ಚೈತ್ರಾ ಶಿವಯೋಗಿ ಮಠ ಇವರು ಖ್ಯಾತ ಅಮೇರಿಕನ್ ಕವಯತ್ರಿ ಮೇರಿ ಆಲಿವರ್ ಅವರ ಕವಿತೆಗಳನ್ನು ‘ಆಕಾಶ ನದಿ ಬಯಲು’ ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಅನುವಾದದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಲೇಖಕರಾದ ಜಿ ಪಿ ಬಸವರಾಜು. ಅವರ ಅನಿಸಿಕೆಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ತನ್ನನ್ನು ಕವಿ ಅಂದುಕೊಳ್ಳದ, 'ನಾನೊಂಥರಾ ಬದುಕಿನ ವರದಿಗಾರಳು' ಎಂದುಕೊಳ್ಳುವ ಅಮೆರಿಕನ್ ಕವಿ ಮೇರಿ ಆಲಿವರ್ ತಮ್ಮ ಇಡೀ ಜೀವನವನ್ನೇ ಕಾವ್ಯಕ್ಕೆ ಮುಡುಪಾಗಿ ಇಟ್ಟವರು. ತಮ್ಮ ಅಭಿವ್ಯಕ್ತಿಯ ಹರವನ್ನು ಕೇವಲ ಮನುಷ್ಯರ ಬದುಕಿಗೆ ಮಾತ್ರ ಸೀಮಿತಗೊಳಿಸದೆ ಸಕಲ ಜೀವ ಸಂಕುಲಕ್ಕೆ ಹಿಗ್ಗಿಸಿದವರು. ಮೇರಿ ಅವರ ಕಾವ್ಯ ತನ್ನ ಸುತ್ತಲಿನ ಗಿಡ ಮರ ಬೆಟ್ಟ ಗುಡ್ಡ ನದಿ ಹಕ್ಕಿ ಪ್ರಾಣಿಗಳನ್ನು ತನ್ನ ಬಾಹುಗಳ ಒಳಕ್ಕೆ ತಂದುಕೊಳ್ಳುತ್ತ ಜೀವಂತಿಕೆಯನ್ನು ತುಳುಕಿಸುತ್ತದೆ. ಕಾವ್ಯವಿಲ್ಲದೆ ತನಗೆ ಬದುಕೇ ಇಲ್ಲ ಎನ್ನುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡ ಮೇರಿ ಕಾವ್ಯವನ್ನು ತನ್ನ ಅಂತರಂಗದ ದನಿಯಾಗಿ ಪೊರೆದು ಬಾಳಿದವರು. ನಿತ್ಯದ ಸಹಜ ಕಾಯಕದಂತೆ ಕಾವ್ಯವನ್ನು ಕಟ್ಟುತ್ತ, ಅದರೊಂದಿಗೆ ಸಂವಾದಿಸುತ್ತ, ಸಂಬಂಧ ರೂಪಿಸುತ್ತ ಒಂದು ರೀತಿಯ ಧ್ಯಾನದಂತೆ, ತಪಸ್ಸಿನಂತೆ ಕಾವ್ಯದ ಜೊತೆಗೇ ಬದುಕಿದವರು. ಈ ಕಾರಣಕ್ಕಾಗಿಯೇ ಅವರ ಕಾವ್ಯವೆಂದರೆ ನಿಸರ್ಗದೊಂದಿಗೆ, ಜೀವಸಂಕುಲದೊಂದಿಗಿನ ಒಟನಾಟ; ಉಸಿರಾಟ.
