ನಾನು ಯಾರು?
ಕೆ.ಪಿ.ಅಶ್ವಿನ್ ರಾವ್
ಜನವರಿ ೩೦, ೨೦೨೬
೧೬ ವೀಕ್ಷಣೆಗಳು
“ಸ್ವಾಮಿ ವಿವೇಕಾನಂದರ ‘ನಾನು ಯಾರು?’ ಎನ್ನುವ ಈ ಈ ಗ್ರಂಥವನ್ನು ಒಂದು ಶಕ್ತಿಶಾಲೀ ಚಿಕಿತ್ಸೆ ಎಂದೇ ಎನ್ನಬಹುದು. ಈ ಗ್ರಂಥದಲ್ಲಿರುವ ಚಿಂತನೆಗಳು ನಮ್ಮ ಜೀವನ-ಮನಸ್ಸು-ಚೈತನ್ಯಗಳ ಮೇಲೆ ನೇರವಾಗಿ ಕೆಲಸ ಮಾಡುತ್ತವೆ. ಅವುಗಳ ಮೂಲ ಆಶಯವೇ 'ಶಕ್ತಿ ಸಂಚಾರ.' ಏಕೆಂದರೆ, "ಜಗತ್ತಿನ ಎಲ್ಲ ಕಾಯಿಲೆಗಳಿಗೂ ಶಕ್ತಿಯೇ ದಿವ್ಯೌಷಧ.” ಈ ಗ್ರಂಥದಲ್ಲಿರುವ ಮಾತುಗಳು ಸತ್ಯಮಾರ್ಗದಲ್ಲಿ ನಡೆಯುತ್ತಿರುವರಿಗೆ ಪ್ರೇರಣೆ ನೀಡುವಂತೆಯೇ ಸಾಮಾನ್ಯ ಬದುಕಿನ ಕಟುವಾಸ್ತವಗಳನ್ನು ಎದುರಿಸಲೂ ನೆರವಾಗುತ್ತವೆ. ಇಲ್ಲಿರುವುದೆಲ್ಲ ಕೇವಲ ಶಕ್ತಿ-ಉತ್ಸಾಹಗಳನ್ನು ತುಂಬುವಂತಹ ಮತ್ತು ಇಚ್ಛಾಶಕ್ತಿಯನ್ನು ಬಡಿದೆಬ್ಬಿಸುವ ಮಾತುಗಳೇ. ಇವು, ಆತ್ಮಜ್ಞಾನ-ಆರೋಗ್ಯಕರ ಆಧ್ಯಾತ್ಮಿಕತೆ-ಉದಾತ್ತ ಭಾವನೆಗಳನ್ನು ಮತ್ತು ಅತಿ ಮುಖ್ಯವಾಗಿ, "ಸೋಲನ್ನೆಂದಿಗೂ ಒಪ್ಪದಂತಹ ಕೆಚ್ಚನ್ನು" ಹೊಂದುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಭ್ರಾಂತಿಯ ಪರದೆಯನ್ನು ಹರಿದು ಬಿಸಾಡಲು ಪ್ರವಾದಿಯೊಬ್ಬನು ಬಳಸುವ ಎಲ್ಲ ಬಗೆಯ ತಂತ್ರಗಳೂ ಈ ಪುಸ್ತಕದಲ್ಲಿ ಥಟ್ಟನೆ ಕಾಣುತ್ತವೆ - ಕುಟುಕು, ತೀಕ್ಷ್ಣತೆ, ಮತ್ತು ರಸ ಇತ್ಯಾದಿ.
ತನ್ನ ಮಾತು ಮತ್ತು ಚಿಂತನೆಗಳಿಂದ ಈ ಗ್ರಂಥಕ್ಕೆ ಪ್ರಾಣವನ್ನು ತುಂಬಿರುವ ಪ್ರವಾದಿ, ಭಾರತೀಯ ಸನ್ಯಾಸಿ ಸ್ವಾಮಿ ವಿವೇಕಾನಂದರು. ಈಗ್ಗೆ ಸುಮಾರು ಒಂದು ಶತಮಾನಕ್ಕಿಂತ ಹಿಂದೆ ಇಡೀ ಅಮೆರಿಕೆಯ ಮೆಚ್ಚುಗೆ, ಗೌರವಗಳಿಗೆ ಪಾತ್ರರಾಗಿದ್ದವರು ಸ್ವಾಮಿ ವಿವೇಕಾನಂದರು. ೧೮೯೩ರಲ್ಲಿ ವಿವೇಕಾನಂದರು ಅಮೆರಿಕೆಯಲ್ಲಿ ಕಾಲಿಟ್ಟಾಗ ಅವರಿಗೆ ಮೂವತ್ತು ವರ್ಷ ವಯಸ್ಸು, ಸದೃಢವಾದ ದೇಹ, ಮಾಡು ಇಲ್ಲವೆ ಮಡಿ ಎಂಬ ಸಾಹಸೀ ಪ್ರವೃತ್ತಿ, ಲವಲವಿಕೆ ಮತ್ತು ಪಾವಿತ್ರ್ಯ... ಇವೆಲ್ಲವೂ ಅವರಲ್ಲಿ ಹದವಾಗಿ ಮೇಲೈಸಿದ್ದವು. ಅವರಿಗೊಂದು ಕರ್ತವ್ಯ ವಿತ್ತು; ಅವರ ಗುರುಗಳಾದ ಶ್ರೀರಾಮಕೃಷ್ಣರು ಮಹಾಸಮಾಧಿಗೆ ಮುನ್ನ ತುಂಡು ಕಾಗದದ ಮೇಲೆ ಬರೆದಿದ್ದರು: “ನರೇನ್ (ವಿವೇಕಾನಂದ) ಲೋಕಶಿಕ್ಷಕನಾಗುತ್ತಾನೆ. ಅವನ ಮಾತನ್ನು ಸ್ವದೇಶದಲ್ಲಿ ಮತ್ತು ವಿದೇಶಗಳಲ್ಲಿ, ಎಲ್ಲರೂ ಕೇಳುತ್ತಾರೆ.'' ಅದು ಹಾಗೇ ಆಯಿತು. ಅಮೆರಿಕೆಯಲ್ಲೇ ಅವರ ಲೋಕಶಿಕ್ಷಣ ಪ್ರಾರಂಭವಾಗಿದ್ದು; "ನಿಮ್ಮೊಳಗಿರುವ ದಿವ್ಯತೆಯನ್ನು ಅರಿಯಿರಿ ಎಂದು ಜಗತ್ತಿಗೆ ಕೂಗಿ ಹೇಳುತ್ತೇನೆ.''
ಸ್ವಾಮಿ ವಿವೇಕಾನಂದರು ೧೨ನೇ ಜನವರಿ, ೧೮೬೩ರಂದು ಭಾರತದ ಕೋಲ್ಕತಾ ಮಹಾ ನಗರದಲ್ಲಿ ಶ್ರೀಮಂತವಾಗಿದ್ದ ದತ್ತ ಕುಟುಂಬದಲ್ಲಿ ಜನಿಸಿದರು. ಇದಾದ ಕೆಲವು ದಿನಗಳಲ್ಲೇ ಲಿಂಕನ್ 'ವಿಮೋಚನಾ ಘೋಷಣೆ'ಗೆ ಸಹಿ ಹಾಕಿದ್ದು. ಭಾರತ, ಆಗ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿದ್ದ ಒಂದು ಬ್ರಿಟಿಷ್ ವಸಾಹತಾಗಿತ್ತು. ದತ್ತ ದಂಪತಿಗಳು, ಬದುಕುಳಿದ ತಮ್ಮ ಮೊಟ್ಟಮೊದಲ ಮಗುವಿಗೆ ನರೇಂದ್ರನಾಥ ಎಂದು ನಾಮಕರಣ ಮಾಡಿದರು. ರಾಜಕುಮಾರನಂತೆ ಇದ್ದ ನರೇಂದ್ರನಾಥ, ನಡೆ-ನುಡಿ, ಆಟ-ಪಾಠ ಎಲ್ಲದರಲ್ಲೂ ಉಳಿದವರೆಲ್ಲರಿಗಿಂತಲೂ ವಿಶೇಷವಾಗಿದ್ದ, ಧೀರ-ಗಂಭೀರನಾಗಿದ್ದ. ಮುಂದೆ ಅನಾಮಧೇಯ ಸಂನ್ಯಾಸಿಯಾಗಿ ಕಾಡು-ಮೇಡುಗಳಲ್ಲಿ ಅಲೆಯುವಾಗಲೂ, ವೈಭವಗಳ ನಡುವೆ ಇರುವಾಗಲೂ ಈ ರಾಜಗಾಂಭೀರ ಮರೆಯಾಗಲಿಲ್ಲ.” ಎನ್ನುವ ನುಡಿಗಳು ಮುನ್ನುಡಿಯಲ್ಲಿ ಕಾಣಸಿಗುತ್ತವೆ.
ನಾನು ಯಾರು? ಕೃತಿಯ ಮೊದಲ ಅಧ್ಯಾಯದಲ್ಲಿ ಕೆಲವೊಂದು ಅತ್ಯದ್ಭುತವಾದ ಮಾಹಿತಿಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ…
* ಮಾನವನು ಮೊದಲು ಸ್ಕೂಲದೇಹದಿಂದಾಗಿರುವನು. ಎರಡನೆಯದಾಗಿ ಮನಸ್ಸು ಬುದ್ಧಿ ಅಹಂಕಾರ-ಇವುಗಳಿಂದ ಕೂಡಿದ ಸೂಕ್ಷ್ಮದೇಹವಾಗಿರುವನು. ಅದರ ಹಿಂದೆ ನಿಜವಾದ ಆತ್ಮನಿರುವನು. ಸ್ಕೂಲದೇಹದ ಗುಣಶಕ್ತಿಗಳೆಲ್ಲ ಮನಸ್ಸಿನಿಂದ ಬಂದಿವೆ. ಈ ಸೂಕ್ಷ್ಮ ದೇಹವೆಂಬ ಮನಸ್ಸು ತನ್ನ ಹಿಂದೆ ಇರುವ ಆತ್ಮನಿಂದ ತನ್ನ ಶಕ್ತಿಗಳನ್ನೆಲ್ಲ ಪಡೆಯುತ್ತದೆ.
* ಪ್ರತಿ ಜೀವವೂ ದಿವ್ಯವಾದುದು, ಅದು ಬ್ರಹ್ಮ ಸ್ವರೂಪವೆಂದು ನಾವು ನಂಬು ತೇವೆ. ಪ್ರತಿ ಜೀವವೂ ಕೂಡ ಅಜ್ಞಾನದ ಮೋಡದಿಂದ ಕವಿದುಕೊಂಡಿರುವ ಸೂರ್ಯ ನಂತೆ. ಒಂದು ಜೀವನಿಗೂ, ಮತ್ತೊಂದು ಜೀವನಿಗೂ ಇರುವ ವ್ಯತ್ಯಾಸವು ಜೀವವನ್ನು ಮುಚ್ಚಿಕೊಂಡಿರುವ ಮೋಡದ ತರತಮದಲ್ಲಿದೆ.
* ನಮಗೆ ಪ್ರಜ್ಞೆಗೆ ಕೆಳಗಿರುವುದೂ ಅರಿವಿಲ್ಲ, ಅದಕ್ಕೆ ಮೀರಿರುವುದೂ ಅರಿವಿಲ್ಲ. ಪ್ರಜ್ಞಾವಸ್ಥೆ ಮಾತ್ರ ನಮಗೆ ಗೊತ್ತಿದೆ. ಒಬ್ಬ ಮನುಷ್ಯ ತಾನು ಪಾಪಿ ಎಂದು ಹೇಳಿ ಕೊಂಡರೆ ಅದು ಸುಳ್ಳು, ಏಕೆಂದರೆ ತಾನು ಏನೆಂಬುದು ಇವನಿಗೆ ಗೊತ್ತಿಲ್ಲ. ಅವನೇ ಮೂಢಾಧಮ. ಅವನಿಗೆ ಸಂಬಂಧಪಟ್ಟಿರುವುದರಲ್ಲಿ ಎಲ್ಲೊ ಒಂದು ಭಾಗ ಮಾತ್ರ ಅವನಿಗೆ ಗೊತ್ತಿದೆ.
* ನಾವು ಮಾಡುವ ತಪ್ಪೆಂದರೆ ಅವಿನಾಶಿಯಾದ ಆತ್ಮಕ್ಕೆ ಅಂಟಿಕೊಳ್ಳುವ ಬದಲು ದೇಹಕ್ಕೆ ಅಂಟಿಕೊಂಡಿರುವುದು.
* ಯಾರು ತಾನು ದೇಹವೆಂದು ಹೇಳುವನೊ ಅವನೂ ಹುಟ್ಟು ವಿಗ್ರಹಾರಾಧಕ. ನಾವು ಆತ್ಮ. ಆತ್ಮಕ್ಕೆ ನಾಮ ರೂಪಗಳಿಲ್ಲ. ಆತ್ಮ ಅನಂತವಾದುದು, ಜಡವಸ್ತುವಲ್ಲ.”
* ಕೆಲವರಿಗೆ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಅಂಜಿಕೆ. ಒಂದು ಹಂದಿ ದೇವತ್ವ ವನ್ನು ಪಡೆದರೆ ದೇವರಾದರೆ ತನ್ನ ಹಂದಿತನವನ್ನು ಕಳೆದುಕೊಳ್ಳುವುದು ಒಳ್ಳೆಯದಲ್ಲವೇ? ಒಳ್ಳೆಯದು. ಆದರೆ ಪಾಪ, ಸದ್ಯಕ್ಕೆ ಹಂದಿಯು ಹಾಗೆ ಭಾವಿಸುವುದಿಲ್ಲ. ಯಾವುದು ನನ್ನ ನಿಜವಾದ ವ್ಯಕ್ತಿತ್ವ? ನಾನು ಮಗುವಾಗಿ ನೆಲದ ಮೇಲೆ ಹೊರಳಾಡುತ್ತಿದ್ದಾಗ ಬೆರಳನ್ನು ಚೀಪುತ್ತಿದ್ದ ಕಾಲವೇ? ಆ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದಕ್ಕೆ ನಾನು ವ್ಯಥೆಪಡಬೇಕೆ? ಐವತ್ತು ವರುಷಗಳಾದ ಮೇಲೆ ನನ್ನ ಈಗಿನ ಸ್ಥಿತಿಯನ್ನು ನೆನಸಿಕೊಂಡು ನಾನು ನಗುವೆನು, ಈಗ ನಾನು ನನ್ನ ಹಿಂದಿನ ಮನಸ್ಸಿನ ಸ್ಥಿತಿಯನ್ನು ನೋಡಿ ನಗುವಂತೆ. ನಾನು ಇವುಗಳಲ್ಲಿ ಯಾವ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕಾಗಿದೆ?”
ಈ ಕೃತಿಯನ್ನು ನಾನು ಯಾರು? ಮಾನವನ ಪರಿಸ್ಥಿತಿ, ಯಾರೂ ಕೂಡಾ ನಿರಾಶ್ರಿತರಲ್ಲ, ಹಲವು ಜನರು, ಹಲವು ಮಾರ್ಗಗಳು ಮೊದಲಾದ ಸುಮಾರು ೧೭ ಅಧ್ಯಾಯಗಳಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದು ಅಧ್ಯಾಯವೂ ನಮ್ಮ ನಿಜವಾದ ನೆಲೆ- ಶುದ್ಧ ಆನಂದದ ಸೆಲೆಯನ್ನು ಅನ್ವೇಶಿಸುತ್ತದೆ. ಸುಮಾರು ೧೬೦ ಪುಟಗಳ ಈ ಕೃತಿ ಸ್ವಾಮಿ ವಿವೇಕಾನಂದರ ನುಡಿಗಳಲ್ಲಿ ‘ನಮ್ಮ ನಿಜವಾದ ವ್ಯಕ್ತಿತ್ವ ಮತ್ತು ಶಕ್ತಿಯ ಮೂಲ’ವನ್ನು ತಿಳಿಸಿಕೊಡುತ್ತದೆ.
ಪ್ರಕಟಿಸಿದ: ಜನವರಿ ೩೦, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