“ದಕ್ಷಿಣಾಯನ ಪುಸ್ತಕವು ಜೋಗಿ ಅವರ ಸೃಜನಶೀಲ ಕೃತಿ ಮತ್ತು ಅಂಕಿತ ಪುಸ್ತಕ ಪ್ರಕಾಶನದ ಮೂಲಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಅಮೂಲ್ಯ ಸಂಯೋಜನೆಯಾಗಿದ್ದು, ಓದುಗರನ್ನು ಆಕರ್ಷಕ ಕಥೆ ಮತ್ತು ಗಂಭೀರ ಅರ್ಥಗಳ ಮೂಲಕ ಪ್ರೇರೇಪಿಸುತ್ತದೆ. ಕನ್ನಡ ಭಾಷೆಯ ಪ್ರೇಮಿಗಳು ಮತ್ತು ಸಾಹಿತ್ಯ ಪ್ರಾಮಾಣಿಕರಿಗೆ ಇದು ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ. ಸೂರ್ಯನು ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ ತಿರುಗಿ ತನ್ನ ಪಥ ಬದಲಿಸಿಕೊಳ್ಳುವ ಕಾಲ; ಈ ಅವಧಿ ದೇವತೆಗಳ ರಾತ್ರಿ; ದಕ್ಷಿಣಾಯನದಲ್ಲಿ ಹಗಲು ಕಡಿಮೆಯಿದ್ದು, ರಾತ್ರಿ ದೀರ್ಘ: ಒಂದು ಬಗೆಯ ಭಾಷಾ ಪ್ರಯೋಗ; ಬಲಕ್ಕೆ ತಿರುಗುವುದು; ದಕ್ಷಿಣ ಮಾರ್ಗದಲ್ಲಿ ನಡೆಯುವುದು. ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ” ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ಈ ಪ್ರದೇಶದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ” ಇವುಗಳು ಪತ್ರಕರ್ತ ಹರೀಶ್ ಕೇರ ಅವರು ಜೋಗಿಯವರ ಕಾದಂಬರಿಗೆ ಬರೆದ ಬೆನ್ನುಡಿ. ಕನ್ನಡದ ಖ್ಯಾತ ವಿಮರ್ಶಕ ಹಾಗೂ ಲೇಖಕ ಸುಬ್ರಾಯ ಚೊಕ್ಕಾಡಿ ಅವರು ‘ದಕ್ಷಿಣಾಯನ’ ಕೃತಿಗೆ ಮುನ್ನುಡಿಯನ್ನು ಬರೆಯುತ್ತಾ “ ಜೋಗಿಯವರು ನಮ್ಮ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರು. ಅವರ ಕೃತಿಗೆ ಮುನ್ನುಡಿಯ ಶಿಫಾರಸೇನೂ ಅಗತ್ಯವಿಲ್ಲ. ಅವರ ಬರೆವಣಿಗೆಯ ವೇಗವೂ ಅಸಾಧಾರಣ ವಾದದ್ದು. ಈಚೆಗಷ್ಟೇ ಒಂದು ಕಾದಂಬರಿಯನ್ನು ಪ್ರಕಟಿಸಿದ ಅವರು ಇದೀಗ ಮತ್ತೊಂದು ಕಾದಂಬರಿಯನ್ನು ರಚಿಸಿದ್ದಾರೆ. ಜೋಗಿಯವರ ಹೊಸ ಕಾದಂಬರಿ 'ದಕ್ಷಿಣಾಯನ'ವು, ನಾಡಿನಲ್ಲಿ ಈಚೆಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ದಕ್ಷಿಣ ಕನ್ನಡದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತದೆ.
