ಯಾರಿಗೆಲ್ಲ ನೆನಪಿದೆ ಈ ಹೂವು ಬಿರು ಬಿಸಿಲಲ್ಲಿ ನಗುತ್ತಾ ನಿಂತಿರುವ, ತಪ್ಪದೇ ಈ ಕಾಲಕ್ಕೆ ಅರಳುವ ಹೂವಿದು. ಮರದ ತುಂಬ ಹೂವೆ ಕಾಣಸಿಗುತ್ತೆ. ಮಧ್ಯದಲ್ಲಿ ಒಂದೆರಡು ಎಲೆಗಳು. ಪ್ರಕೃತಿನೇ ಹಾಗೆ ಅಲ್ವಾ ತನ್ನ ಪಾಡಿಗೆ ತನ್ನ ಕರ್ತವ್ಯ ಮಾಡ್ತಾಯಿರುತ್ತೆ. ಯಾರನ್ನೂ ಬೇದ ಭಾವ ಮಾಡೋದಿಲ್ಲ. ಎಲೆಗಳೆಲ್ಲ ಮರೆಮಾಚಿ ಹೂವು ಮೈದುಂಬೊ ಸಮಯ ಬಂತಂದರೆ ಬಸವನ ಹಬ್ಬ ಹತ್ರ ಬಂತು ಅಂತ. ನಾವು ಚಿಕ್ಕವರಿದ್ದಾಗ ಬಸವನ ಹಬ್ಬ ಅಂತಷ್ಟೇ ಗೊತ್ತಿದ್ದು. ಅಂದರೆ ಬಸ್ವಣ್ಣ ಅಂದರೆ ನಮ್ಮ ಎತ್ತಗಳು. ಇಲ್ಲಿ ಎಲ್ಲ ದನಗಳಿಗೆ ಪ್ರಾಮುಖ್ಯತೇ ಏನಿಲ್ಲ ಈದಿನ ಸಂಕ್ರಾಂತಿ ತರಹ, ಬರಿ ಎತ್ತಗಳಿಗೆ ಅಷ್ಟೇ . ಅವಾಗ ನಾಟಿ ಎತ್ತುಗಳು ಜಾಸ್ತಿ ಇರ್ತಿದ್ದು.ಸೀಮೆ ದನಗಳು ಹತ್ರಲ್ಲಿ ಒಂದು ಜೋಡಿ ಇರ್ತಾಯಿತ್ತು. ವಿಶೇಷ ಅಂದರೆ ಬಸವಣ್ಣ ಹುಟ್ಟಿದ ದಿನಾನೇ ಈ ಹಬ್ಬ ಮಾಡ್ತಾರೆ ಅಂತ ಗೊತ್ತಾಗೋ ಕಾಲಕ್ಕೆ ನಾವು ಹೈಸ್ಕೂಲ್ ಮೆಟ್ಟಿಲು ಹತ್ತಿದ್ವಿ. ಸರಿ ಇನ್ನೂ ಈ ಹಬ್ಬದ ದಿವಸ ಎಲ್ಲ ಕಾಲಿಯಾಗುತ್ತೆ ಅಂತ ಊರಲ್ಲಿ ಇರ್ತಿದ್ದ ನಾಲ್ಕೈದು ಹೂವಿನ ಮರಗಳಲ್ಲಿ ಎಲ್ಲರ ಮೊದಲ ಕೆಲಸ ಹೂ ತರುವುದು ಆಗಿತ್ತು.ಹೂವನ್ನ ಬಿಡಿಸಿ ತರೋದೆಲ್ಲ ಅಲ್ಲ, ಕೊಂಬೆಗಳನ್ನೇ ಮುರಿಡ್ಕೊಂಡು ಬರೋದಷ್ಟೇ. ಅಮ್ಮ ಮತ್ತು ಹೆಣ್ಮಕ್ಕಳು ಕ್ಲೀನಿಂಗ್, ಪೂಜೆ ಮತ್ತು ಸಿಹಿ ಮಾಡಿ ನಂತರ ಹೂಗಳಹಾರ ಮಾಡೋದು. ಅಪ್ಪ ಮತ್ತು ಗಂಡು ಮಕ್ಕಳು ಎಲ್ಲ ದನಕರು ಗಳ ಮೈ ತೊಳ್ದು ಎತ್ತುಗಳನ್ನು ಅಲಂಕರ ಮಾಡೋದು.