ಪಂಡಿತ್ ಭೀಮಸೇನ ಜೋಷಿ ಬಗ್ಗೆ ತಿಳಿಯದವರು ವಿರಳ. ಅವರ ಒಡನಾಟ ಹೊಂದಿದ್ದ ಕಲಾವಿದರು ದಾಖಲಿಸಿರುವ ಭೀಮಸೇನ ಜೋಷಿಯವರ ಬಗೆಗಿನ ನೆನಪುಗಳ ಪಯಣವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಚಿತ್ರಾ ಸಂತೋಷ್. ಅವರ ‘ಭೀಮ ಗಾನ’ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ. ಅವರು ಬರೆಯುತ್ತಾರೆ… “ಇದು ಭೀಮಗಾನ. ಪಂ.ಭೀಮಸೇನ ಜೋಷಿ ಅವರ ಗಾಯನ ಎಷ್ಟು ಶ್ರೇಷ್ಠವೋ, ಅವರ ಬದುಕಿನ ನಾದವೂ ಅಷ್ಟೇ ಮಧುರ. ಅವರ ರಾಗಾಲಾಪ ಎಷ್ಟು ಭೌಮವೋ, ನಡೆಯೂ ಅಷ್ಟೇ ವೈವಿಧ್ಯಮಯ. ಈ ಶ್ರೇಷ್ಠ ಗಾಯಕನ ಬದುಕಿನ ಬಣ್ಣವನ್ನು ಅಕ್ಷರಗಳಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಪತ್ರಕರ್ತೆ ಚಿತ್ರಾ ಸಂತೋಷ್. ಇಲ್ಲಿ ಮನೆಯಿಂದ ಓಡಿಹೋಗುವ ೧೧ ವರ್ಷದ ಭೀಮನೂ ಇದ್ದಾನೆ, ನಟಸಾರ್ವಭೌಮ ಡಾ.ರಾಜ್‌ರನ್ನು ಹಾಡಿ ತಣಿಸುವ ಪ್ರೌಢ ಭೀಮಸೇನ ಜೋಷಿಯೂ ಇದ್ದಾರೆ, ಭಾರತ ರತ್ನವಾಗಿ. ಇನ್ನೋರ್ವ ರತ್ನದ ಜೊತೆ ಸಂಭಾಷಿಸುವ ನಿಜ ರತ್ನವೂ ಇದ್ದಾರೆ. ಜೋಷಿಯವರ ಬದುಕಿನ ವಿವಿಧ ಹಂತಗಳನ್ನು ನಾದಲೋಕದ ವಿವಿಧ ಗಣ್ಯರಿಂದ ಹೊರತೆಗೆದ ಫಲವಿದು. ಪಂ.ಬಾಲಮುರಳೀಕೃಷ್ಣ, ಉಸ್ತಾದ್ ರಶೀದ್ ಖಾನ್, ಗುರು ಸವಾಯಿ ಗಂಧರ್ವ... ಮೊದಲಾದವರ ಜತೆಗೆಲ್ಲ ಭೀಮಣ್ಣನ ಬಂಧ ಇಲ್ಲಿ ತೆರೆದುಕೊಳ್ಳುತ್ತಾ ಸಾಗಿದೆ. ಇದರ ಜೊತೆಗೇ ಪಂ.ವಿನಾಯಕ ತೊರವಿ, ಪಂ.ವೆಂಕಟೇಶಕುಮಾರ್, ಪಂ.ಜಯತೀರ್ಥ ಮೇವುಂಡಿ, ಸಂಗೀತಾ ಕಟ್ಟಿ ಮೊದಲಾದ ಇಂದಿನ ಹಿಂದೂಸ್ಥಾನಿ ಗಾನಲೋಕದ ವಜ್ರಗಳೆಲ್ಲ ಆಸೀನರಾಗಿ ಭೀಮಸೇನ ಜೋಷಿಯವರ ಬದುಕಿನ ತುಣುಕುಗಳನ್ನು ಈ ಕೃತಿಯ ತುಂಬ ಹಾಡಿದಂತಿದೆ. ಭೀಮಸೇನ ಜೋಷಿ ಹಿಂದೂಸ್ಥಾನಿ ಸಂಗೀತಕ್ಕೇ ಗೌರವ ತಂದವರು. ಕನ್ನಡಿಗರಿಗೂ ಹೆಮ್ಮೆ. ಅವರ ಬದುಕಿನ ಕಥನ ಎಷ್ಟು ಪ್ರೇರಣದಾಯಕವೋ ಅಷ್ಟೇ ರೋಚಕ. ಅದನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಬರೆದಿರುವ ಇಲ್ಲಿನ ಬರಹಗಳಲ್ಲಿ ಪತ್ರಕರ್ತರಿಗೆ ಸಹಜವಾದ ಖಚಿತತೆ ಇದೆ, ಭಾವಪೂರಿತ ನಿರೂಪಣೆಯ ಆಪ್ತತೆಯೂ ಇದೆ. ಇದು ಮುದ ನೀಡುವ ಕಥನವೂ ಹೌದು, ಭೀಮ ಬದುಕಿನ ಮಾಹಿತಿ ಕೋಶವೂ ಹೌದು, ಭೀಮಸೇನ ಜೋಷಿ ಎಲ್ಲಿದ್ದಾರೆ ಅಂದರೆ ಇಂದಿಗೂ ಅವರ ಗಾನವನ್ನು ಆಲಿಸುವ ಅಭಿಮಾನಿಗಳಲ್ಲಿ. ಹೀಗೆ ಶ್ರದ್ಧೆಯಿಂದ ಬರೆಯುವ ಕಲಾಭಿಮಾನದ ಬರಹಗಳಲ್ಲಿ ಎನ್ನಬೇಕು. ಇಲ್ಲಿರುವುದು ಭೀಮಸೇನ ಜೋಷಿಯವರ ಅಲಾಷ ಅವರ ಖಯಾಲ್. ಇದು ಭೀಮ ಮೆಹಫಿಲ್.” ಈ ಅಪರೂಪದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕಲಾವಿದ ಪ್ರವೀಣ್ ಗೋಡ್ಖಿಂಡಿ. ಅವರು ಮುನ್ನುಡಿಯಲ್ಲಿ ದಾಖಲಿಸಿದ ಕೆಲವು ಸಾಲುಗಳು ಇಲ್ಲಿವೆ… “:ಪಂಡಿತ್‌ ಭೀಮಸೇನ ಜೋಷಿ ಎಂದರೆ ಎಂಥವರಿಗೂ ರೋಮಾಂಚನ ಉಂಟು ಮಾಡುವ ಅಪೂರ್ವ ವ್ಯಕ್ತಿತ್ವದ ಮೇರು ಕಲಾವಿದರು. ಸಂಗೀತದ ಜ್ಞಾನವುಳ್ಳವರಿಗೆ ಅವರ ಮೇಲೆ ಎಂಥ ಭಕ್ತಿಯಿತ್ತೋ, ಸಂಗೀತ ತಿಳಿಯದ ಸಾಮಾನ್ಯ ಜನರು ಕೂಡ ಅವರನ್ನು, ಅವರ ಗಾಯನವನ್ನು ಇಷ್ಟಪಡುತ್ತಿದ್ದರು. ಭಾರತದ ಯಾವುದೇ ಸ್ಥಳಕ್ಕೆ ಹೋದರೂ ಇವತ್ತಿಗೂ ಭೀಮಸೇನರ ಹೆಸರು ಹೇಳಿದರೆ ಸಾಕು ಜನರು ತೋರಿಸುವ ಪ್ರೀತಿ, ಅಭಿಮಾನ, ಗಂಭೀರವಾದ ಮರ್ಯಾದೆ-ಅದು ಬಹಳ ವಿಭಿನ್ನ. ಜನರಿಂದ ಇಂಥ ಪ್ರೀತಿಯನ್ನು ಪಡೆದ ಕಲಾವಿದರು ಬಹಳ ಕಡಿಮೆ. ಇಂಥ ಮೇರು ಕಲಾವಿದ ನನ್ನ ತಾಯಿಯ ತವರು 'ಗದಗಿನವರು' ಎನ್ನುವ ಹೆಮ್ಮೆ ನನಗಿದೆ. ನಾನು ಬಾಲ್ಯದಿಂದಲೂ ಅವರ ಸಂಗೀತ ಕೇಳಿಕೊಂಡು ಬೆಳೆದವನು. ಬಹುಶಃ ನಾನು ಐದೋ, ಆರನೇ ತರಗತಿಯಲ್ಲಿರುವಾಗ ಅವರನ್ನು ಮೊದಲ ಸಲ ಭೇಟಿಯಾಗಿದ್ದೆ. ನಮ್ಮ ತಂದೆ ಪಂ. ವೆಂಕಟೇಶ ಗೋಡ್ಖಿಂಡಿಯವರು ಅವರ ದೊಡ್ಡ ಅಭಿಮಾನಿ, ಎಷ್ಟರಮಟ್ಟಿಗೆ ಎಂದರೆ ಜೋಷಿಯವರ ಗಾಯನವನ್ನು ಕೇಳಿ, ಅವರ ಶೈಲಿಯನ್ನು ಸಂಪೂರ್ಣವಾಗಿ ಅರಿತುಕೊಂಡು ಗಾಯನದಲ್ಲಿ ಮಾತ್ರವಲ್ಲ, ವಿಶೇಷವಾಗಿ ತಮ್ಮ ಕೊಳಲ ನುಡಿಸಾಣಿಕೆಯಲ್ಲಿ ಅದನ್ನು ಅಳವಡಿಸಿಕೊಂಡರು. ತಂದೆಯವರು ಸುಮಾರು ೩೦-೪೦ ವರ್ಷ ಮಾನಸಿಕವಾಗಿ ಭೀಮಸೇನರನ್ನು ಗುರುವಾಗಿ ಸ್ವೀಕರಿಸಿ ಸಾಧನೆ ಮಾಡುತ್ತಾ ಬಂದವರು. ನಂತರ ಜೋಷಿಯವರಲ್ಲಿ ಗಂಡಾಬಂಧನ ಕೂಡ ಮಾಡಿಕೊಂಡರು. ಭೀಮಸೇನರು ಕಿರಾನಾ ಘರಾಣೆ ಗಾಯಕಿಯಲ್ಲಿ ಹಾಡುವಾಗ ಕೆಲವು ತಾನ್‌ಗಳು, ಪಲ್ಪಗಳು, ರಾಗವನ್ನು ವಿಸ್ತರಿಸುವ ಪದ್ಧತಿಯನ್ನು ಕಾಣಬಹುದು. ಅದೇ ಶೈಲಿಯನ್ನು ನಾನೂ ತಂದೆಯವರಿಂದ ಕಲಿತು ಮುಂದುವರಿಸಿಕೊಂಡು ಬಂದಿದ್ದೇನೆ. ಕೆಲವು ವ್ಯಕ್ತಿಗಳನ್ನು ನೋಡಿದ ತಕ್ಷಣ ತಲೆಬಾಗುವ ಅನಿಸುತ್ತದೆ. ಅಂಥ ಗಾಂಭೀರ್ಯ ಭೀಮಸೇನರದ್ದು. ನಾನು ಮೊದಲ ಬಾರಿಗೆ ಅವರನ್ನು ನೋಡಿದಾಗಿನ ಅನುಭವ ಹೇಳಬೇಕೆಂದರೆ ಸ್ವತಃ ದೇವರೇ ನನ್ನೆದುರು ಬಂದು ನಿಂತ ಭಾವನೆ! ನನ್ನ ತಾಯಿ ಅವರೂರಿನವರು. ನಮ್ಮ ತಾಯಿಯ ದೊಡ್ಡಪ್ಪ, ಚಿಕ್ಕಪ್ಪ ಅವರೆಲ್ಲಾ ಭೀಮಸೇನರಿಗೆ ಪಾಠ ಮಾಡಿದ್ರಂತೆ. ಹಾಗಾಗಿ, ಅವರಿಗೆ ನಮ್ಮ ಕುಟುಂಬದ ಮೇಲಿನ ಪ್ರೀತಿ ಒಂದು ಹಿಡಿ ಹೆಚ್ಚೇ! ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ನಮ್ಮ ತಂದೆಯವರನ್ನು ವಾದನಕ್ಕೆ ಕರೆದಾಗ ನಾನೂ ಹೋಗಿದ್ದೆ. ನಾವು ನುಡಿಸುವುದನ್ನು ಎದುರು ಕುಳಿತು ಕೇಳಿದರು. ಕಛೇರಿ ಮುಗಿದ ಮೇಲೆ. "ನಾನು ಹಾಡಿದ್ದನ್ನು ಕೊಳಲಿನಲ್ಲಿ ಬಾರಿಸಿಬಿಟ್ರಲ್ಲಾ. ನನ್ನ ಗಾಯನವನ್ನು ಕೊಳಲಿನಲ್ಲಿ ಕೇಳಿ ಸಂತೋಷವಾಯಿತು", ಎಂದ ಮಾತು ಇವತ್ತಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ. ಈ ರೀತಿಯ ಅನೇಕ ಅಪೂರ್ವ ಅನುಭವಗಳು ಈ ಪುಸ್ತಕದಲ್ಲಿ ಅಕ್ಷರಗಳಾಗಿವೆ. ವಿನಾಯಕ ತೊರವಿ, ಜಯತೀರ್ಥ ಮೇವುಂಡಿ, ವೆಂಕಟೇಶ ಕುಮಾರ್ ಸೇರಿದಂತೆ ಈ ರೀತಿಯ ಅನೇಕ ದಿಗ್ಗಜ ಕಲಾವಿದರ ಮನದಾಳವನ್ನು ಪತ್ರಕರ್ತೆ ಚಿತ್ರಾ ಸಂತೋಷ್ ಸೊಗಸಾಗಿ ಸಂಗ್ರಹಿಸಿ ಭೀಮಸೇನರ ಬದುಕನ್ನು ಸೆರೆಹಿಡಿದಿದ್ದಾರೆ. ಜೋಷಿಯವರಂಥ ಮೇರು ನಿರೂಪಿಸಿದ್ದಾರೆ. ಜೊತೆಗೆ ಸ್ವತಃ ತಾವೇ ಅನೇಕ ಕಲಾವಿದರ ಸಂದರ್ಶನ, ಹೇಳಿಕೆಗಳನ್ನು ಗಾಯಕ ಮುಂದಿನ ಪೀಳಿಗೆಗೆ ಪರಿಚಯವಾಗುವುದು ಬಹಳ ಆವಶ್ಯಕ. ಅವರ ಇಡೀ ಜೀವನಚರಿತೆ ನೋಡಿದರೆ ಅದು ಎಷ್ಟು ಜನರಿಗೆ ಪ್ರೇರಣೆ ನೀಡುವಂಥದ್ದು ಎಂದು ಗೊತ್ತಾಗುತ್ತದೆ. ಭೀಮಸೇನರ ಬದುಕಿನ ಇಡೀ ಪಯಣ 'ಭೀಮಗಾನ'ದಲ್ಲಿ ಅದ್ಭುತವಾಗಿ ಪ್ರಸ್ತುತಿ ಪಡೆದಿದೆ. ಸಂಗೀತವನ್ನು ಪ್ರೀತಿಸುವವರಿಗೆ, ಉದಯೋನ್ಮುಖ ಕಲಾವಿದರಿಗೆ 'ಭೀಮಗಾನ' ಹುದೊಡ್ಡ ಪ್ರೇರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕವನ್ನು ಮುಖ್ಯವಾಗಿ ಮುಂಬರುವ ಗಾಯಕ-ಗಾಯಕಿಯರು ಓದಬೇಕು, ಓದಿ ಪ್ರೇರಣೆಗೊಳ್ಳಬೇಕು. ಭೀಮಸೇನರು ಸಂಗೀತಕ್ಕಾಗಿ ಪಟ್ಟಿರುವ ಶ್ರಮವನ್ನು ಅರಿತುಕೊಂಡು ತಾವೂ ಸಾಧನೆಯ ದಾರಿಯಲ್ಲಿ ಮುನ್ನಡೆಯಬೇಕು ಎನ್ನುವ ಅಭಿಲಾಷೆ ನನ್ನದು. ವಿಶೇಷವಾಗಿ ಸಂಗೀತ ಕಲಾವಿದರ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡು ಬರೆದ ಚಿತ್ರಾ ಸಂತೋಷ್ ಅವರಿಗೆ ಸಂಗೀತಗಾರರು ಮತ್ತು ಸಂಗೀತದ ವಿದ್ಯಾರ್ಥಿಗಳ ಪರವಾಗಿ ಧನ್ಯವಾದ ಹೇಳಲೇಬೇಕು. ಎಲ್ಲರ ಮನೆಗಳಲ್ಲಿ ಈ ರೀತಿಯ ಒಂದು ಪುಸ್ತಕ ಬಂದಾಗ ಕಲೆ, ಕಲಾವಿದನ ಬಗ್ಗೆ, ನಮ್ಮ ಸಂಸ್ಕೃತಿ ಬಗೆಗಿನ ಜನರ ಗೌರವ ಇಮ್ಮಡಿಸುತ್ತದೆ. ಚಿತ್ರಾ ಅವರಿಂದ ಇನ್ನಷ್ಟು ಪುಸ್ತಕಗಳು, ಬರಹಗಳು ಒಡಮೂಡಲಿ ಎಂದು ಹಾರೈಸುತ್ತೇನೆ.”