ಹಿಂದೆ ದಕ್ಷಿಣ ಕನ್ನಡವು ಈಗಿನ ಕರ್ನಾಟಕಕ್ಕೆ ಬದಲಾಗಿ ಆಗಿನ ಮದ್ರಾಸ್ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದುದರಿಂದ ಕರ್ನಾಟಕಕ್ಕಿಂತ ಭಿನ್ನವಾಗಿ ಹಾಗೂ ರಾಜಕಾರಣಕ್ಕಿಂತ ದೂರವಾಗಿ ತಣ್ಣಗೆ ಇದ್ದ ಜಿಲ್ಲೆಯಾಗಿತ್ತು. ಕೃಷಿ ಪ್ರಧಾನವಾದ ಈ ಜಿಲ್ಲೆಯು ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಸರಾಗಿತ್ತು. ಚದುರಿದಂತಿರುವ ಮನೆಗಳು, ಸಾರಿಗೆ ಸೌಕರ್ಯದ ಅಭಾವ ಇತ್ಯಾದಿ ಗಳಿಂದಾಗಿ ರಾಜ್ಯದ ಉಳಿದೆಡೆಗಳಲ್ಲಿ ನಡೆದಿದ್ದ ಚಳವಳಿಗಳ ಬಿಸಿ ಇಲ್ಲಿಗೆ ತಟ್ಟಿರಲಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ಕೂಡಾ ಭಾಗವಹಿಸಿದ್ದವರ ಸಂಖ್ಯೆ ಕಡಿಮೆಯೇ ಇತ್ತು. ಸ್ವಾಭಾವಿಕವಾಗಿ ಇಲ್ಲಿನ ಜನ ಸಮುದಾಯ ಮೆಲು ಮಾತಿನದಾಗಿತ್ತು. ವಿಭಿನ್ನ ಸಮುದಾಯಗಳ ನಡುವೆಯೂ ಸೌಹಾರ್ದದ ವಾತಾವರಣವಿತ್ತು.
ಆದರೆ ಈ ಕಾದಂಬರಿಯ ಕಥೆಯು ಈ ಹಳೆ ದಕ್ಷಿಣ ಕನ್ನಡದ ಬದಲಾಗಿ ನಂತರದ ಹೊಸ ತಲೆಮಾರಿನ ಸಮುದಾಯದ ದ.ಕ.ದ ಕಥೆಯನ್ನು ಒಳಗೊಂಡಿದೆ. ಪ್ರಶಾಂತ ಕೊಳದಂತಿದ್ದ ಇಲ್ಲಿನ ಜನಜೀವನದಲ್ಲಿ ಬದಲಾವಣೆಯ ಅಲೆಗಳೇಳತೊಡಗಿದ್ದು ಈಚಿನ ವರ್ಷಗಳಲ್ಲಿ, ಹಿಂದೆ ಧರ್ಮ ಮತ್ತು ರಾಜಕಾರಣವು ಬೇರೆ ಬೇರೆಯೇ ಆಗಿದ್ದದ್ದು ಈಚೆಗೆ ಇಲ್ಲಿ, ಸಂವಿಧಾನಾಧರಿತ ರಾಜಕಾರಣದ ಬದಲಾಗಿ ಧರ್ಮಾಧರಿತ ರಾಜಕಾರಣದ ಶಕೆ ಆರಂಭವಾಯಿತು. ಅದರಿಂದಾಗಿಯೇ ಹಿಂದಿನ ಕೋಮು ಸೌಹಾರ್ದಕ್ಕೆ ಬದಲಾಗಿ ನಿಧಾನವಾಗಿ ಕೋಮು ಸಂಘರ್ಷ ಎಂಬ ವಿಷವು ಹರಡತೊಡಗಿತು. ಇದರ ಪರಿಣಾಮವಾಗಿ ಜನ ಸಮುದಾಯದ, ಕುಟುಂಬದ ಮಾತ್ರವಲ್ಲ ವ್ಯಕ್ತಿಯ ವ್ಯಕ್ತಿತ್ವದಲ್ಲೂ ಬಿರುಕುಗಳು ಕಾಣಿಸಿಕೊಂಡವು. ಆಧುನಿಕ ತಂತ್ರಜ್ಞಾನಗಳು, ಮುಖ್ಯವಾಗಿ ಸೋಶಿಯಲ್ ಮೀಡಿಯಾಗಳು, ಪಾಡ್ ಕಾಸ್ಟ್‌ಗಳು ಯೂಟ್ಯೂಬ್ ಚಾನಲ್‌ಗಳು, ಈ ಬದಲಾವಣೆಗಳ ಅಗ್ನಿಜ್ವಾಲೆಗಳು ವೇಗ ಪಡೆದುಕೊಳ್ಳಲು ಆಜ್ಯವನ್ನು ಸುರಿದವು. ಈ ಎಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿ ಅವಕ್ಕೆ ದನಿ ನೀಡಲು ಯತ್ನಿಸಿದ್ದು ಸದಾನಂದ ಪಡುಕೋಣೆ ಸಂಪಾದಕತ್ವದ 'ಕರಾವಳಿ' ಎನ್ನುವ ಪತ್ರಿಕೆ ಹಾಗೂ ಅದರ ಪತ್ರಕರ್ತೆ ಪಾಂಚಾಲಿ ಎನ್ನುವ ದಿಟ್ಟೆ ತನ್ನ ವರದಿಯೊಂದರ ಪರಿಣಾಮವಾಗಿ ಎದುರಾದ ಪ್ರತಿಭಟನೆಯನ್ನು ಧೈರ್ಯವಾಗಿ ಎದುರಿಸಿದ ಪಾಂಚಾಲಿಯು ಆಮೇಲೆ, ವಿಚಾರ ವಂತನಾಗಿದ್ದೂ ಕೊನೆಗೆ ಜ್ಞಾನ ಜಡನಾಗಿ ಸ್ವಮೋಹಪೀಡಿತನಾದ ಪದ್ಮನಾಭ ಕಲ್ಮಾಡಿ, ಕುಟಿಲ ತಂತ್ರಗಳ ರಾಜಕಾರಣಿ ಸೀತಾರಾಮ ಆಚಾರ್ಯ, ಪುರಾಣ ಪಾತ್ರಗಳಲ್ಲೇ ಜೀವಿಸುತ್ತ ಕುಟುಂಬದ ನೆಮ್ಮದಿಯನ್ನು ಮರೆತ ತನ್ನ ತಂದೆಯೇ ಆದ ತಾಳಮದ್ದಳೆ ಅರ್ಥಧಾರಿ ರಾಘಣ್ಣ -ಹೀಗೆ ಅನೇಕರ ಮುಖವಾಡಗಳು ಕಳಚುತ್ತಾ ಹೋದುದಕ್ಕೆ ಕಾರಣಳಾದಳು. ಆ ಸಂಕೀರ್ಣ ಸನ್ನಿವೇಶದಲ್ಲಿ ಅವಳಿಗೆ ಬೆಂಬಲವಾಗಿ ನಿಂತದ್ದು ಚೈತನ್ಯ ಹಾಗೂ ಹಮೀದ.
ಸೈದ್ಧಾಂತಿಕತೆ ಎಂಥ ಶಾಪ ಎಂದರೆ ಅದರಿಂದ ಮುಕ್ತಿಯೇ ಇಲ್ಲ ಎನ್ನುವ ಮಾತು ಒಂದೆಡೆ ಬರುತ್ತದೆ. ಅದಕ್ಕೆ ಸಾಕ್ಷಿಯಾಗಿ ಇಲ್ಲಿ ಅನೇಕ ಅನಪೇಕ್ಷಿತ ಘಟನೆಗಳು ನಡೆಯುತ್ತವೆ. ಇವುಗಳ ಶೃಂಗ ಸ್ಥಿತಿಯೆಂಬಂತೆ ಕೊನೆಯಲ್ಲಿ, ಕರಾವಳಿಯ ಸಂಪಾದಕ ಸದಾನಂದ ಬರೆದ 'ಕೋಮುವಾದದ ಪ್ರಯೋಗಶಾಲೆ' ಅನ್ನುವ ಒಂದು ಸಂಪಾದಕೀಯ ದಿಂದಾಗಿ ಭುಗಿಲೆದ್ದ ಪ್ರತಿಭಟನೆಯ ಬೆಂಕಿಯು ಇಡಿಯ ಸಮುದಾಯವನ್ನು ಆವರಿಸಿಕೊಳ್ಳುತ್ತದೆ. ಕೊಲೆ, ಬೆಂಕಿ ಹಚ್ಚುವಿಕೆಯಂಥ ಕೋಮು ದ್ವೇಷದ ಜ್ವಾಲೆಯಿಂದ ಪಾಂಚಾಲಿ ಪಾರಾಗಲು ನೆರವಾದದ್ದು ಚೈತನ್ಯ.