ಕೊಂಬುಗಳಿಗೆ ಬಣ್ಣ, ಮಿಂಚು ಮತ್ತು ಬಲೂನ್ ಕಟ್ಟೋದು. ಅನುಕೂಲವಿದ್ದವರು ಎತ್ತುಗಳ ಮೇಲೆ ಬಣ್ಣಗಳ ಕಲಾಕಾರ ಇರುವ ಹೂದಿಕೆಗಳನ್ನು ಹಾಕ್ತಾಯಿದ್ರು . ಎಲ್ಲ ಎತ್ತುಗಳಿಗೂ ಸಂಜೆ ಒಳ್ಳೆಯ ಮೆರವಣಿಗೆ. ನಂತರ ಕಾಂಪಿಟೇಷನ್ . ಊರು ಸುತ್ತ ಒಂದು ಸುತ್ತು ಯಾವ ಜೋಡಿ ಎತ್ತು ಚೆನ್ನಾಗಿ ಓಡಿ ಬರುತ್ತೆ ಅಂತ. ಈ ಹಬ್ಬದ ಜಾಸ್ತಿ ನೆನಪು ಇರೋದು ಅಜ್ಜಿ ಮನೇಲಿ. ಯಾಕೆಂದರೆ ಬೇಸಿಗೆ ರಜೆದಲ್ಲಿ ಬರ್ತಾ ಇದ್ದಿದ್ರಿಂದ. ಕೆಲವೊಂದು ಸಾರಿ ಯುಗಾದಿಯಿಂದನೇ ಅಜ್ಜಿ ಮನೇಲಿ ಇರ್ತಿದ್ವಿ.ಇನ್ನು ಅಜ್ಜಿ ಮನೇಲಿ ಎರಡು ತರಹದ ಹಾರಗಳು. ಒಂದು ಈ ಕೆಂಪು ಬಸವನ ಹೂವಿಂದು, ಇನ್ನೊಂದು ಬಿಳಿ ಕಣಗಲು ಹೂ ಬರುತ್ತಲ್ಲ, ಅದ್ರದು.   ನಾವೆಲ್ಲ ಚಿಕ್ಕ ಮಕ್ಳು ಅಂದರೆ ಏಳನೇ ತರಗತಿವರೆಗೆ ಅಜ್ಜಿ ಮನೆಗೆ ಜಾಸ್ತಿ ಹೋಗ್ತಾ ಇರ್ತಿದ್ವಿ. ಆಮೇಲೆ ಅಮ್ಮನಿಗೆ ಹೆಚ್ಚು ಸಹಾಯ ಮಾಡೋದು ಅಂತ ಊರಲ್ಲೇ , ಬೇಸಿಗೆ ರಜಾ ಕಳೀತಾ ಇದ್ವಿ. ಬಸವನ ಹೂವು ಶುರುವಾದಾಗಿಂದ ಕೆಳಗೆ ಬಿದ್ದಾ ಅಥವಾ ಕೈಗೆಟುಕೋ ಹೂವು ಮತ್ತು ಮೊಗ್ಗು ತಂದು ವಾರಿಯರ್ಸ್, ಕೋಳಿ ಜಗಳ ಅಥವಾ ರಾಜರಾಣಿ ಆಟ ಅಂತೆಲ್ಲ ಕರಿಯೋ ಆಟ ಆಡ್ತಾ ಇದ್ವಿ . ಇನ್ನೊ ಹಬ್ಬದ ದಿವಸ ನಮ್ಮ ಈ ಆಟಕ್ಕೆ ಸುಗ್ಗಿನೇ, ಏನಿಲ್ಲ ಈ ಮುದ್ದಾದ ಹೂವಿನ ಒಳಗಡೆ ಕಡ್ಡಿ ತರಹ ಮತ್ತು ಅದರ ತುದಿಯಲ್ಲಿ ಒಂದು ಬೀಜದ ತರಹ ಇರುತ್ತೆ. ಪರಾಗದಂಡ ಮತ್ತು ಪರಾಗಕೋಶ ಅಂತಾರೆ. ವಿಶೇಷ ಏನ್ ಹೇಳಿ ಎಸ್‌ಎಸ್ಎಲ್ಸಿ ಪಾಠದಲ್ಲೂ ಹೂವಿನ ಚಿತ್ರ ಅಂದ್ರೆ ಇದೊಂದು ಬೆಸ್ಟ್ ಹೂವು ಎಲ್ಲ ಭಾಗಗಳನ್ನ ಸರಿಯಾಗಿ ತೋರಿಸೋದಿಕ್ಕೆ. ಹಾರ ಕಟ್ಟೋ ಮುಂಚೆ ಮೊಗ್ಗುಗಳು ಅಥವಾ ಸ್ವಲ್ಪ ಅಜ್ಜಿ ಹೂವು ಅಂದ್ರೆ ಇನ್ನೇನು ಬಾಡೋಗಿರೋ ಹೂವು, ಅವ್ಗಳ ಮಧ್ಯೆ ಇರೋ ಈ ಕಡ್ಡಿಗಳನ್ನ ಕಿತ್ಕೊಂಡು ಆಟ ಆಡ್ತಾ ಇದ್ವಿ. ಇಬ್ಬರೂ ಒಂದೊಂದ್ ಕಡ್ಡಿ ತಗೋಬೇಕು. ಎರಡು ಜನ ಬೇಕು ಆಟಕ್ಕೆ ಮಿನಿಮಮ್. ಅದ್ರ ತುದಿಗಳನ್ನ ಲಾಕ್ ಮಾಡೋದು. ಆಮೇಲೆ ಜೋರಾಗಿ ಎಳೆಯೋದು. ಅವಾಗ ಒಬ್ಬರ ತುದಿ ಮುರಿದು ಹೋಗುತ್ತದೆ. ಬೀಜ ಥರ ಇರುತ್ತಲ್ಲ ಅದು. ಅಂದರೆ ಅವರ ಕೋಳಿ ಸತ್ತೋಯ್ತು ಅಂತ . ಮುರ್ದಿರಲ್ವಲ್ಲ ಅವ್ರಿಗೆ ಪಾಯಿಂಟ್ ಅಂಕಗಳು. ಹಾಗೇ ಹತ್ತರಿಂದ ಹದ್ನೈದ್ ಆಟ ಆಡ್ತಿದ್ವಿ ಒಬ್ರು ಜೊತೆ. ಆದ್ದರಲ್ಲಿ ಯಾರು ಗೆಲ್ಲ್ತಾರೋ ಅವರು ಎಲ್ಲರ ಜೊತೆ. ಎಲ್ಲರ ಹತ್ರಗೆದ್ದವರ ಮುಖದಲ್ಲಿನ ಪ್ರಭೆನೆ ಬದ್ಲಾಗಿರ್ತಿತ್ತು ಆ ದಿನ. ಇಲ್ಲಿ ಟ್ರಿಕ್ಸ್ ಅಂದರೆ ಇನ್ನೇನು ಅರಳಬೇಕು ಅನ್ನೋ ಮೊಗ್ಗುಗಳ ಒಳಗೆ ಸಿಕ್ಕ ಕಡ್ಡಿಗಳು ಸ್ಟ್ರಾಂಗ್ಆಗಿರ್ತಿತ್ತು . ಮತ್ತೆ ಟೈಮಿಂಗ್ , ಹಿಡಿಯೋ ರೀತಿ ,ಎಳೆಯೋದು ಎಲ್ಲದೂ ಮ್ಯಾಟರ್ ಆಗ್ತಾಯಿತ್ತು ಅದು ಬೇರೆ. ಕಾಂಪಿಟೇಷನ್ ದೇವಸ್ಥಾನದಿಂದ ಹೊರಟ ಜೋಡಿ ಒಂದು ಪೂರಾ ಸುತ್ತು ಊರನ್ನು ಸುತ್ತಿ ಮುಗಿಸಿ ಬಂದು ಮತ್ತೆ ದೇವಸ್ಥಾನದತ್ತ ಯಾರ ಜೋಡಿ ಮೊದಲು ಬರ್ತಾರೆ ಅನ್ನೋದಾಗಿತ್ತು. ಸಂಜೆ ಆಗಿದ್ರಿಂದ ನಾವು ಊಟ ಎಲ್ಲ ಮುಗಿಸಿ ರೆಡಿಯಾಗಿ ದೇವಸ್ಥಾನದ ಹತ್ರ ಹೋದರೆ ಪಾನಕ ಕೋಸಂಬರಿ ಗೆ ಕಾಯ್ತಾ ಇರ್ತಿದ್ವಿ. ಎತ್ತು ಹೊರಡೋ ಸಮಯ ಆಗ್ಲೆ ಆಗಿದ್ರೆ ಅವ್ಗಳ ಜೊತೆ ಒಂದಿಷ್ಟು ದೂರ ಓಟ. ಕನಿಷ್ಠ ಎರಡು ಕಿಲೋಮೀಟ್ರ್ಗಳು ಎತ್ಗಳು ಜೊತೆ ಚಿನ್ನರ ಓಟ ಇರೋದು. ಆಮೇಲೆ ಸುಸ್ತು. ಸ್ವಲ್ಪ ದೊಡ್ಡ ಮಕ್ಳು ಇನ್ನೊಂದು ಪಾನಕ ಕೌಂಟರ್ ತನಕ ಓಡ್ತಾಯಿದ್ವಿ. ಎತ್ತುಗಳು ಮತ್ತು ಅವರ ಯಜಮಾನರ ಬಲ ಪ್ರದರ್ಶನ ಮುಗಿದ ಮೇಲೆ ಎಲ್ಲರೂ ಮನೆ ಕಡೆ, ಕ್ಯಾಮ್ರಾ ಇದ್ದೋರು ರೀಲ್ಸ್ ಲೆಕ್ಕ ಇಟ್ಟು ಒಂದಿಷ್ಟು ಫೋಟೊಗಳು ಇವಾಗಿನ ರೀಲ್ಸ್ ಅಲ್ಲ ಕ್ಯಾಮ್ರಾ ರೀಲ್ಸು ಮೊಬೈಲ್ ಇರಲಿಲ್ಲವಲ್ಲ ಎಲ್ಲ ಬೇಗ ಮುಗಿತಿತ್ತು ಕತ್ತಲಾಗೋ ಅಷ್ಟರಲ್ಲಿ ಮನೆ ಕಡೆ. ಆದರೆ ಪ್ರತಿಯೊಬ್ಬರೂ ಎಲ್ಲ ಎತ್ತಿನ ಜೋಡಿಗಳ ಅಲಂಕಾರವನ್ನು ಕಣ್ಣಿಗೆ ತುಂಬಿಕೊಂಡು ಮನೆಗೆ ಮರಳೋರು. ಮಧ್ಯಾನದ ಹಬ್ಬದ ಊಟ ಇರೋದು ಇನ್ನೂ ಬೇಸಿಗೆಗಾಲ ಅಜ್ಜಿ ಊರಲ್ಲಿ ಕೆಲಸ ತುಂಬ ಇರ್ತ ಇರ್ಲಿಲ್ಲ, ಹಪ್ಪಳ ಮಾಡ್ಕೊಳೋದು, ಮಳೆಗಾಲಕ್ಕೆ ಹಿಟ್ಟು ಕಾಳು ರೆಡಿ ಮಾಡ್ಕೊಳೋದು ಅಷ್ಟೇ . ಹಾಗಾಗಿ ಮೂರುರರಿಂದ ನಾಲ್ಕು ತಾಸು ಎಲ್ಲರೂ ಎಲ್ಲ ಎತ್ತುಗಳ ಜೋಡಿಗಳ ಬಗ್ಗೆ ವಿಮರ್ಶೆ ನಡೆಸ್ತಾ ಇತ್ತು. ಅದ್ರ ಬಗ್ಗೆ ಹೇಳೋ ಒಬ್ಬೊಬ್ಬರು ಒಂದೊಂದು ವಾಕ್ಯದಲ್ಲಿ ವರ್ಣಿಸೋ ರೀತಿನೇ ಬೇರೆ. ಇನ್ನು ನಮ್ಮೂರಲ್ಲಿ ಒಂದರಿಂದ ಎರಡು ಗಂಟೆ ಕಾಲ ಅಷ್ಟೆ. ಯಾಕೆಂದರೆ ಮೋಟಾರ್ ಬಾವಿಗಳು ಜಾಸ್ತಿ. ಬೇಸಿಗೆಯಲ್ಲೂ ತರಕಾರಿ ಬೆಳೆಯೋರು ಒಂಥರ ಬಿಜಿ. ಬೆಳಿಗ್ಗೆ ಅವ್ರಿಗೆ ಏಳು ಗಂಟೆಗೆ ಮುಯ್ಯಾಳು ಹೋಗ್ಬೇಕು ಅಂತಲೋ ಇಲ್ಲ ಅವರ ಮನೆಗೆ ಅವ್ರದ್ದೇ ಮನೇದು ಯಾವ್ದಾದರೂ ತರಕಾರಿ ಬಿಡಿಸೋಕೆ ಬೇಸಿಗೆ ಅಲ್ಲವಾ ಬೆಳಿಗ್ಗೆನೇ ಬೇಗ ಹೋಗ್ಬೇಕಂತ ಮನೆ ಕಡೆಗೆ ಕಾಲು ತೆಗೆವೋರು. ಏನೇ ಅನ್ನಿ, ಅವಾಗಿನ ನಾಟಿ ದನಗಳನ್ನ ನೋಡೋಕ್ಕೆ ಖುಷಿ. ಅವುಗಳ ಅಲಂಕಾರ, ಎಲ್ಲರ ಮನೇಲಿ ಒಂದು ಜೋಡಿ ಎತ್ತಿನ ಫೋಟೋ ಅಷ್ಟೇ ಪ್ರೀತಿ. ನಮ್ಮ ಪ್ರಕೃತಿ ವರದಿಂದ ಬೆಯ್ಯೋ ಬೇಸಿಗೆಯಲ್ಲಿ ಮರಗಳು ಚಿಗುರಿರ್ತಿತ್ತು, ಉಣಸೆ ಮರ ಹೊಂಗೆ ಮರದ ತೋಪುಗಳು ಅದ್ರ ಕೆಳಗೆ ತಂಪು ಗಾಳಿ ಜೋಕಾಲಿ, ಗೋಲಿ, ಅಳಿಗುಳಿ ಮನೆ, ಚೌಕ ಬಾರ, ಕುಂಟಪಿಲ್ಲೆ['ಅಮಟೆ' ಅರ್ಥ ಕಾಲೇಜು ಗೆ ಹೋದ್ಮೇಲೆ ಗೊತ್ತಾಯ್ತು ಅದು am I right ಅಂತ] , ಆಣೆಕಲ್ಲು, ಕಲ್ಲು ಕುಟುಕುಟು , ಚೈನ್ ಕಟ್ಟುವ ಆಟ, ಗಿಲ್ಲಿ ದಾಂಡು ಎಕ್ಸೆಟ್ರಾ ಎಕ್ಸೆಟ್ರಾ ಹೀಗೆ ಎಲ್ಲ ಆಟಗಳಿಗೆ ಒಳ್ಳೆ ಜಾಗ ಇರ್ತಿತ್ತು. ಬೇಸಿಗೆಲಿ ನೀರು ತುಂಬೋದೆ ಮಜ, ಬಾವಿ ಅಥವಾ ಒತ್ತೋ ಬೋರ್ವೆಲ್ ನಿಂದ ನೀರು ತುಂಬಿಸೋದು ಅಂಡೆ, ಕಡಾಯೆಗಳಿಗೆ ಎಲ್ಲದಕ್ಕೂ. ಅರ್ಧ ಬಟ್ಟೆಗಳು ನೆನಸ್ಕೊಂಡಿರ್ತಿದ್ವಿ ಆ ಶೆಖೆಗೆ ಬೇಕಂತನೇ. ಆದರೆ ಯಾರೂ ಬಯ್ತಾ ಇರಲಿಲ್ಲ. ಬೇಸಿಗೆ ಅಲ್ವ, ಶೀತ ಆಗೋಲ್ಲ ಅಲ್ಲ.  