ಪುಸ್ತಕ ಪ್ರಕಾಶ’ಕ
ಕೆ.ಪಿ.ಅಶ್ವಿನ್ ರಾವ್
ಫೆಬ್ರವರಿ ೧೮, ೨೦೨೬
೪೨ ವೀಕ್ಷಣೆಗಳು
ಕನ್ನಡ ಪುಸ್ತಕ ಪ್ರಕಾಶಕ ಸಂಸ್ಥೆಗಳಲ್ಲಿ ‘ಅಂಕಿತ’ ಪುಸ್ತಕ ಬಹುದೊಡ್ಡ ಹೆಸರು. ಈಗಾಗಲೇ ಒಂದು ಸಾವಿರ ಪುಸ್ತಕಗಳನ್ನು ಹೊರತಂದ ಕೀರ್ತಿ ಈ ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ. ಈ ಸಾಧನೆಯ ಹಿಂದಿರುವ ಶಕ್ತಿ ಪ್ರಕಾಶ್ ಕಂಬತ್ತಳ್ಳಿ ಮತ್ತು ಅವರ ಧರ್ಮಪತ್ನಿ ಪ್ರಭಾ ಕಂಬತ್ತಳ್ಳಿ. ಪ್ರಕಾಶ್ ಕಂಬತ್ತಳ್ಳಿ ಅವರ ಸಾಧನೆಯ ಬಗ್ಗೆ ‘ಪುಸ್ತಕ ಪ್ರಕಾಶ’ಕ’ ಎನ್ನುವ ಕೃತಿಯನ್ನು ಪ್ರಕಾಶ ಗಿರಿಮಲ್ಲನವರು ಬರೆದಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಲೇಖಕರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ. ಅವರು ಬರೆದ ಕೆಲವು ಸಾಲುಗಳು ಹೀಗಿವೆ…
“ಕನ್ನಡಿಗರಿಗೆ ಏನನ್ನಾದರೂ ಹೊಸತನ್ನು ಕೊಡಬೇಕೆಂಬ ಉತ್ಕಟತೆಯಿಂದ ಸಾಹಿತ್ಯ ಪ್ರಪಂಚದಲ್ಲಿ ಅಂಕಿತ ಪುಸ್ತಕ' ಪ್ರಕಾಶನ ಸಂಸ್ಥೆ ಸಾವಿರ ಪುಸ್ತಕ ಪ್ರಕಟಣೆಯೊಂದಿಗೆ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದ ಪ್ರಕಾಶ್ ಮತ್ತು ಪ್ರಭಾ ಅವರು ಮೂರು ದಶಕಗಳ ರಾತ್ರಿಯನ್ನೇ ಹಗಲು ಮಾಡಿಕೊಂಡು, ಕಷ್ಟನಷ್ಟಗಳ ಅಗ್ನಿದಿವ್ಯಗಳನ್ನು ದಾಟಿ, ಸಾರಸ್ವತ ಪರಂಪರೆಯನ್ನು ಬೆಳಗಿದ ಧವಳಕೀರ್ತಿಗೆ ಪಾತ್ರರಾಗಿದ್ದಾರೆ.
ಕಾವ್ಯ, ನಾಟಕ, ಕಾದಂಬರಿ, ಕಥೆ, ವಿಮರ್ಶೆ, ಸಂಶೋಧನೆ, ಸಂಕೀರ್ಣ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳ ಸಪ್ತಶೃಂಗಗಳನ್ನು ದಾಟಿ, ಹೊಸ ಹೊಸ ಪ್ರಯೋಗಾತ್ಮಕ ಕೃತಿಗಳ ಮೂಲಕ ಕನ್ನಡಿಗರ ಜ್ಞಾನದ ದಿಗಂತವನ್ನು ವಿಸ್ತರಿಸಿದ ಶ್ರೇಯಸ್ಸು ಅಂಕಿತ ಪುಸ್ತಕದ ಪ್ರಕಾಶ್ ಅವರದು.
ಕನ್ನಡ ಮನಸುಗಳ ಸ್ಥಿತಿಜವನ್ನು ಅರಿವಿನ ಲೋಕೋತ್ತರವಾಗಿ ಬೆಳಗಿಸುವ ಅವರ ಸೇವೆ ಒಂದು ಮೈಲುಗಲ್ಲು. ಸದಭಿರುಚಿಯ, ಸ್ಟೋಪಜ್ಞಶೈಲಿಯ, ರಸೈಕ್ಯ ದೃಷ್ಟಿಯ, ಪಾಂಡಿತ್ಯಪೂರ್ಣ ಕೃತಿಗಳನ್ನು ಪ್ರಕಟಿಸಿ ಅನೇಕ ವಿದ್ವಜ್ಜನರನ್ನು ಪ್ರಸಿದ್ದಿಗೊಳಿಸಿದ ಪ್ರಕಾಶ್ ಅವರು ತಾವು ಮಾತ್ರ ಎಲೆಯ ಮರೆಯ ಕಾಯಿಯಂತೆ ನಿರ್ಲಿಪ್ತ-ನಿರಪೇಕ್ಷ ಪ್ರಜ್ಞೆಯಿಂದ ಬದುಕುತ್ತಿದ್ದಾರೆ. ಪ್ರಕಾಶ್ ಕಂಬತ್ತಳ್ಳಿ ಅವರ ಯಶೋಗಾಥೆಯನ್ನು ಆತ್ಮೀಯರಾದ ಪ್ರಕಾಶ ಗಿರಿಮಲ್ಲನವರ ಅವರು ಅತ್ಯಂತ ರಸಗ್ರಾಹಿಯಾಗಿ ಚಿತ್ರಿಸಿದ್ದಾರೆ. ಪ್ರಕಾಶ್ ಅವರ ಬದುಕಿನ ಬಿಟ್ಟು ನೈಜನೋಟವನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಪ್ರಕಾಶ ಗಿರಿಮಲ್ಲನವರ, ದಕ್ಷಿಣ ಕರ್ನಾಟಕದ ಪ್ರಕಾಶ್ ಕಂಬತ್ತಳ್ಳಿ ಅವರ ಬದುಕು-ಸಾಧನೆ-ಸಿದ್ದಿಗಳನ್ನು ಕುರಿತು ಅತ್ಯಂತ ಮನೋಜ್ಞವಾದ ಒಳನೋಟಗಳನ್ನು ನೀಡಿದ್ದಾರೆ.”
ಪ್ರಕಟಿಸಿದ: ಫೆಬ್ರವರಿ ೧೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