ಎಲ್ಲ ಸಂಬಂಧಗಳನ್ನೂ ಕಡಿದುಕೊಂಡು ಮನುಷ್ಯ ಕೇಂದ್ರಕ್ಕಷ್ಟೆ ತನ್ನನ್ನು ಸೀಮಿತಗೊಳಿಸಿಕೊಂಡು ಅಲ್ಲಿಯೇ ಸುತ್ತುವ ಆಧುನಿಕ ಮನುಷ್ಯ ಇದೀಗ ಎಚ್ಚರಗೊಂಡಂತೆ ತನ್ನ ಮೂಲಗುಣಕ್ಕೆ ಮರಳುವ ಪ್ರಯತ್ನ ನಡೆಸುತ್ತಿದ್ದಾನೆ. ಅವನಿಗೆ ಮತ್ತೆ ಗಿಡಮರಗಳ ಸಖ್ಯ, ಪ್ರಾಣಿ ಪಕ್ಷಿಗಳ ಸಂಬಂಧ, ಗುಡ್ಡಬೆಟ್ಟ ಹೊಳೆ ನದಿಗಳ ಒಡನಾಟ ಬೇಕಾಗಿದೆ. ಅದಕ್ಕಾಗಿ ಹಾತೊರೆಯುತ್ತಿರುವುದನ್ನು ನಾವಿಂದು ಜಗತ್ತಿನಾದ್ಯಂತ ನೋಡುತ್ತಿದ್ದೇವೆ. ಎಲ್ಲ ವಿನಾಶದ ಅಂಚಿಗೆ ಹೋಗಿರುವ ಹೊತ್ತಿನಲ್ಲಿ ಮೂಡಿರುವ ಈ ಅರಿವು ಅವನನ್ನು ಮತ್ತೆ ಹೊಸ ದಾರಿಯಲ್ಲಿ ನಡೆಯಲು ಹುರಿದುಂಬಿಸುತ್ತಿದೆ. ಈ ಕಾರಣಕ್ಕೊ ಏನೊ ಮೇರಿ ಆಲಿವರ್ ಅಮೆರಿಕ ಮಾತ್ರವಲ್ಲ, ಹಲವು ರಾಷ್ಟ್ರಗಳಲ್ಲಿ ಜನಪ್ರಿಯ ಕವಿ.
ನಿಸರ್ಗದ ಚೆಲುವಿನಂತೆ ಮೇರಿ ಅವರ ಕಾವ್ಯವೂ ಚೆಲುವನ್ನು ತುಂಬಿಕೊಳ್ಳಲು ನೋಡುತ್ತದೆ. ಪ್ರಾಣಿ ಜಗತ್ತಿನೊಂದಿಗೆ ಮಾತನಾಡುತ್ತದೆ. ಕಳೆದುಹೋದ ಸಂಬಂಧವನ್ನು ಮತ್ತೆ ಕಟ್ಟಲು ಹವಣಿಸುತ್ತದೆ. ಅವರಿಗೆ 'ಎಲೆಯ ಮೇಲೊಂದು ಹಾಡಿರುವುದು', 'ಮುಗಿಯದ ಕಥೆಯೊಂದು ನದಿಯ ಹೊಟ್ಟೆಯಲ್ಲಿರುವುದು' ಕಾಣಿಸುತ್ತದೆ. 'ಗುಂಗಾಡು ಹಕ್ಕಿ ತೀವ್ರವಾಗಿ ಬದುಕುವುದನ್ನು' ಕೂಡಾ ಮೇರಿ ನೋಡಬಲ್ಲವರು. 'ಗುಡ್ಡಬೆಟ್ಟಗಳು ತೂಕಡಿಸುವುದು' ಅವರಿಗೆ ಕಾಣುತ್ತದೆ. ತನ್ನ ಪ್ರೀತಿಯ ಅವ್ವನನ್ನು ಬಣ್ಣಿಸುವಾಗಲೂ ಮೇರಿಗೆ ಕಾಣುವುದು ನಿಸರ್ಗದ ಚಿತ್ರವೇ : 'ನನ್ನವ್ವ, ನೀಲ ಹೂಗಳ ಹೊತ್ತ ಹೂಬಳ್ಳಿ/ ನನ್ನವ್ವ, ಹಿತ್ತಲಲ್ಲಿ ಹರಿಯುವ ಪಾಚಿ ಕಟ್ಟಿದ ಹಳ್ಳ' ಬೆಳ್ಳಕ್ಕಿ ನಿಂತಿದೆ / ಬಿಳಿ ಮೊಂಬತ್ತಿ ಹಾಗೆ
ಎತ್ತ ಹೊರಳಿದರೂ, ಏನೂ ಕಂಡರೂ ಇವೇ ಚಿತ್ರಗಳು. ಮೇರಿ ಅವರ ಉಸಿರಾಟ ಇವಿಲ್ಲದೆ ಇಲ್ಲ. ಈ ತುಯ್ತ, ಈ ತೀವ್ರತೆ ಒಂದು ಅನಿವಾರ್ಯ ಬಂಧ, ಸಂಬಂಧ. ಹೀಗೆಯೇ ಸಹಜ ನಡೆಯಲ್ಲಿ ತನ್ನ ಬದುಕಿನ ದಾರಿಯನ್ನು ಕಂಡುಕೊಂಡು ಅದರಲ್ಲಿಯೇ ಸಾಗಿ, ಅಲ್ಲಿಂದಲೇ ನಿರ್ಗಮಿಸಿದ ಮೇರಿಯನ್ನು ಆಧುನಿಕ ಕಾವ್ಯದ ರಸಿಕರು ಮೆಚ್ಚಿದ್ದರಲ್ಲಿ ಯಾವ ಸೋಜಿಗವೂ ಇಲ್ಲ. ಈ ಮೆಚ್ಚುಗೆ ಕೂಡಾ ಒಂದು ಸಹಜ ಕ್ರಿಯೆಯೇ. ಜೊತೆಗೆ ಮೇರಿ ಕಾವ್ಯ ಅತ್ಯಂತ ಸರಳವಾದದ್ದು, ನಿಸರ್ಗದ ಮತ್ತು ಜೀವ ಸಂಕುಲದ ಜೊತೆಗಿನ ಪ್ರೀತಿಯನ್ನು ತುಂಬಿ ತುಳುಕಿಸುವಂಥದ್ದು.
ಈ ಮೇರಿಯ ಇಡೀ ವ್ಯಕ್ತಿತ್ವವನ್ನು, ಕಾವ್ಯವನ್ನು ಕಟ್ಟಿಕೊಡುವ ಪ್ರಯತ್ನವಾಗಿ "ಆಕಾಶ ನದಿ ಬಯಲು" ಕನ್ನಡದಲ್ಲಿ ಅವತರಿಸಿದೆ. ಗಾಢ ಶ್ರದ್ಧೆ ಮತ್ತು ಅಖಂಡ ಪ್ರೀತಿಯಿಂದ ಕವಿ ಚೈತ್ರಾ ಶಿವಯೋಗಿಮಠ ಅವರು ಮೇರಿಯನ್ನು ಆವಾಹಿಸಿಕೊಂಡಂತೆ ಮೇರಿ ಕಾವ್ಯವನ್ನು ಕನ್ನಡಿಸಿದ್ದಾರೆ. ಮೇರಿ ಕಾವ್ಯದ ಸಹಜ ನಡೆ, ಸರಳ ಗತಿ, ಚೆಲುವು, ವಿನ್ಯಾಸ ಮುಕ್ಕಾಗದಂತೆ, ಕನ್ನಡ ನುಡಿಗಟ್ಟಿಗೆ ಒಗ್ಗಿಸಿದ್ದಾರೆ. ಜೊತೆಗೆ ಮೇರಿ ಸಂದರ್ಶನವನ್ನು (೨೦೧೧ ರಲ್ಲಿ ಮಾರಿಯಾ ಶ್ರಿವೆರ್ ಮಾಡಿದ್ದು) ಜೋಡಿಸಿದ್ದಾರೆ. ಮೇರಿಯ ಕೃತಿಗಳ ಪಟ್ಟಿಯೂ ಇಲ್ಲಿದೆ. ಮೇರಿ ಅವರ ಸುದೀರ್ಘ ಬದುಕು, ಈ ಬದುಕಿಗಂಟಿದ ಕಾವ್ಯ ಎಲ್ಲವನ್ನೂ ಪರಿಚಯಿಸುವ ದೊಡ್ಡದಾದ ಟಿಪ್ಪಣಿಯೂ ಇದೆ. ಮೇರಿಯನ್ನು ಕುರಿತ ಒಂದು ಆಪ್ತ ಕವಿತೆಯನ್ನೂ ಚೈತ್ರಾ ಇಲ್ಲಿ ನೀಡಿ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.”
ಕನ್ನಡ ಕಾವ್ಯಪ್ರಿಯರಿಗೆ ೧೧೦ ಪುಟಗಳ ಈ ಪುಟ್ಟ ಪುಸ್ತಕದ ಕವಿತೆಗಳು ಆಪ್ತವಾಗಬಹುದು ಎನ್ನುವ ಆಶಾಭಾವನೆ ಅನುವಾದಕಿ ಚೈತ್ರಾ ಶಿವಯೋಗಿಮಠ ಇವರದ್ದು.
ಆಕಾಶ ನದಿ ಬಯಲು
ಕೆ.ಪಿ.ಅಶ್ವಿನ್ ರಾವ್
ಫೆಬ್ರವರಿ ೦೪, ೨೦೨೬
೧೪ ವೀಕ್ಷಣೆಗಳು
ಪ್ರಕಟಿಸಿದ: ಫೆಬ್ರವರಿ ೦೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