ಇನ್ನು ಹೈ ಸ್ಕೂಲ್ ಹೋಗೋಕ್ಕೆ ಶುರು ಮಾಡಿದಾಗ ಒಂದು ವಾರಕ್ಕೆ ಅಷ್ಟೆ ಅಜ್ಜಿ ಮನೆ ಹೋಗ್ತಾ ಇದ್ವಿ.ಇನ್ ಮಿಕ್ಕಿದ ರಜೆಯೆಲ್ಲ ಊರಲ್ಲೇ ಮನೆಲೇ ಕಳಿಯಬೇಕಿತ್ತು. ಬೇಸಿಗೆ ಅಂದಾಗ ನೂರು ನೆನಪುಗಳು ಅದರಲ್ಲಿ ಮುಖ್ಯವಾಗಿದ್ದು ಮಲ್ಲಿಗೆ ಹೂವಿನ ಕಾಂಪಿಟೇಷನ್. ನಮ್ಮ ಊರಲ್ಲಿ ಇದ್ದಾಗ, ಹೊಲದ ಮನೆ ಹತ್ರ ಸೂಜಿ ಮಲ್ಲಿಗೆ ಇತ್ತು ಅದನ್ನ ಹಬ್ಬಿಸೋದಕ್ಕೆ ಅಂತ ಆಲ್ವಾಣದ ಮರ ಅಂತ ಬರ್ತಿತ್ತು. ಅದಕ್ಕೆ ಹಬ್ಬಿಸೋದು. ಸುಮಾರು ಹತ್ರಿಂದ ಹದ್ನೈದಡಿ ಎತ್ತರಕ್ಕೆ ಮಲ್ಲಿಗೆ ಗಿಡಾನು ಇರ್ತಿತ್ತು. ನಾವೂ ಕಾಂಪಿಟೇಷನ್ನಲ್ಲಿ ಬೆಳಿಗ್ಗೆನೇ ಬೇಗ ಎದ್ದು ಏಣಿ ಹಾಕೊಂಡು ಮಲ್ಲಿಗೆ ಬಿಡಿಸೋ ಸಾಹಸ. ಎಷ್ಟು ಹೇಳಿ ಒಬ್ಬೊಬ್ರು ಎರಡರಿಂದ ಮೂರು ಮಾರಾಗವಷ್ಟು ಬಿಡಿಸೋದು.ತಂಗಳು ಪೆಟ್ಟಿಗೆ ಎಲ್ಲ ಇರ್ಲಿಲ್ಲ,ಅವತ್ತಿನ ಹೂವನ್ನ ಆವತ್ತು ಕಟ್ಟಿ ಮುಡ್ಕೊಳೋದು ಜಡೆಯುದ್ದಕ್ಕೂ ,ಪಕ್ಕದ ಮನೆಯವರಿಗೆ,ಕಟ್ಟುವಾಗ ದಾರೀಲಿ ಗೊತ್ತಿರೋರು ಹೊಲದ ಕಡೆ ಹೋಗ್ತಾ ಇದ್ರೆ ಅವ್ರ್ನ ಕರೆದು ಕೊಡೋದು, ಮತ್ತೊಂದಿಷ್ಟು ದೇವರಿಗೆ.   ಒಂದ್ಸಲ ಅಮ್ಮ ಅವರ ತಂಗಿ ಮನೆಗೆ ಅಂತ ಹೋದಾಗ ಅದು ಬೇಸ್ಗೆ ರಜೆಯಲ್ಲೆ, ನನ್ನ ಕೂದಲು ಬಾಫ್ ಕಟ್ ಆಗಿತ್ತು. ಒಂದು ಹೇರ್ ಬ್ಯಾಂಡ್ ಹಾಕ್ತಾಯಿದ್ದೆ ಅಷ್ಟೆ ಮೇಲಿಂದ, ಆದರೆ ಅದಕ್ಕೂ ಅಪ್ಪಾಜಿಗೆ ಹೂವು ಕಟ್ಟೋಕೆ ಬರ್ತಾಯಿರಲಿಲ್ಲ ಅಂತ ಸೂಜಿಯಿಂದ ಪೋಣಿಸಿ ದಟ್ಟ ಹಾರ ಮಾಡಿ ಇಷ್ಟೂ ಉದ್ದ ಮುಡಿಸೋರು, ಅದೊಂದು ಫೋಟೋ ಇರಬೇಕಿತ್ತು. ನಂಗೆ ಯಾವಾಗಲು ಹಾಗೇ ಅನಿಸುತ್ತೆ. ಅಪ್ಪಾಜಿಯ ಹತ್ರ ಕ್ಯಾಮ್ರಾ ಇದ್ದರೂ ಬಳಸ್ತಾ ಇದ್ದಿದ್ದು ಟ್ರಿಪ್ ಅಥವಾ ಹಬ್ಬ ಅಥವಾ ಯಾರಾದರೂ ನೆಂಟರು ಬಂದಾಗ ಮೆಮೋರಿಸ್ಗೆ ಅಂತ ಅಷ್ಟೆ.    