ಅತೀತ
ಕೆ.ಪಿ.ಅಶ್ವಿನ್ ರಾವ್
ಮಾರ್ಚ್ ೧೮, ೨೦೨೬
೧೩ ವೀಕ್ಷಣೆಗಳು
‘ಅತೀತ’ ಎನ್ನುವ ಅರ್ಜುನ್ ದೇವಲದಕೆರೆ ಬರೆದ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ‘ಮಲೆನಾಡಿನ ರೋಚಕ ಕಥೆಗಳು’ ಸರಣಿಯ ಲೇಖಕರಾದ ಗಿರಿಮನೆ ಶ್ಯಾಮರಾವ್. ಅವರು ತಮ್ಮ ಬೆನ್ನುಡಿಯಲ್ಲಿ…
“ಅರ್ಜುನ್ ದೇವಾಲದಕೆರೆ ಅಪ್ಪಟ ಮಲೆನಾಡಿನವರು. ನಮ್ಮೂರಿನವರು, ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟುವರಸೆಗಳೆಲ್ಲವೂ ಕರಗತ. ಮಲೆನಾಡಿನಲ್ಲೇ ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ವರ್ಣನೆ ಸಾಧ್ಯವಿಲ್ಲ. ಅಲ್ಲಿನ ಬದುಕು. ಹಳ್ಳಿ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗರೆದು ಸುರಿಯುವ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅರ್ಜುನ್ ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ಕೃತಿಗಳನ್ನು ಹೊರಗೆ ತಂದವರು ಅವರು. ಹೃನ್ಮಯಿ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ. ಕಾಡುಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು, ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ ದೇವಾಲದಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು.”
ಈ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ ಲೇಖಕ ಹಾಗೂ ಅಂಕಣಕಾರ ಗುರುರಾಜ್ ಕೋಡ್ಕಣಿ, ಯಲ್ಲಾಪುರ. ಅವರು ಹೇಳುವಂತೆ “ ಕೆಲವೊಮ್ಮೆ ಹೀಗಾಗುತ್ತದೆ. ಜಗತ್ತಿನ ಬೇರೆ ಬೇರೆಯ ಸಾಹಿತಿಗಳನ್ನೆಲ್ಲ ಹುಡುಕಿ ತೆಗೆದು ಓದುವ ನಾವು ನಮ್ಮದೇ ಕನ್ನಡ ಸಾಹಿತ್ಯದ ಕೆಲವು ಚಂದದ ಬರಹಗಾರರನ್ನು ಮರೆತುಬಿಟ್ಟಿರುತ್ತೇವೆ. ಕೆಲವೊಮ್ಮೆ ಅವರ ಹೆಸರೂ ಸಹ ಕೇಳಿರುವುದಿಲ್ಲ. ಅದು ಅಕಾರಣವಾ..? ಊಹುಂ..!! ಖಂಡಿತ ಇಲ್ಲ.
ಇತ್ತೀಚಿನ ದಿನಗಳ ಸಾಮಾಜಿಕ ಜಾಲತಾಣಗಳು ಹುಟ್ಟು ಹಾಕುವ ಭ್ರಮೆಯ ಭಯವೂ ಅದಕ್ಕೆ ಕಾರಣವಿರಬಹುದು. ತೀರ ಬಾಲಿಶವಾದ ಪುಸ್ತಕಗಳಿಗೆ ತಮ್ಮದೇ ಗುಂಪಿನ ಇನ್ಪ್ಯೂಯೆನ್ಸರ್ ಗಳಿಂದಲೋ ಅಥವಾ ತಮ್ಮಿಂದಲೇ ಬಹುಮಾನ, ಪಾರಿತೋಷಕ ಪಡೆದ ಸ್ನೇಹಿತರಿಂದಲೋ 'ನಭೂತೋ ನ ಭವಿಷ್ಯತಿ' ಎನ್ನುವಂತೆ ಹೊಗಳಿಸಿ, ನಾವು ಅದನ್ನೆಲ್ಲ ಸತ್ಯವೆಂದು ನಂಬಿ ಪುಸ್ತಕಗಳನ್ನು ತರಿಸಿ ಹತ್ತು ಪುಟಗಳ ನಂತರ ಓದಲಾಗದೇ ಟೋಪಿ ಬಿದ್ದ ಫಲವೂ ನಮ್ಮೊಳಗಿನ ಭ್ರಮನಿರಸನಕ್ಕೆ ಕಾರಣವಿರಬಹುದು. ಈ ಎಲ್ಲ ಭ್ರಮೆಗಳ ನಡುವೆ ನಿಜಕ್ಕೂ ಪ್ರತಿಭಾನ್ವಿತ ಬರಹಗಾರನೊಬ್ಬ ಎದುರಾದರೂ ನಂಬಲಾಗದ ಸ್ಥಿತಿ ನಮ್ಮಂಥಹ ಓದುಗರದ್ದು.
