲ್ಪ ಏನಾದರೂ ಮಾತಾಡಿದರೆ ಗಂಡ "ನಾನು ಬಡಕೊಂಡೆ, ನಾಯಿ ಬೇಡ ಅಂತ, ನನ್ನ ಮಾತು ಯಾರೂ ಕೇಳಲಿಲ್ಲ" ಎಂದು ಪ್ರವರ ಶುರು ಮಾಡುವಾಗ ಅದನ್ನು ಕೇಳುವುದಕ್ಕಿಂತ ಕಾಲು ನೋವೇ ವಾಸಿ ಎಂದು ಅನಿಸಿಬಿಟ್ಟಿದೆಯಂತೆ. ಹಣ್ಣು ಫೋತ ಕಾಳ ದಲ್ಲಿ ಲೇಖಕಿಯವರು ಕಾಳನ ವಿಪರೀತ ತಿಂಡಿ ಪ್ರೀತಿಯನ್ನು ವಿವರಿಸುತ್ತಾ ಅವನು ಸುರಿಸುವ ಜೊಲ್ಲಿಗೆ ಜಲಪಾತವನ್ನು ಹೋಲಿಸಿದ್ದಾರೆ. ಅವನನ್ನು ಯಾಮಾರಿಸಿ ತಿಂಡಿ ತಿನ್ನುವುದು ಹೇಗೆ?ಎಂಬ ಚಿಂತೆಯಲ್ಲಿ ಮನೆ ಮಂದಿ ಎಲ್ಲಾ ಸತ್ತು ಸತ್ತು ಹುಟ್ಟುತ್ತಿದ್ದಾರಂತೆ. ಮಾವಿನ ಹಣ್ಣು, ಹಲಸಿನ ಹಣ್ಣು, ಬಾಳೆಹಣ್ಣು ಎಂಬ ಯಾವ ಹಣ್ಣಿನ ಪದ ಕೇಳಿದರೂ ಸತ್ತೆನೋ ಬಿದ್ದೆನೋ ಎಂದು ಬರುವ ಅವನಿಂದ ತಪ್ಪಿಸಿಕೊಳ್ಳಲು ಕೈ ಸನ್ನೆಯನ್ನೆ ಭಾಷೆಯಾಗಿಸಿದ್ದಾರಂತೆ ಮನೆಯವರು. ಪ್ರೈವೆಸಿಗೆ ಬೆಂಕಿ ಬೀಳಲಿ ಎಂಬ ಅಧ್ಯಾಯ ದಲ್ಲಿ ಮನೆಗೆ ಬಂದ ಅತಿಥಿಗಳು ಕಾಳನನ್ನು ನೋಡಿ ಭಯಗೊಂಡಾಗ ಲೇಖಕಿಯವರು "ಹೆದರಬೇಡಿ, ಅವನಿಗೆ ಕಚ್ಚಲು ಬರೋದಿಲ್ಲ" ಎಂದರೆ ಅದನ್ನು ಕೇಳಿಸಿಕೊಂಡ ಮನೆಕೆಲಸದ ಗಂಗಮ್ಮ ಒಮ್ಮೆ ಬೀದಿಯ ಬದಿಯಲ್ಲಿ ನಿಂತು " ಇದು ಏನೂ ಮಾಡುವುದಿಲ್ಲ, ಕಚ್ಚಲು ಬರೋದಿಲ್ಲ.ಯಾರು ಬೇಕಾದರೂ ಮನೆಯೊಳಗೆ ಬರಬಹುದು " ಎಂದು ಹೇಳಿ ಇವರಿಂದ ಬೈಸಿಕೊಂಡಿದ್ದಳಂತೆ. ಕಾಳನ ಬುಕಾಚಿಯಲ್ಲಿ ಅವನ ಸ್ನಾನ ಮಾಡಿಸುವಾಗಿನ ಸಾಹಸಗಳಿವೆ. ಕಾಳ ಉರಿಬಿಸಿಲ ಬಯಲು ಸೀಮೆಯ ಜನರಂತೆ ಯಾರನ್ನಾದರೂ ನೋಡಿದ ಕೂಡಲೇ ತಕಪಕನೆ ಕುಣಿಯಲು ಶುರು ಮಾಡುತ್ತಾನಂತೆ. ಕೆಲಸ ಮಾಡದೆ ಬದುಕಿದರೆ ಜೀವನವೇ ವ್ಯರ್ಥ ಎಂದು ನಂಬಿರುವ ಲೇಖಕಿಗೆ ಕಾಳ ಬಿದ್ದುಕೊಂಡಿರುವುದನ್ನು ನೋಡಿದಾಗ ಸಿಟ್ಟು ನೆತ್ತಿಗೇರುತ್ತದಂತೆ. ಈ ಕಾಳನ ಪೆದ್ದುತನವನ್ನು ಮಗುವಿನ ಮುಗ್ಧತೆ ಎಂದು ವ್ಯಾಖ್ಯಾನಿಸುತ್ತಾ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಾರಂತೆ.ಒಬ್ಬಳೇ ಇದ್ದರೆ ಕೆಲಸ ಮಾಡಲು ತೋಚುವುದಿಲ್ಲ. ಹಾಗಾಗಿ ನನ್ನ ಕೋಣೆಯಲ್ಲಿ ಕಾಳನನ್ನು ಮಲಗಿಸಿ, ಬೈದುಕೊಂಡು, ಉತ್ಸಾಹದಿಂದ ಕೆಲಸ ಮಾಡಿಕೊಳ್ಳುತ್ತೇನೆ. ಇಷ್ಟಾದರೂ ಅವನಿಂದ ಉಪಕಾರವಾಗಿದೆಯಲ್ಲ ಎನ್ನುತ್ತಾರೆ. ಮೊದಮೊದಲು ಕಾಳನನ್ನು ತಂದು ಮಗಳು ನನಗೆ ಗಂಟು ಹಾಕಿದಳು ಎಂದು ಬೈದುಕೊಳ್ಳುತ್ತಿದ್ದ ಇವರಿಗೆ ಮುಂದೆ ಕಾಳನ ವಾಕಿಂಗ್, ತಿಂಡಿ, ಸ್ನಾನ, ಊಟ ಎಂದುಕೊಂಡು ಯಾರನ್ನೂ ಬೈಯಲು ಪುರುಸೊತ್ತೇ ಇರಲಿಲ್ಲ. ಇನ್ನು ಒಂದು ಅಂಗಡಿಯ ಮುಂದೆ ಇರುವ ಮರದಲ್ಲಿ ಗಸಗಸೆ ಹಣ್ಣುಗಳಿದ್ದು ಅದನ್ನು ಕೊಯ್ದು ತಿನ್ನುವ ರೂಢಿ ಇರುವ ಇವರು ಒಂದು ದಿನ ಹೋದಾಗ ಒಂದು ಕೊಂಬೆಯೂ ಇಲ್ಲ. ಕಾರಣ ಕೇಳಿದಾಗ ಅಂಗಡಿಯವನು , " ನೀವು ದಿನಾ ಬಂದು ಸಂಜೆ ಇಲ್ಲಿ ಹಣ್ಣು ಕೀಳುವುದಕ್ಕೆ ನಾಯಿ ಜೊತೆ ನಿಂತುಕೊಂಡರೆ, ಈ ನಾಯಿಗೆ ಹೆದರಿ ಗಿರಾಕಿಗಳು ಕಡಿಮೆಯಾಗಿದ್ದಾರೆ. ಆದುದರಿಂದ ಕೊಂಬೆಯನ್ನು ಕಡಿದೆ ಎಂಬ ಕಾರಣ ನೀಡಿದ್ದ. ಕಾವಲು ನಾಯಿ ಕಾಳ ದಲ್ಲಿ ಕಾಳನಿಂದ ದೊರೆತ ಸಜ್ಜನರ ಸಂಗದ ವಿವರಗಳಿವೆ. ಏಕತಾನತೆಯ ಬದುಕಿನಲ್ಲಿ ನಿಜಕ್ಕೂ ಇಂತಹ ಅನುಭವ ಬಹಳ ಬದಲಾವಣೆಯನ್ನು ತರುತ್ತದೆ. ಲೇಖಕಿ ಮತ್ತು ಕಾಳನ ತಾಯಿ- ಮಗುವಿನ ಬಾಂಧವ್ಯ ಬಹಳ ಇಷ್ಟವಾಯಿತು.ಹರಟೆಯ ಈ ಹಂದರದಲ್ಲಿ ಹಾಸ್ಯದ ಜೊತೆ ಗಂಭೀರ ಚಿಂತನೆಯೂ ಇದೆ. ನೀವೂ ಒಮ್ಮೆ ಓದುವಿರಲ್ಲ?”