ಇದೊಂದು ಹೇಳ್ಲೆಬೇಕು. ಬೇಲದ ಹಣ್ಣಿನ ಮರ ಆಗ ಊರಿಗೆ ಇದ್ದಿದ್ದು ಒಂದೇ ಮರ ಮೇಲಿನ ಕೇರಿ ಮನೆಯ ಹಿತ್ತಲ್ಲಲ್ಲಿ. ಬೇಲದ ಮರದ ಹಣ್ಣಿಗೆ ಅಂತ ಬೇಲಿಯಿಂದ ಆಚೆ ಬಿದ್ದಿದ್ರೆ ಅಂತ ಒಂದ್ಸಲ ಹುಡುಕಿ ತರ್ತಾಇದ್ವಿ. ಪೂರ್ತಿ ಬೇಲಿ ಇರೋದ್ರಿಂದ , ಅದರಿಂದ ಹೊರಗಡೆ ಬಂದಿದ್ದ ಕೊಂಬೆಗಳಿಂದ ಬಿದ್ರೆ ಅದೇನಾದರೂ ಸಿಗತ್ತಾ ಅಂತ ಕಾಯ್ದು ನೋಡಿ ತರ್ತಾಇದ್ವಿ. ಇಲ್ಲ ಸಿಕ್ಕಿಲ್ಲ ಅಂತಂದರೆ ಆ ಮನೆಗೆ ತಾತ ಇದ್ದರು ಒಬ್ಬರು. ಅವ್ರಿಗೆ ಒಂದಚ್ಚು ಬೆಲ್ಲ ಕೊಟ್ರೆ ಒಂದು ದೊಡ್ಡ ಹಣ್ಣು ಕೊಡೋರು. ತುಂಬ ಚೆನ್ನಾಗಿರೋ ಹಣ್ಣು ಕೊಡೋರು. ಕೊನೆಗೆ ಎಕ್ಕಿ ತಂದಿದ್ದ ಒಂಗೆ ಮರದ ಬೀಜಗಳನ್ನ ಬಿಡಿಸಿ ಮಾರಿ ಸಿಕ್ತಿತ್ತು ಅಲ್ಲ, ಐವತ್ತೈಸಾ ಹಾಗೆ, ಅದನ್ನು ಕೊಟ್ಬಿಟ್ಟು ಬೇಲದ ಹಣ್ಣು ತಂದು ತಿಂತಾ ಇದ್ವಿ.ಹೀಗೆ ಬೇಸಿಗೆ ರಜೆದಿನ ಒಂದೊಂದು ಒಂದು ಪುಸ್ತಕನೇ ಬರ್ದು ಬಿಡ್ತೀನಿ ಬಿಟ್ಟರೆ ನನ್ನ.   ದೊಡ್ಡೋರಾಗ್ತಾ ಬಸವ ಜಯಂತಿ ದಿನಾನೇ ಬಸವನ ಹಬ್ಬ ಅಂತ ಅರಿವಿಗೆ ಬರ್ತಾ ಹೋಯಿತು. ಜೊತೆಗೆ ಕೆಲವೊಂದು ಮಠದಿಂದ ಸ್ವಾಮಿಜಿಗಳು ಊರಿಗೆ ಬರ್ತಾ ಇದ್ರು.ಎರಡರಿಂದ ಮೂರು ದಿನ ಪ್ರವಚನ ಕೊಡ್ತಾಇದ್ರು. ಬಸವಣ್ಣನ ಬಗ್ಗೆ ಜಾಸ್ತಿ ವಿಚಾರದ ಜೊತೆ ಒಂದೊಂದು ಫೋಟೋವನ್ನು ಮನೆಗ್ ಬಂತು. ಇದೆಲ್ಲ ಆಗುವಾಗ ನಮ್ಮ ಪ್ರೈಮರಿ ಸ್ಕೂಲ್ ಟೀಚರ್ ಹೇಳಿದ ಬಸವಣ್ಣ ಅವರ ಬಗ್ಗೆ ಪಾಠ,ವಚನಗಳು ಜಾಸ್ತಿ ನೆನಪಾಗ್ತಾ ಇದ್ದು.ಅವಾಗಿಂದ ಬಸವಣ್ಣ ಓಟದ ಜೊತೆ ಬಸವಣ್ಣನವರ ಫೋಟೋಗೆ ನೈವೇದ್ಯ ಶುರುವಾಯಿತು. ಕಾಲೇಜ್ಗೆ ಹೋಗುವಾಗ ಹಬ್ಬಗಳ ದಿನ ವಚನ, ಭಜನೆಗಳ ಸತ್ಸಂಗಗಳ ಜೊತೆ ಸಮಯ ಕಳದ್ವು. ಇದೆಲ್ಲ ಆಗಿ ಕೆಲಸಕ್ಕೆ ಬೆಂಗ್ಳೂರಿಗೆ ಕಾಲು ಇಟ್ಟೆ, ಬೇರೆ ವಿಶೇಷನೆ ನಮ್ಮೂರಲ್ಲಿ ಮಾಡ್ತಾ ಇದ್ದ ಹಬ್ಬಗಳ ಜೊತೆ ಹತ್ತು ಸೇರ್ಕೊಡಿದೆ ಇಲ್ಲಿ. ಇನ್ನೊಂದು ಸಲ ಹೇಳ್ತೀನಿ ವಿವರವಾಗಿ ಅದ್ರದೆಲ್ಲ. ಬಸವನ ಹಬ್ಬದ ದಿನ ಅಕ್ಷಯ ತೃತೀಯ ಆಚರಣೆ ಜಾಸ್ತಿ ಆಗ್ತಿತ್ತು ಇಲ್ಲಿ. ನಾವು ಕುರಿಗಳ ತರಹನೆ ಕೆಲಸ ಸೇರಿದ ಎರಡು ಮೂರು ವರ್ಷ ಸುಮ್ಮನಿದ್ದೂ ಎಲ್ಲರ ಥರ ಆ ದಿನ ಜುವೇಲರ್ ಶಾಪ್ ಗೆ ಪಾದಾರ್ಪಣೆ ಶುರುವಾಯಿತು. ಇನ್ನು ನೆನ್ಪಿದೆ ೨೦೧೨-೧೩ ಇರಬೇಕು. ಒಂದು ಮಧ್ಯಮ ವಯಸ್ಸಿನ ಜೋಡಿ ಬಂದೋರು ಎಲ್ಲರಿಗು ವಿಶ್ ಮಾಡಿ ಮೊನ್ನೆ ತಾನೇ ದುಬೈಯಿಂದ ಬಂದೆ. ಈ ಕಡೆಯಿಂದ ಒಂದು ಕಾಗೆ ಬಂಗಾರ ನೆಕ್ಲೆಸ್ ಹಾಕ್ಕೊಂಡು ಹೋಗಿ ಅದೇತರಹದ್ ತಂದೆ ನೋಡಿ, ಹಾಗಾಗಿ ಅದು ಇವಾಗ ಯಾವ್ದೂ ಡಿಸೈನ್ ಮಾಡಿಸೋ ಯೋಚನೆ ತಲೆಲ್ಲಿಲ್ಲ, ಹಾಗಾಗಿ ಮುನ್ನೂರಿಂದ ನಾನೂರು ಗ್ರಾಂದು ಒಂದು ಗಟ್ಟಿ ತಗೋಣಣ ಅಂತ ಬಂದಿದ್ದೀವಿ ಅಂತ ಹೇಳ್ತಿದ್ರು. ಇನ್ನೊಂದ್ಸಲ ಡಿಸೈನ್ ಬೇರೆ ಬಂದಾಗ ಮಾಡಿಸಿದ್ರಾಯ್ತು ಅಂತ ಹೇಳ್ತಾ ಇದ್ದರು. ನನ್ನ ಕಿವಿಗಳು ಪಾವನ ಆಗಿಬಿಟ್ಟಿತ್ತು ಅವತ್ತು.   ಬಸವ ಜಯಂತಿ ದಿನ ಇನ್ನೂ ಮುಂದಕ್ಕೆ ಬಸವ ಜಯಂತಿ ದಿನ ಯಾವ ಬಾಗಿಲಾದರೂ ಗೃಹಪ್ರವೇಶ ಮಾಡಬಹುದು, ಯಾವ ಟೈಮಲ್ಲಾದರೂ ಏನಾದರೂ ಮಾಡಬಹುದು ಅಂತ ಇರೋದ್ರಿಂದ ಮತ್ತು ಯಾವುದೇ ಕಾಲದ ರಿಸ್ಟ್ರಿಕ್ಷನ್ ಇರಲ್ಲ ಅಂತ ಜಾಸ್ತಿ ಗೃಹ ಪ್ರವೇಶಗಳು ಇನಾಗ್ರೇಶನ್ಗಳು ನಡೀತಾ ಇರೋದರಿಂದ ಫ್ರೆಂಡ್ಸ್ ಫ್ಯಾಮಿಲಿ ಸಮಾರಂಭಗಳು ಅಟೆಂಡ್ ಮಾಡೋಕ್ಕೆ ಶುರು ಮಾಡಿದೆ.   ಸೋಷಿಯಲ್ ಮೀಡಿಯಾ ಬಂದಮೇಲೆ ಹಬ್ಬದ ದಿನ ಯಾರೂ ಹಾಕದೆ ಇರೋ ಬಸವಣ್ಣ ಅವರ ವಚನ ಹುಡುಕಿ ಕನ್ನಡ ಬರದೇ ಇರೋ ಫ್ರೆಂಡ್ಸ್ ಕೊಲೀಗ್ಸ್ ಗೆ ಗೊತ್ತಾಗಲಿ ಅಂತ ಇಂಗ್ಲೀಷಲ್ಲಿ ಇಂಗ್ಲೀಷ್ಗೆ ಟ್ರಾನ್ಸ್ಲೇಟ್ ಮಾಡಿ ಮತ್ತೆ ಕನ್ನಡದಲ್ಲಿ ಎರಡೂನು