ಬಹುಶಃ ಇಂಥ ಕೆಲವು ಕಾರಣಗಳಿಂದಾಗಿಯೇ ಪ್ರತಿಭಾನ್ವಿತ ಸ್ನೇಹಿತ Arjun Devaladakere ರ ಬಗ್ಗೆ ನಾನು ಕೇಳಿದ್ದು ತಡವಾಯಿತೇನೋ. ಜೊಳ್ಳು ಬೇಗ ಹಾರಿ ಹೋಗುತ್ತದೆ. ಗಟ್ಟಿತನ ಗಟ್ಟಿಯಾಗಿ ಉಳಿದು ಕಣ್ಣು ಕೋರೈಸುತ್ತದಂತೆ . ಬಹುಶಃ ಅರ್ಜುನ್ ವಿಷಯದಲ್ಲಿಯೂ ಹಾಗೇ ಆಗಿತ್ತು . ಬರಹದ ಗಟ್ಟಿತನಕ್ಕೆ ಸಾಕ್ಷಿ ಆಗಾಗ ಕಣ್ಣು ಕೋರೈಸುತ್ತಲೇ ಇತ್ತು. ' ನಕಲಿ ಇನ್ಪ್ಲೂಯೆನ್ಸರ್' ಗಳನ್ನು ದಾಟಿ ಅಸಲಿ ಓದುಗರ ಕೈಯಲ್ಲಿ ಹೊಗಳಿಸಿಕೊಂಡಿತ್ತು 'ಅತೀತ ' . ಪದೇ ಪದೇ ಈ ಪುಸ್ತಕ 'ನಿಜವಾದ' ಓದುಗರ, ಸಾಹಿತ್ಯಾಸಕ್ತರ ಪುಟಗಳಲ್ಲಿ ಕಂಡಾಗ, ಅವರಿಂದ ಮೆಚ್ಚುಗೆಯ ಸಾಲುಗಳನ್ನು ಗಳಿಸಿಕೊಂಡಾಗ , ಇದನ್ನು ಓದಬೇಕು' ಎಂದುಕೊಂಡೆ. ಅದೃಷ್ಟವಶಾತ್ ಇದರ ಎರಡನೇ ಭಾಗ 'ಅಭೀರ' ಬರುತ್ತಿದೆ ಎಂದರು ಅರ್ಜುನ್. ಬಿಡುಗಡೆಯ ದಿನವೇ ಎರಡನ್ನೂ ತೆಗೆದುಕೊಂಡೆ. ' ಮೊದಲ ಭಾಗ ಓದದೇ ಎರಡನೆಯ ಭಾಗ ಓದಬೇಡಿ' ಎನ್ನುತ್ತ ವೇದಿಕೆಯ ಮೇಲೆಯೇ ಘೋಷಿಸಿದ್ದರೆನ್ನುವ ಕಾರಣಕ್ಕೆ ಮಧ್ಯಾಹ್ನದ ಹೊತ್ತಿಗೆ ಕೈಗೆತ್ತಿಕೊಂಡೆ 'ಅತೀತ'.
'ಒಂದು ಅಲೌಕಿಕ ಪ್ರೇಮಕತೆ' ಎನ್ನುವ ಟ್ಯಾಗಲೈನ್‌ನೊಂದಿಗೆ ಶುರುವಾಗುತ್ತದೆ ಕತೆ. ನಾಯಕ ನಾಯಕಿಯ ನವಿರು ಪ್ರೇಮಕತೆಯೊಂದಿಗೆ ಶುರುವಾಗುವ ಪುಸ್ತಕಕ್ಕೆ ಕುದುರೆಯ ವೇಗವಿದೆ. ಹರೆಯದ ಪ್ರೇಮ ,ಪ್ರೇಮದಲ್ಲೊಂದು ನವಿರುಭಾವವೆಂದುಕೊಳ್ಳುವಷ್ಟರಲ್ಲಿ ಅಲ್ಲೊಂದು ಸಣ್ಣ ತಿರುವು. ತಿರುವಿನಾಚೆಗಿರುವುದೇ ಅಸಲಿ ಕತೆ. ಮೊದಲಾರ್ಧಕ್ಕೆ ವೇಗವಿದೆ. ದ್ವಿತಿಯಾರ್ಧಕ್ಕೆ ಭಯಂಕರ ವೇಗವಿದೆ. ಆದರೆ ವೇಗದ ಅವಸರದಲ್ಲಿ ಕೊಂಚವೂ ಬಿಗಿ ಕಳೆದುಕೊಂಡಿಲ್ಲ ಕಥನ. ಬರೆಯುವ ಮುನ್ನ ತಾಂತ್ರಿಕ ಲೋಕದ ಕುರಿತಾದ ಆಳವಾದ ಅಧ್ಯಯನ ಮಾಡಿದ್ದಾರೆ ಲೇಖಕರು ಎನ್ನುವುದು ಸುಲಭಕ್ಕೆ ಅರ್ಥವಾಗುತ್ತದೆ. ಓದುಗನ ಉಸಿರು ಬಿಗಿಹಿಡಿದು ಓದಿಸುವ ಸನ್ನಿವೇಶಗಳು ಕಾದಂಬರಿಕಾರನ ಪರಿಶ್ರಮವನ್ನು ವಿವರಿಸುವಲ್ಲಿ ಯಶಸ್ವಿಯಾಗುತ್ತವೆ. ಅದೇ ಕಾರಣಕ್ಕೋ ಏನೋ, ಕಥನ ಸರಾಗ. ಮಾಟಮಂತ್ರಗಳ ವಿದ್ಯೆಯ ವಿವರಣೆಗಳು, ಅಲ್ಲಿನ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಲೇಖಕರು. ಕೊನೆಯ ನೂರು ಚಿಲ್ಲರೆ ಪುಟಗಳಲ್ಲಂತೂ ಅಕ್ಷರಶಃ ವಾಮಲೋಕದ ವಿವರಣೆಗಳ ರಸದೌತಣವಿದೆ ಇಲ್ಲಿ. ಮಾಟಮಂತ್ರದ ಕಾದಂಬರಿಗಳನ್ನು ,ಅತಿಮಾನುಷ ಶಕ್ತಿಗಳ ಕುರಿತಾದ ಪುಸ್ತಕಗಳನ್ನು ಓದುವ ಆಸಕ್ತಿಯಿರುವವರು ಖಂಡಿತವಾಗಿಯೂ ಓದಬೇಕಾದ ಪುಸ್ತಕವಿದು. . ಮಧ್ಯಾಹ್ನದ ಊಟ ಮುಗಿಸಿ ಎರಡುವರೆಗೆ ಕೈಗೆತ್ತಿಕೊಂಡ ಪುಸ್ತಕ ಸಂಜೆಯ ನಾಲ್ಕೂವರೆಯ ಗೊತ್ತಿಗೆಲ್ಲ ಮುಗಿದೇ ಹೋಯಿತು.
'ನಾನು ಯಾರಿಗೂ ಉಚಿತವಾಗಿ ಪುಸ್ತಕ ಕೊಡುವುದಿಲ್ಲ. ಕಾಂಪ್ಲಿಮೆಂಟರಿ ಕಾಪಿ ಕೊಡುವುದು ನನ್ನ ಅಭ್ಯಾಸವಿಲ್ಲ ' ಎಂದಿದ್ದರು ತಮ್ಮ ಕಾರ್ಯಕ್ರಮದ ಮಾತಿನಲ್ಲಿ ಅರ್ಜುನ್. ಅವರ ಮಾತು ನೆನಪಾಗಿ ಪುಸ್ತಕದ ಮೊದಲ ಪುಟವನ್ನೊಮ್ಮೆ ತಿರುಗಿಸಿ ನೋಡಿದೆ. ಪುಸ್ತಕ 'ನಾಲ್ಕನೇ ಮುದ್ರಣ'' ಬಿದ್ದಿರುವುದು ಕಾಣಿಸಿತು. ಕೃತಿಕಾರ ಹೊಸಬನಿರಲಿ, ಹಳಬನಿರಲಿ ಪುಸ್ತಕವನ್ನು ಗೆಲ್ಲಿಸುವುದು ಆತನ ಬರಹದ ತಾಕತ್ತೊಂದೇ ಎನ್ನುವುದರ ನಿರೂಪಣೆಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎನ್ನಿಸಿ ಪುಸ್ತಕದ ಬಗ್ಗೆ ನಾಲ್ಕು ಸಾಲು ಹೀಗೆ ಬರೆದೆ.”
ಪ್ರಕಟಿಸಿದ: ಮಾರ್ಚ್ ೧೮, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