ಹೊರ ಜಗತ್ತಿನ ಎಲ್ಲವನ್ನು ಧೈರ್ಯದಿಂದಲೇ ಎದುರಿಸುತ್ತಾ ಹೋದ ಪಾಂಚಾಲಿಯ ಅಂತರಂಗವನ್ನೇ ಕಲಕಿದ ಎರಡು ಘಟನೆಗಳೆಂದರೆ ತಂದೆ ರಾಘಣ್ಣ ಪತ್ನಿ ಸರೋಜಿನಿಯನ್ನು 'ಬೇವಾರ್ಸಿ ಮುಂಡೆ' ಎಂದು ಬೈದಾಗ ಕಾಣಿಸಿದ ಸರೋಜಿನಿಯ ತಣ್ಣಗಿನ ಆದರೆ ಹರಿತವಾದ ಬಂಡಾಯ. ಇನ್ನೊಂದು ಘಟನೆ ಪ್ರೇಮಿಸಿದ ಹುಡುಗಿಯನ್ನು ಮದುವೆಯಾಗಲಾಗದೆ ಸೋದರ ಪ್ರಸಾದ ಆತ್ಮಹತ್ಯೆಗೆ ಶರಣಾದದ್ದು. ಈ ಎರಡು ಘಟನೆಗಳಿಂದ ತೀರಾ ಕುಗ್ಗಿಹೋದ ಪಾಂಚಾಲಿಯ ಮನವನ್ನು ನಿರಾಳಗೊಳಿಸಿದ್ದು, ಎರಡು ಕಾಲಗಳು ಸಂಧಿಸುವಂತೆ ನಡೆದ, ಅವಳ ಹಾಗೂ ಲೇಖಕ ಚಿದಂಬರನಾಥರ ನಡುವಿನ ಭೇಟಿ. ಈ ಭೇಟಿಯಿಂದಾಗಿ ಕೊನೆಯಲ್ಲಿ ಪಾಂಚಾಲಿ ಪಡೆಯುವ 'ಸುಮ್ಮನೆ ಇರುವ ಸುಖದ' ಅರಿವು.
ತಂದೆ ರಾಘಣ್ಣ ಹಾಗೂ ಚಿದಂಬರನಾಥ ಇಬ್ಬರೂ ತಾವು ಸೃಷ್ಟಿಸಿದ ಪಾತ್ರಗಳಲ್ಲೇ ಜೀವಿಸಿದವರು. ಆದರೆ ರಾಘಣ್ಣನ ರೀತಿಯು ಅವರ ಪತ್ನಿಯ ಬಂಡಾಯಕ್ಕೆ ಕಾರಣ ವಾದರೆ ಚಿದಂಬರನಾಥರ ರೀತಿಯು, ತಲ್ಲಣಗೊಂಡ ಪಾಂಚಾಲಿಯ ಮನವನ್ನು ನಿರಾಳಗೊಳಿಸಲು ಕಾರಣವಾಯಿತು! ಜನರನ್ನು ಒಂದು ಮಾಡೋದೂ, ಬೇರೆ ಮಾಡೋದೂ ಧರ್ಮ ಹಾಗೂ ಜಾತಿಯೇ ಇದನ್ನೇ ಕಳೆದ ಅನೇಕ ವರ್ಷಗಳ ದ.ಕ.ದ ಘಟನಾವಳಿಗಳ ಮೂಲಕ ಸೂಚಿಸ ಹೊರಟ ಈ ಕಾದಂಬರಿಯು ದಕ್ಷಿಣ ಕನ್ನಡವನ್ನು ಉದಾಹರಣೆ ಯಾಗಿಟ್ಟುಕೊಂಡು ಹೇಳಿದ್ದರೂ ಅದು ಸದ್ಯ ನಮ್ಮ ಎಲ್ಲ ಜಿಲ್ಲೆ, ರಾಜ್ಯಗಳ ಸ್ಥಿತಿಯೂ ಹೌದು.
ಈ ಬದಲಾವಣೆಯ ಹೆಜ್ಜೆಗಳನ್ನು ನಿರುದ್ವೇಗದಿಂದ ನಿರೂಪಿಸುವ ಈ ಕಾದಂಬರಿಯು ಸದ್ಯದ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಕನ್ನಡಿಯು ಬೆಳಕು ನೀಡುವ ದೀಪವಾಗಲಿ: ಸುಡುವ ಬೆಂಕಿಯಾಗದಿರಲಿ ಎನ್ನುವ ಆಶಯವೂ ಕೃತಿಯ ಅಂತರ್ಯದಲ್ಲಿದೆ.” ಎಂದು ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.