‘ನಿಲುಕಿದ ತಾರೆ’ ಎನ್ನುವ ಕೃತಿಯನ್ನು ಬರೆದ ಚಿತ್ರಲೇಖಾರವರನ್ನು ಅಭಿನಂದಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಲೇಖಕಿ ಚೇತನ ಭಾರ್ಗವ್. ಅವರು ತಮ್ಮ ಅನಿಸಿಕೆಯಲ್ಲಿ “ನಿಲುಕಿದ ತಾರೆ ಬದುಕಿನ ನೈಜ ಸಂಗತಿಗಳೊಂದಿಗೆ ಬೆರೆತ ಕಾಲ್ಪನಿಕ ಸಾಮಾಜಿಕ ಕಾದಂಬರಿ . ಈ ಕಾದಂಬರಿಯಲ್ಲಿ ಅನಾಥ ಹೆಣ್ಣೊಬ್ಬಳ ಅಸಹಾಯಕತೆ ಮತ್ತು ಆ ಅಸಹಾಯಕ ಪರಿಸ್ಥಿತಿಗೆ ಅವಳು ಒಗ್ಗಿಕೊಳ್ಳುವ ರೀತಿಯನ್ನು ಲೇಖಕಿಯು ಮನ ಕದಡುವ ಹಾಗೆ ಚಿತ್ರಿಸಿ ಓದುಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಥಾ ನಾಯಕಿಯು ಭಾವನೆಗಳ ತೊಳಲಾಟದಲ್ಲಿ ಸಿಲುಕಿ ಒದ್ದಾಡುತ್ತಿರುವ ದೃಶ್ಯಗಳು ಓದುಗರ ಕಣ್ಣಂಚಿನಲ್ಲಿ ನೀರನ್ನು ತರಿಸುತ್ತದೆ. ಅಲ್ಲದೆ ಈ ಕಾದಂಬರಿಯು ದೇಶಪ್ರೇಮವನ್ನು ಪುಟಿದೇಳಿಸುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತಮ್ಮವರ ಪಾಲಿಗೆ ಒಂದು ನೆನಪಾಗಿಯೇ ಉಳಿದುಬಿಡುವ ಸೈನಿಕರ ಕಥಾನಕ ಅವರ ತ್ಯಾಗವನ್ನು ಎತ್ತಿಹಿಡಿಯುತ್ತದೆ.  ಈ ಕಥೆಯ ಕಥಾನಾಯಕಿ ಸಾಕ್ಷಿಯ ತಂದೆ ಮೇಜರ್ ಅರ್ಜುನ್ ನಿವೃತ್ತಿಯ ಅಂಚಿನಲ್ಲಿದ್ದು, 28 ರ ಮಗ ಪೃಥ್ವಿ ನೌಕಾ ಪಡೆಯಲ್ಲಿದ್ದು ಸೊಸೆ ಮೊಮ್ಮಗನೊಂದಿಗೆ ಬದುಕು ಸಾಗಿಸುತ್ತಿರುವಾಗ ಮರುವಿವಾಹವಾಗುತ್ತಾನೆ . ಮೇಜರ್ ಅರ್ಜುನ್ ಮರುವಿವಾಹವಾಗಿ ಒಂದು ವರ್ಷದ ನಂತರ ಸಾಕ್ಷಿ ಜನಿಸುತ್ತಾಳೆ. ಅವರು ದೆಹಲಿಯಲ್ಲಿ ನೆಲೆಸಿರುತ್ತಾರೆ. ಸಾಕ್ಷಿಗೆ 3 ವರ್ಷವಿದ್ದಾಗ ಆಕೆ ತಂದೆಯನ್ನು ಕಳೆದುಕೊಳ್ಳುತ್ತಾಳೆ. ನಂತರ ಸಾಕ್ಷಿಯ ತಾಯಿ ಬೆಂಗಳೂರಿಗೆ ವಲಸೆ ಬಂದು ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಾ ಮಗಳನ್ನು ಸಾಕುತ್ತಿರುತ್ತಾಳೆ. ಸಾಕ್ಷಿಗೆ 10 ವರ್ಷವಿದ್ದಾಗ ಆಕೆಯ ತಾಯಿ ಮೆದುಳು ಗಡ್ಡೆ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಾಳೆ. ಅನಾಥಳಾದ ಸಾಕ್ಷಿಯೊಂದಿಗೆ ಹೆಚ್ಚಿನ ಪ್ರೀತಿ ಮಮತೆ ಒಡನಾಟ ಇಲ್ಲದಿದ್ದರೂ ಕರ್ತವ್ಯ ಪ್ರಜ್ಞೆಯಿಂದ ಆಕೆಯ ಅಣ್ಣ ಪೃಥ್ವಿ ಹಾಗೂ ಅತ್ತಿಗೆ ದೀಪ್ತಿ ಅವಳನ್ನು ತಮ್ಮೊಂದಿಗಿರಲು ಮುಂಬಯಿಗೆ ಕರೆದುಕೊಂಡು ಹೋಗುತ್ತಾರೆ. ಅತ್ತಿಗೆ ದೀಪ್ತಿ ಸಾಕ್ಷಿಗೆ ಬೇರೆ ಯಾರೂ ಇಲ್ಲ, ಆಕೆಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಗಂಡನಿಗೆ ತಾಕೀತು ಮಾಡುತ್ತಿರುತ್ತಾಳೆ. ಅಣ್ಣ ಅತ್ತಿಗೆ ಇಬ್ಬರೂ ಆಕೆಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ತಮ್ಮ ಕುಟುಂಬದ ಸದಸ್ಯರಂತೆಯೇ ನೋಡಿಕೊಳ್ಳುತ್ತಿರುತ್ತಾರೆ. ಆದರೆ ಅಣ್ಣನ ಮಗ ನಿತಿನ್ ಗೆ ಈಕೆಯನ್ನು ಹೆತ್ತವರು ತಮ್ಮ ಮನೆಗೆ ಕರೆದುಕೊಂಡು ಬಂದಿರುವುದಕ್ಕೆ ಸಮ್ಮತಿ ಇರುವುದಿಲ್ಲ . ದೀಪ್ತಿ ಇದನ್ನೆಲ್ಲಾ ಸಂಭಾಳಿಸುತ್ತಿರುತ್ತಾಳೆ. ಅಲ್ಲದೆ ನಿತಿನ್ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದುತ್ತಿರುವುದರಿಂದ ಸಾಕ್ಷಿಗೂ ಅವನಿಂದ ಹೆಚ್ಚಿಗೆ ಏನೂ ತೊಂದರೆ ಆಗುವ ಸಂದರ್ಭ ಎದುರಾಗುವುದಿಲ್ಲ.  ಸಾಕ್ಷಿ ಅಣ್ಣ ಅತ್ತಿಗೆಯೊಂದಿಗೆ ಹೊಂದಿಕೊಂಡು ಅವರಿಗೆ ವರ್ಗವಾದಂತೆ ಮದ್ರಾಸ್ , ಕೇರಳ ಕೋಲ್ಕತ್ತಾ ಹೀಗೆ ಎಲ್ಲೆಡೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಳು. ಕೇರಳದಲ್ಲಿ ಇರುವಾಗ ಇವರು ವಾಸವಾಗಿದ್ದ ಮನೆಯ ಪಕ್ಕದ ಮನೆಗೆ ಅತಿಥಿಯಾಗಿ ಬಂದಿದ್ದ ದರ್ಶನ್ ಪರಿಚಯವಾಗಿ ಇವರಿಬ್ಬರಿಗೆ ಪ್ರೇಮಾಂಕುರವಾಗುತ್ತದೆ. ಆತನೂ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮನೆಯವರ ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಯವಾಗಿ ಸಾಕ್ಷಿಯ ಓದು ಮುಗಿದ ನಂತರ ಮದುವೆ ಎಂದು ನಿರ್ಧಾರವಾಗಿತ್ತು. ಇಬ್ಬರೂ ಕೊಲ್ಕತ್ತದಲ್ಲೇ ನೆಲಸಿದ್ದರಿಂದ ಮನೆಯವರ ಒಪ್ಪಿಗೆ ಮೇರೆಗೆ ರಜಾದಿನಗಳಲ್ಲಿ ಭೇಟಿಯಾಗಿ ತಮ್ಮ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದರೂ ಎಂದೂ ತಮ್ಮ ಎಲ್ಲೆ ಮೀರಿರುವುದಿಲ್ಲ . ಕೆಲದಿನಗಳ ನಂತರ ದರ್ಶನ್ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಎಂಬ ಸುದ್ದಿ ಸಿಡಿಲು ಬಡಿದಂತೆ ಆಕೆಗೆ ಆಘಾತ ಉಂಟುಮಾಡಿತು. ದರ್ಶನ್ ಸಾವಿನಿಂದ ಉಂಟಾದ ಆಘಾತ, ಅಣ್ಣನ ಅಕಾಲ ಮರಣ, ಒಬ್ಬಂಟಿಯಾಗಿ ಬೆಂಗಳೂರು ಸೇರಿದ ಪರಿ, ಹಾಗೆಯೇ ಇಂದ್ರಜಿತ್ ಎಂಬ ಕ್ರಿಮಿನಲ್ ಲಾಯರ್ ನ ಪರಿಚಯ, ಆತನ ಆಫೀಸ್ ನಲ್ಲಿ ಕೆಲಸ , ಪರಿಚಯ ವಿವಾಹ ಪ್ರಸ್ತಾಪಕ್ಕೆ ತಿರುಗಿದಾಗ ವಿಧಿಯಿಲ್ಲದೆ ಸ್ನೇಹಿತರ ಸಲಹೆಯ  ಮೇರೆಗೆ ಆತನೊಂದಿಗೆ ನಡೆದ ವಿವಾಹ, ಮಧುಚಂದ್ರಕ್ಕೆಂದು ಹೋದಾಗ ನಡೆದ ಅಪಘಾತ , ನಂತರ ಇಂದ್ರಜಿತ್ ನೊಂದಿಗೆ ಆಕೆಗೆ ಹೆಚ್ಚಿದ ಆಪ್ತತೆ ಗೌರವ ಭದ್ರತಾ ಭಾವನೆ,  ಆತನ ನಿಷ್ಕಲ್ಮಶ ಪ್ರೀತಿ ಸ್ನೇಹದೊಂದಿಗೆ ನಡೆಸಿದ ಬದುಕು,ದುಷ್ಕರ್ಮಿಗಳು ಅವನ ಕೊಲೆಗೆ ಯತ್ನಿಸಿದಾಗ ಕೂದಲೆಳೆಯಿಂದ ಅವನು ಪಾರಾದ ದೃಶ್ಯ, ಅದರಿಂದ ಸಾಕ್ಷಿಯ ಮನದಲ್ಲಿ ಉಂಟಾದ ಭಯ, ಇಂದ್ರಜಿತ್ ನಿವೃತ್ತಿ ಪಡೆದು ಎಸ್ಟೇಟ್ ನಲ್ಲಿ ಬಂಗಲೆ ನಿರ್ಮಿಸಿ ಗಿಡ ಮರಗಳ ಪೋಷಣೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಪರಿ , ನಂತರ ನಡೆದ ಆತನ ಘನ ಘೋರ ಹತ್ಯೆ, ಈ ಹತ್ಯೆ ನಡೆಸುವ ಹಿಂದೆ ಇರುವ ಕಾರಣವನ್ನು ಲೇಖಕಿ ಭಾವನಾತ್ಮಕವಾಗಿ ಹಾಗೂ ಕುತೂಹಲಭರಿತವಾಗಿ ಚಿತ್ರಿಸಿದ್ದಾರೆ.  ತನ್ನ ಜೊತೆಗಿದ್ದವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ದುರಂತ ಅಂತ್ಯಕ್ಕೆ ಈಡಾಗುವುದನ್ನು ಕಂಡು ಏಕಾಂಗಿಯಾಗಿ ಈ ನೋವನ್ನೆಲ್ಲಾ ಸಾಕ್ಷಿ ಸಹಿಸಿದ ಪರಿ ಅದ್ಭುತವಾಗಿ ಮೂಡಿ ಬಂದಿದೆ. ಇಂದ್ರಜಿತ್  ಸಾಕ್ಷಿಯ ಭದ್ರತೆಗೆಂದು ನೇಮಿಸಿದ ಕರೋಲ್ ಎಂಬ ನಿಷ್ಠಾವಂತ ಬಾಡಿಗಾರ್ಡ್ ಯಾರು? ಇಂದ್ರಜಿತ್ ಹತ್ಯೆ ಹೇಗಾಯಿತು? ಸತ್ತು ಹೋಗಿದ್ದಾನೆಂದು ತಿಳಿದ ದರ್ಶನ್ ಬದುಕಿದ್ದು ಹೇಗೆ ? ದರ್ಶನ್, ಇಂದ್ರಜಿತ್ ಸಾವಿಗೆ ನ್ಯಾಯ ಒದಗಿಸಿ ಸಾಕ್ಷಿಗೆ ನಿಲುಕಿದ ತಾರೆ ಹೇಗಾದ ಎಂಬುವ ಕುತೂಹಲ ಭರಿತ ಪ್ರಶ್ನೆಗಳಿಗೆ ಚಿತ್ರಲೇಖ ಮೇಡಂ ಅವರ ನಿಲುಕಿದ ತಾರೆ ಕಾದಂಬರಿಯಲ್ಲಿ ಉತ್ತರ ಸಿಗುತ್ತದೆ . ಪ್ರತಿ ಪುಟಕ್ಕೂ ಕುತೂಹಲ ಕಾಯ್ದಿರಿಸುವ ಈ ಪುಸ್ತಕದಲ್ಲಿ ಒಂದರ ಮೇಲೊಂದು ಟ್ವಿಸ್ಟ್ ಇದೆ. ಓದುಗರಿಗೆ ರೋಚಕತೆ ನೀಡುತ್ತದೆ. ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕದಲ್ಲಿ ಪ್ರೇಮ, ದೇಶಪ್ರೇಮದ ಹದವಾದ ಮಿಳಿತವಿದೆ. ಸೈನಿಕರ ತ್ಯಾಗ , ಹೆಣ್ಣೋರ್ವಳ ಅಸಹಾಯಕತೆಯ ನಡುವೆಯೂ ಬದುಕು ಸಾಗಿಸುವ ಸ್ಥೈರ್ಯದ ನೋಟವಿದೆ. ನಿಲುಕಿದ ತಾರೆ ಓದುಗರ ಕಲ್ಪನಾ ವ್ಯಾಪ್ತಿಗೂ ನಿಲುಕುವಂತೆಯೇ ಲೇಖಕಿ ಈ ಸುಂದರ ಹೊತ್ತಗೆಯನ್ನು ಕಟ್ಟಿಕೊಟ್ಟಿದ್ದಾರೆ.” ಎಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ.