ಮಹಾಭಾರತದಲ್ಲಿ ಬರುವ ಮಹಾರಾಣಿಯರ ಕಥೆಗಳನ್ನು ‘ಸೆರಗಿನ ಕಿಡಿ’ ಎನ್ನುವ ಹೆಸರಿನಲ್ಲಿ ಪುಸ್ತಕವಾಗಿಸಿದ್ದಾರೆ ಡಾ. ರುಕ್ಮಿಣಿ ರಘುರಾಮ್. ಇವರ ಈ ಪೌರಾಣಿಕ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ ಗುರುರಾಜ ಕರಜಗಿ. ಅವರ ಬೆನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ,... “ಶ್ರೀಮತಿ ರುಕ್ಮಿಣಿ ರಘುರಾಮ್ ಅವರ ಈ ಕೃತಿ 'ಸೆರಗಿನ ಕಿಡಿ' ಮಹಾಭಾರತದಂತಹ ಪುರುಷ ಪ್ರಧಾನ ಮಹಾ ಕಾವ್ಯದಲ್ಲಿ ಸ್ತ್ರೀ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನಾವರಣಗೊಳಿಸಿದೆ. ಗಂಗೆಯ ಮೌನ ಬವಣೆ, ಸತ್ಯವತಿಯ ರಾಜ ತಾಂತ್ರಿಕ ಚತುರತೆ, ಅಂಬೆಯ ಆಚಲ ಪ್ರತಿರೋಧ ಹಾಗೂ ದ್ರೌಪದಿಯ ಅಗ್ನಿ ಸದೃಶ ವ್ಯಕ್ತಿತ್ವವನ್ನು ಲೇಖಕರು ಕಟ್ಟಿ ಕೊಟ್ಟಿರುವ ರೀತಿ ಅನನ್ಯವಾಗಿದೆ. ಅಧಿಕಾರ ಮತ್ತು ಯುದ್ಧದ ನೆರಳಿನಲ್ಲಿ ಬದುಕಿದ ಈ ಸ್ತ್ರೀಯರು ಕೇವಲ ನೆಪ ಮಾತ್ರದ ಪಾತ್ರಗಳಲ್ಲ ಬದಲಿಗೆ ಇಡೀ ಕಾವ್ಯದ ಗತಿಯನ್ನು ಬದಲಿಸಿದ ಅದೃಶ್ಯ ಶಕ್ತಿಗಳು. ವಿಧಿಗೆ ಶರಣಾಗದೆ, ಅರಮನೆಯ ಕಟ್ಟು ಪಾಡುಗಳ ನಡುವೆಯೂ ತಮ್ಮ ಬುದ್ಧಿ ಶಕ್ತಿ ಮತ್ತು ಧೈರ್ಯದಿಂದ ಅಸ್ತಿತ್ವವನ್ನು ಉಳಿಸಿಕೊಂಡ ಕುಂತಿ, ಗಾಂಧಾರಿ, ಉಲೂಪಿ ಹಾಗೂ ಉತ್ತರೆಯಂಥ ಪಾತ್ರಗಳ ಜೀವನದ ಸವಾಲುಗಳನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಪುರುಷರ ಅಹಂಕಾರ ಮತ್ತು ಯುದ್ದದ ಕ್ರೌರ್ಯದ ನಡುವೆ ಈ ಮಹಿಳೆಯರು ಅನುಭವಿಸಿದ ಮಾನಸಿಕ ಸಂಘರ್ಷ ಹಾಗೂ ಅವರು ತೋರಿದ ಸಹನೆ ನಮಗೆ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಮಹಾಭಾರತವನ್ನು ಹೆಣ್ಣಿನ ಕಣ್ಣಿಂದ ನೋಡ ಬಯಸುವ ಪ್ರತಿಯೊಬ್ಬರಿಗೂ ೩೫೨ ಪುಟಗಳ ಈ ಕೃತಿ ಒಂದು ಮಾರ್ಗದರ್ಶಿಯಾಗಿದೆ.‌”