ಹಾಕಿ ನಮ್ಮ ಕರ್ನಾಟಕದ ಬಗ್ಗೆ ಎಲ್ಲ ಕಡೆ ಗೊತ್ತಾಗ್ಲಿ ಅಂತ ಹಾಕೋ ಅಭ್ಯಾಸ ಶುರುವಾಯ್ತು. ಇನ್ನೂ ಎಷ್ಟೊಂದು ವಚನಗಳ ಆ್ಯಪ್ಗಳು ಬಂದಾಗೆಲ್ಲ ಅದೆಲ್ಲ ಇನ್ಸ್ಟಾಲ್ ಮಾಡಿ ಓದಿ ಓದಿ ಬಸವಣ್ಣ ಅವರದು ತತ್ವಗಳನ್ನು ತಿಳ್ಕೊಳೋಕ್ಕೆ ಶುರು ಮಾಡಿದ್ವಿ. ಇನ್ನು ನ್ಯೂಸ್ ಚಾನೆಲ್ ಗಳು ಒಂತರ ಮಾರಕ ಇನ್ನೊಂಥರ ಪ್ರೇರಕ , ಈ ದಿನ ಎಲ್ಲರ ಗಮನ ಸೆಳಿತಾರೆ, ಯಾರು ಹೇಗೆ ಆಚರಣೆ ಅಥವಾ ಕಾರ್ಯಗಳನ್ನ ಆರಂಭ ಮಾಡಿದ್ರು ಅನ್ನೋದ್ಕಿಂತ ಎಲ್ಲಾದ್ರೂ ಒಂದ್ ಚೂರು ಭಂಗ ಆಗಿದ್ರೆ ಅದನ್ನ ಇಟ್ಕೊಂಡು ದಿನವೆಲ್ಲ ಕುಯ್ಯೋದು. ಹಾಗೆ ನಮ್ಮ ಜನ ಎಲ್ಲಿ ಎಷ್ಟಾದರೂ ಯುದ್ಧ ಆಗ್ಲಿ ಚಿನ್ನ ದ ದರ ಮೈಲು ದಾಟಲಿ ಅವತ್ತಿನ ದಿನ ಚಿನ್ನ ಬೆಳ್ಳಿ ಕೊಳ್ಳೋದೇ. ಒಂದು ರೀತಿ ಸೇವಿಂಗ್ಸ್ ಒಳ್ಳೆಯದೇ ಆದ್ರೆ ಚಟ ತರಹ ಆಗಿರಬಾರದು ಅಷ್ಟೆ.   ಇವಾಗ ಎರಡು ಸಾವಿರದ ಇಪ್ಪತಾರು. ಇವಾಗಿನ ನನ್ನ ಕಥೆ ಕೇಳ್ತೀರಾ? ಅಕ್ಷಯ ತೃತಿಯ ದಿನ ಏನೇ ಮಾಡಿದರೂ ದುಪ್ಪಟ್ಟಾಗುತ್ತೋ ಅನ್ನೋ ಕಾನ್ಸೆಪ್ಟ್ ಗೊತ್ತಿರೋದ್ರಿಂದ, ಪೂಜೆ, ದ್ಯಾನ ಮತ್ತು ದಾನಕ್ಕೆ ಕಡೆ ತಿರ್ಗಿದೆ.ಮತ್ತು ಬಸವಜಯಂತಿ ದಿನ ಅವ್ರ ಮೂಲ ವಚನ ಕಾಯಕವೇ ಕೈಲಾಸ, ಸಮಾಜದಲ್ಲಿ ಸಮಾನತೆ ಇರಬೇಕು, ಇದನ್ನೆಲ್ಲ ಅಳವಡಿಸ್ಕೊಂಡು , ಚಂದನ ವಾಹಿನಿಯಲ್ಲಿ ೧/೨ ಗಂಟೆ ವಾರ್ತೆಗಳ ವಿವರ ಕೇಳಿ ಯಾರು ಹೇಗೆ ಹೇಳಿದ್ರು ಅಂತ ಕಿವಿಗೆ ಹಾಕೊಂಡು ಆರಾಮಾಗಿ ಇರೋದಷ್ಟೇ.    ಯಾವಾಗಲೂ ಬಸವ ಜಯಂತಿ ಮತ್ತು ಅಕ್ಷಯ ತೃತಿಯೆರಡೂ ಒಟ್ಟೊಂದೇ ದಿನ ಇರ್ತಿತ್ತು. ಈ ವರ್ಷ ಮಾತ್ರ ಮುಹೂರ್ತದ ಪ್ರಕಾರ ಎರಡೂ ಬೇರೆ ಬೇರೆ ದಿನ ಬಂದಿರೋದ್ರಿಂದ ಇಷ್ಟು ಕಥೆ ನೆನಪಾಯಿತು ನನಗೆ. ನಿಮ್ಮ ಬಸವಜಯಂತಿ,ನಿಮ್ಮ ಅಕ್ಷಯ ತೃತಿಯ ಹೇಗಾಯ್ತು ಅನ್ನೋದನ್ನು ಎಲ್ಲರೂ ಹೇಳಿ.